ನೇಮಕಾತಿಗಳಲ್ಲಿ ಮಿಕ್ಕುಳಿಂದ ವೃಂದ (ರಾಜ್ಯವೃಂದ) ಆಯ್ಕೆ ಮಾಡಿಕೊಳ್ಳಲು ರಜಾಕ್ ಉಸ್ತಾದ್ ಕರೆ

ಕೊಪ್ಪಳ: rajak-ustad ೩೭೧ ಜೆ ಸಮರ್ಪಕ ಅನುಷ್ಠಾನ ಜಾಗೃತಿಗಾಗಿ ಪದವಿ ಕಾಲೇಜಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆಯೋಜಿಸಿದ್ದ ೩೭೧ ಜೆ ಸಮರ್ಪಕ ಅನುಷ್ಠಾನ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಾಕ್ಷರಾದ ಶ್ರೀ ರಜಾಕ್ ಉಸ್ತಾದ್‌ರವರು ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹೈದರಾಬಾದ ಕರ್ನಾಟಕ ಭಾಗದ ಅಭ್ಯರ್ಥಿಗಳು ಮಿಕ್ಕುಳಿದ ವೃಂದ ( ರಾಜ್ಯ ವೃಂದ) ವನ್ನು ಆಯ್ಕೆ ಮಾಡಿಕೊಂಡು, ಹೈ-ಕ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶವನ್ನು ಒದಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಇದರಿಂದ ಹೈ-ಕ ಭಾಗದ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ, ರಾಜ್ಯದಲ್ಲಿ ಯಾವುದೇ ಸ್ಥಳವನ್ನುಬೇಕಾದರೂ ಆಯ್ದುಕೊಳ್ಳಬಹುದು. ರಾಜ್ಯವೃಂದವನ್ನು ಆಯ್ಕೆ ಮಾಡಿಕೊಂಡ ಹೈ-ಕ ಅಭ್ಯರ್ಥಿಗಳು ಒಂದು ವೇಳೆ ರಾಜ್ಯವೃಂದದಲ್ಲಿ ಆಯ್ಕೆಯಾಗದೇ ಇದ್ದರೇ ಕಡ್ಡಾಯವಾಗಿ ಸ್ಥಳೀಯ ವೃಂದ(ಹೈ-ಕ)ದಲ್ಲಿ ಪರಿಗಣಿಸಲಾಗುತ್ತದೆ. ಅಲ್ಲದೇ ಹೈ-ಕ ಭಾಗದ ಅಭ್ಯರ್ಥಿಗಳು ರಾಜ್ಯವೃಂದವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ರಾಜ್ಯವ್ಯಾಪಿ ಬಡ್ತಿಯಲ್ಲಿ ಹೆಚ್ಚು ಅವಕಾಶ ಹೊಂದಿ ಬೇಗನೇ ಬಡ್ತಿ ಹೊಂದಲು ಅನುಕೂಲವಾಗುತ್ತದೆ ಎಂದರು. ಇದು ಕೇವಲ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾತ್ರ ಸೀಮಿತವಾಗದೇ ಸರಕಾರದ ವಿವಿಧ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ಈ ವಿಧಾನ ಅನುಸರಿಸುವುದರ ಮೂಲಕ ಸಾಮಾಜಿಕ ಕಳಕಳಿ ಮೆರೆದು ಹೈ-ಕ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದಾಗ ಮಾತ್ರ ಹೈ-ಕ ಮೀಸಲಾತಿ ಆಶಯ ಈಡೇರಿದಂತಾಗುತ್ತದೆ ಎಂದರು.
ಹೈ-ಕ ಭಾಗದಲ್ಲಿ ಅನೇಕ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಆದಷ್ಟೂ ಬೇಗನೇ ತುಂಬುವಂತೆ ಸರಕಾರದ ಮೇಲೆ ಒತ್ತಡ ತರುವುದು ಈ ಭಾಗದ ಜನಪ್ರತಿನಿಧಿಗಳ ಮತ್ತು ಈ ಭಾಗದ ಹೋರಾಟಗಾರರ ಮೇಲಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಹುದ್ದೆಗಳು ತುಂಬುವುದರಿಂದ ಈ ಭಾಗ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆಯಾಗಲು ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರಾದ ಶ್ರೀ ಮಲ್ಲಪ್ಪ ಹೊಸೂರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಪತ್ರಕರ್ತರಾದ ಶ್ರೀ ಸೋಮರಡ್ಡಿ ಅಳವಂಡಿ, ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಬಸಪ್ಪ ನಾಗೋಲಿ, ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀ ತಿಪ್ಪೇರುದ್ರಪ್ಪ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಪಟ್ಟಿಯ ಉನ್ನತ ಶ್ರೇಣಿಯಲ್ಲಿರುವ ಶ್ರೀ ಭೀಮೇಶ, ಯಮನೂರಪ್ಪ, ಯಮುನಾ ನಾಯ್ಕ್, ಸಂತೋಷ ಉಂಡಾಂಡಿ, ಶರಣಗೌಡ ಪಾಟೀಲ್, ದೇವೇಂದ್ರಗೌಡ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶ್ರೀಮತಿ ವಿಜಯಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಶ್ರೀ ಬಸವರಾಜ ಪಟ್ಟಣಶೆಟ್ಟಿ ಸ್ವಾಗತಿಸಿದರು. ಶ್ರೀ ಶಂಕರಯ್ಯ ಅಬ್ಬಿಗೇರಿಮಠ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂದಿಸಿದರು. ಈ ಸಮಾರಂಭದಲ್ಲಿ ಸುಮಾರು ೧೦೦ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

Please follow and like us:
error