ನ. 18 ರಂದು ಜನ-ಮನ : ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಂವಾದ

jana_mana_koppal: ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಈ ಸದುದ್ದೇಶ ಈಡೇರಿದೆಯೇ ಇಲ್ಲವೇ, ಸರ್ಕಾರದಿಂದ ಜನರ ನಿರೀಕ್ಷೆ ಏನು ಎಂಬುದರ ಬಗ್ಗೆ ಫಲಾನುಭವಿಗಳಿಂದಲೇ ಅಭಿಪ್ರಾಯ ಪಡೆಯಲು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನ. 18 ರಂದು ಕೊಪ್ಪಳದಲ್ಲಿ ಜನ-ಮನ ಕಾರ್ಯಕ್ರಮದಡಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂವಾದ ಕಾರ್ಯಕ್ರಮವು ನ. 18 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ನಡೆಯಲಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವಾರು ಜನಪರ ಯೋಜನೆಗಳು ಜಾರಿಗೊಂಡಿವೆ. ಇನ್ನೂ ಹಲವು ಯೋಜನೆಗಳು ಜಾರಿಗೊಳ್ಳುವ ದಿಸೆಯಲ್ಲಿವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಋಣಮುಕ್ತ, ರಾಜೀವ್ ಆರೋಗ್ಯ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ಶಾದಿ ಭಾಗ್ಯ (ಬಿದಾಯಿ), ಹೀಗೆ ಅನೇಕ ಯೋಜನೆಗಳು ಬಡ ಜನರ ಪಾಲಿನ ಭಾಗ್ಯವಾಗಿ ಪರಿಣಮಿಸಿವೆ. ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಕಲಚೇತನರು, ಲಿಂಗ ಅಲ್ಪಸಂಖ್ಯಾತರು, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗದ ಜನರಿಗೂ ಸರ್ಕಾರ ಹತ್ತು ಹಲವು ಸೌಲಭ್ಯಗಳನ್ನು ಕೊಡಮಾಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಬೇಕು ಎನ್ನುವುದು ಸರ್ಕಾರದ ಆಶಯ. ಇಂತಹ ಜನಪರ ಕಾಳಜಿಯಿಂದಾಗಿ ಇಂದು ರಾಜ್ಯದಲ್ಲಿ ಸರಿ ಸುಮಾರು 4. 5 ಕೋಟಿಗೂ ಹೆಚ್ಚು ಜನರು ಸರ್ಕಾರದಿಂದ ಒಂದಲ್ಲ, ಒಂದು ರೀತಿಯಲ್ಲಿ ಪ್ರಯೋಜನ ಪಡೆದುಕೊಂಡಿದ್ದಾರೆ.
ಸರ್ಕಾರವೇ ರೂಪುಗೊಳಿಸಿ, ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರನ್ನು ನಿರೀಕ್ಷೆಯಂತೆ ತಲುಪುತ್ತಿವೆಯೇ. ಸರ್ಕಾರದ ಮೂಲ ಉದ್ದೇಶ ಈಡೇರಿದೆಯೇ. ಅಭಿವೃದ್ಧಿಪರ ಯೋಜನೆಗಳನ್ನು ಇನ್ನಷ್ಟು ಜನರಿಗೆ ಹೇಗೆ ತಲುಪಿಸಬಹುದು. ಅಥವಾ ಹೇಗೆ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಬಹುದು. ಸಾರ್ವಜನಿಕರು ಸರ್ಕಾರದಿಂದ ನಿರೀಕ್ಷಿಸುವುದು ಏನು. ಹೀಗೆ ಯೋಜನೆಗಳ ಜಾರಿಯ ನಂತರ ಅನೇಕ ಪ್ರಶ್ನೆಗಳು ಮೂಡುತ್ತವೆ. ಇವುಗಳಿಗೆ ಉತ್ತರವನ್ನು ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂವಾದ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರಲು ಸಂಬಂಧಿಸಿದ ಇಲಾಖೆಗಳು ಈಗಾಗಲೆ ಕ್ರಮ ಕೈಗೊಂಡಿವೆ.
ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾಲೂಕಾ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಕೆ., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Please follow and like us:
error