ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಅತಿಯಾದ ಒತ್ತಡ ಪ್ರಮುಖ ಕಾರಣ- ಮೀರಾ ಸಕ್ಸೇನಾ

human_rights_commission_president: ವಿಶ್ರಾಂತಿ ರಹಿತ ಕರ್ತವ್ಯ ಹಾಗೂ ಅತಿಯಾದ ಒತ್ತಡದಲ್ಲಿ ಸೇವೆ ಸಲ್ಲಿಸುವ ಪರಿಸ್ಥಿತಿ, ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಮೀರಾ. ಸಿ. ಸಕ್ಸೇನಾ ಅವರು ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆ, ಗ್ಲೋಬಲ್ ಕನ್ಸನ್ ಇಂಡಿಯಾ, ಅಕಾಡಮಿ ಆಫ್ ಗಾಂಧಿಯನ್ ಸ್ಟಡೀಸ್, ಕೇರ್, ವನಮಿತ್ರ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರದಂದು ಪೊಲೀಸ್ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಮಾನವ ಹಕ್ಕು, ಲಿಂಗತ್ವ ಸಮಾನತೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕಾನೂನು ಅರಿವು ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರ ಮಾತನಾಡಿದರು.
ಎರಡನೆ ಮಹಾಯುದ್ಧದ ನಂತರ ವಿಶ್ವಸಂಸ್ಥೆಯ ಆಶಯದಂತೆ ಮಾನವ ಹಕ್ಕುಗಳನ್ನು ರಕ್ಷಿಸಲು ಭಾರತದಲ್ಲಿ ೧೯೯೩ ರಲ್ಲಿಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ೨೦೦೭ ರಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆಯಾಗಿದ್ದು, ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಇದು ಅಸ್ತಿತ್ವಕ್ಕೆ ಬಂದಿಲ್ಲ. ನಾಗರೀಕರ ಮೇಲೆ ವಿನಾಕಾರಣ ನಡೆಯುವ ದೌರ್ಜನ್ಯ ಹಾಗೂ ಯಾವುದೇ ವ್ಯಕ್ತಿ ಗೌರವಯುತ ಜೀವನ ನಡೆಸುವ ಹಕ್ಕಿನ ಉಲ್ಲಂಘನೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಆದರೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಇಲಾಖೆಯ ಮೇಲೆಯೇ ಬರುತ್ತವೆ. ನಮ್ಮನ್ನು ನೋಡಿದರೆ ಜನ ಹೆದರಬೇಕು ಎನ್ನುವ ಮನೋಭಾವ ಕೆಲ ಪೊಲೀಸರಲ್ಲಿ ಇದೆ. ಠಾಣೆಯಲ್ಲಿ ಅನಗತ್ಯ ದೌರ್ಜನ್ಯ, ವಿಚಾರಣೆ ನೆಪದಲ್ಲಿ ವ್ಯಕ್ತಿಗಳಿಗೆ ಕಿರುಕುಳ, ಹಲ್ಲೆ, ಲಾಕಪ್ ಡೆತ್‌ನಂತಹ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ವರದಿಯಾಗುತ್ತವೆ. ಕಳ್ಳತನ, ದರೋಡೆ, ಕೊಲೆ ಮುಂತಾದ ದೂರುಗಳ ಬಗ್ಗೆ ಸಾರ್ವಜನಿಕರು, ಸಮಾಜ, ಜನಪ್ರತಿನಿಧಿಗಳು, ಮಾಧ್ಯಮ, ಸರ್ಕಾರ ಹೀಗೆ ಎಲ್ಲೆಡೆಯಿಂದ ಪೊಲೀಸರ ಮೇಲೆ ಒತ್ತಡ ಬರುವುದು ಸಹಜ. ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಸರದಲ್ಲಿ ಫಲಿತಾಂಶ ನೀಡುವ ಧಾವಂತದಲ್ಲಿ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ತಪ್ಪುಗಳು ಕೂಡ ಆಗುತ್ತವೆ. ಹೀಗೆ ಒತ್ತಡದಲ್ಲಿ ತಪ್ಪೆಸಗಿದರೂ, ಅದರ ಹೊಣೆಯನ್ನು ಪೊಲೀಸರೇ ಹೊರಬೇಕಾಗುತ್ತದೆ. ಆದರೆ, ’ಬನ್ನಿ, ಕುಳಿತುಕೊಳ್ಳಿ, ಟೀ ಕುಡಿಯಿರಿ, ನೀವು ನಿಜವಾಗಲೂ ಕಳ್ಳತನ ಮಾಡಿದ್ದೀರಾ ? ಎನ್ನುವ ವಿಚಾರಣೆ ಶೈಲಿಗೆ ಕಳ್ಳರಿಂದ ಸತ್ಯಾಂಶ ಬರಿಸಲು ಸಾಧ್ಯವಿಲ್ಲ. ಆದರೆ ಪೊಲೀಸರು ಪರಿಸ್ಥಿತಿ ಕೈಮೀರಿ ಹೋಗದಂತೆ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಮಾನವ ಹಕ್ಕುಗಳು, ಪೊಲೀಸರ ಕರ್ತವ್ಯ ಕುರಿತಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಗ ಆಯೋಜಿಸುತ್ತಿದೆ. ಹೊಸ ಕಾನೂನುಗಳು, ಹಾಗೂ ಕಾಲ ಕಾಲಕ್ಕೆ ಆಗುವ ತಿದ್ದುಪಡಿಗಳ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ಸಮರ್ಪಕವಾಗಿ ದೊರೆಯುವ ವ್ಯವಸ್ಥೆ ಆಗಬೇಕು. ಯಾವುದೇ ವ್ಯಕ್ತಿಯನ್ನು ಯಾತಕ್ಕಾಗಿ ಹಾಗೂ ಎಲ್ಲಿಗೆ ಆತನನ್ನು ವಿಚಾರಣೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಆ ವ್ಯಕ್ತಿಗೆ ಹಾಗೂ ಆತನ ಕುಟುಂಬಕ್ಕಿದೆ. ಆದರೆ, ಪೊಲೀಸ್ ವ್ಯವಸ್ಥೆಯಲ್ಲಿ ನಡೆಯುತ್ತಿರುವುದೇ ಬೇರೆ. ಮಧ್ಯರಾತ್ರಿ ಬಂದು, ಹೇಳದೆ, ಕೇಳದೆ, ಕುಟುಂಬದವರಿಗೂ ಮಾಹಿತಿ ನೀಡದೆ ಅಪಹರಣ ಶೈಲಿಯಲ್ಲಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗುವುದು ಸರಿಯಲ್ಲ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿವೆ. ಆದರೆ ಪೊಲೀಸರು ನ್ಯಾಯ ಕೊಡಿಸುವ ಬದಲು ರಾಜಿ ಸಂಧಾನದ ಮೊರೆ ಹೋಗುವುದು ಸರಿಯಲ್ಲ. ಸಿವಿಲ್ ಪ್ರಕರಣಗಳು, ಕಾರ್ಮಿಕ, ಕೌಟುಂಬಿಕ ಹೀಗೆ ಪ್ರತಿಯೊಂದು ವಿಷಯಗಳ ಬಗ್ಗೆ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಹೇಳಿದರು.
ಸಹಾಯವಾಣಿ ಸ್ಥಾಪನೆ : ಜೀತದಾಳು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿಗಳು, ಕೆಲವೆಡೆ ರಾಜಾರೋಷವಾಗಿ ನಡೆದರೆ, ಕೆಲವೆಡೆ ಕದ್ದುಮುಚ್ಚಿ ಈಗಲೂ ಚಾಲ್ತಿಯಲ್ಲಿದೆ ಎನ್ನುವ ದೂರುಗಳಿವೆ. ಉತ್ತರ ಕರ್ನಾಟಕದಲ್ಲಿ ಈ ಪ್ರಕರಣಗಳು ಹೆಚ್ಚು. ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪ್ತಿಗೆ ಬರುತ್ತವೆ. ಇದೀಗ ರಾಜ್ಯ ಮಾನವ ಹಕ್ಕುಗಳ ಆಯೋಗವು, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಸಹಾಯವಾಣಿಯನ್ನು ಸ್ಥಾಪಿಸಿದ್ದು, ೧೮೦೦-೪೨೫೨-೩೩೩೩ ಸಂಖ್ಯೆಗೆ ಕರೆಮಾಡಿ, ತಿಳಿಸಬಹುದಾಗಿದೆ. ದೂರವಾಣಿ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿರಿಸಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಯನ್ನು ಸಮರ್ಪಕವಾಗಿ ಮಾಡಿದರೆ ಮಾನವ ಹಕ್ಕಿಗೆ ಗೌರವ ನೀಡಿದಂತೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದರು.
ಕಾರ್ಯಗಾರದ ಅಂಗವಾಗಿ ಕೇರ್ ಸಂಸ್ಥೆಯ ಮನೋಹರ ರಂಗನಾಥ್- ಮಾನವ ಹಕ್ಕು ಮತ್ತು ಕಾಯ್ದೆ, ಶಾಸನಗಳು ಕುರಿತು. ಗ್ಲೋಬಲ್ ಕನ್ಸರ‍್ನ್ ಇಂಡಿಯಾ ಸಂಸ್ಥೆಯ ಬೃಂದಾ ಅಡಿಗೆ- ಲಿಂಗತ್ವ ಸಮಾನತೆ. ವನಮಿತ್ರ ಸಂಸ್ಥೆಯ ಸುರೇಶ್ ಕುಮಾರ್- ಮಾನವ ಮತ್ತು ಪರಿಸರ ಹಕ್ಕು ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

Please follow and like us:
error