You are here
Home > Koppal News-1 > ನಾಟಕಗಳು ನಡೆದಾಡುವ ಶಿಕ್ಷಣ ಸಂಸ್ಥೆಗಳು -ಎ.ಎಂ.ಮದರಿ

ನಾಟಕಗಳು ನಡೆದಾಡುವ ಶಿಕ್ಷಣ ಸಂಸ್ಥೆಗಳು -ಎ.ಎಂ.ಮದರಿ

cgk-award
ಕೊಪ್ಪಳ : ಆಧುನಿಕ ರಂಗಭೂಮಿ ಕ್ಷೇತ್ರದಲ್ಲಿ ಸಿಜಿಕೆ ಸೇವೆ ಯಾವತ್ತೂ ಸ್ಮರಣೀಯವಾದುದು. ಈ ಭೂಮಿಗೆ ಬಂದಮೇಲೆ ಏನಾದರೊಂದಿಷ್ಟು ಸಮಾಜಮುಖಿ ಕೆಲಸ ಮಾಡಿದರೆ ಸಮಾಜ ನೆನಪಿಡುತ್ತೆ ಎಂದು ಹಿರಿಯ ಸಾಹಿತಿ, ವಿಮರ್ಶಕ ಎ.ಎಂ.ಮದರಿ ಹೇಳಿದರು. ನಗರದ ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರದಲ್ಲಿ ಕವಿಸಮೂಹ ಬಳಗ ಹಾಗೂ ಕನ್ನಡನೆಟ್ ಡಾಟ್ ಕಾಂ ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ನಡೆದ ಸಿಜಿಕೆ ಬೀದಿರಂಗದಿನಾಚರಣೆ ನಿಮಿತ್ಯ ರಂಗಪುರಸ್ಕಾರ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದಿನ ಕಾಲದಲ್ಲಿ ರಂಗಭೂಮಿಯ ಮೂಲಕ ಜನರಿಗೆ ಶಿಕ್ಷಣ ಕೊಡುವಂತಾಗುತ್ತಿತ್ತು. ನಾಟಕಗಳು ನಡೆದಾಡುವ ಶಿಕ್ಷಣ ಸಂಸ್ಥೆಗಳು ಎನ್ನುವದನ್ನು ಮರೆಯಬಾರದು. ೨೫ ವರ್ಷಗಳ ಕಾಲ ರಂಗ ಚಳುವಳಿ ಮಾಡಿದವರು ಸಿಜೆಕೆ. ಯಾವೊಂದೂ ಸಂಪನ್ಮೂಲಗಳೂ ಇಲ್ಲದೇ ಸಮಾನಮನಸ್ಕರನ್ನು ಸೇರಿಸಿಕೊಂಡು ಕೆಲಸ ಮಾಡಿ ರಂಗಭೂಮಿಯ ಚಳುವಳಿ ಕಟ್ಟಿದವರು ಸಿಜೆಕೆ. ದೊಡ್ಡ ಸಂಘಟಕ ಮತ್ತು ದೊಡ್ಡ ನಾಟಕಕಾರ.ಆದರೆ ಇಂದಿನ ಪೀಳಿಗೆಗಳು ರಂಗಭೂಮಿಯಿಂದ ದೂರಾಗಿವೆ. ಅವರಿಗೆ ನಾಟಕಗಳ ಬಗ್ಗೆ ಅರಿವೇ ಇಲ್ಲ. ಇದು ಅವರ ತಪ್ಪಲ್ಲ ಯಾವುದು ಮುಖ್ಯವೋ ಅದನ್ನು ಕೊಡುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಓಡುವ ಕುದರುಗಳನ್ನಾಗಿ ಮಾಡುತ್ತಿದ್ದೇವೆ. ವ್ಯಕ್ತಿತ್ವ ರೂಪಿಸುವ ಕೆಲಸ ಮಾಡುತ್ತಿಲ್ಲ. ಕೊಪ್ಪಳ ಜಿಲ್ಲೆ ರಂಗಭೂಮಿ ಕ್ಷೇತ್ರದಲ್ಲಿ ಪ್ರಸಿದ್ದವಾಗಿರುವಂಥಹದ್ದು. ಕೊಪ್ಪಳದಲ್ಲೂ ಸಮುದಾಯದ ಚಳುವಳಿಯಲ್ಲಿ ಭಾಗವಹಿಸಿದ್ದೇವು.ಸಮಾಜದ ಲೋಪದೋಷಗಳನ್ನು ವಿರೋಧಿಸುವುದಕ್ಕೆ ನಾಟಕ ಅತ್ಯುತ್ತಮ ಮಾದ್ಯಮ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ, ಹಿರಿಯ ನಟಿ ಜಿ.ವಂದನಾರಿಗೆ ಸಿಜಿಕೆ ರಂಗಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಮುತ್ತುರಾಜ್ ಕುಷ್ಟಗಿ, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮುಕ್ಕಣ್ಣ ಕತ್ತಿ, ವೀರಕನ್ನಡಿಗ ಸಂಘಟನೆಯ ಶಿವಾನಂದ ಹೊದ್ಲೂರ ಆಗಮಿಸಿದ್ದರು. ನಾಟಕ ಅಕಾಡೆಮಿಯ ಸದಸ್ಯ ಹಾಲ್ಕುರಿಕೆ ಶಿವಶಂಕರ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಕವಿಸಮೂಹ ಸಂಚಾಲಕ ಸಿರಾಜ್ ಬಿಸರಳ್ಳಿ ಮಾತನಾಡಿದರು. ಕಾರ‍್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಕನ್ನಡನೆಟ್ ಡಾಟ್ ಕಾಂ ಸಂಪಾದಕ ಎಚ್.ವಿ.ರಾಜಾಬಕ್ಷಿ ಕೋರಿದರು. ಕಾರ‍್ಯಕ್ರಮದಲ್ಲಿ ಸರಸ್‌ವತಿ ವಿದ್ಯಾಮಂದಿರದ ಆರ್.ಎಚ್.ಅತ್ತನೂರ, ಮುಖ್ಯೋಪಾಧ್ಯಾಯನಿ ರೇಣುಕಾ ಅತ್ತನೂರು ಹಾಗೂ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Top