ನಮ್ಮ ಜನರಿಗೆ ನೆಮ್ಮದಿಯ ಬದುಕು ಕೊಡಿ; ಕನ್ನಡ ಬದುಕುತ್ತದೆ

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಪಾದನೆ

ರಾಯಚೂರು, ):ಕನ್ನಡಕ್ಕೆ ಸಾವಿಲ್ಲ; ಸಮಸ್ಯೆಗಳಿವೆ. ಜನರನ್ನು ನಂಬಿದರೆ, ಅವರ ಬಾಳನ್ನು ಹಸನು ಮಾಡಿದರೆ ಮಾತ್ರ ಕನ್ನಡ ಉಳಿಯುತ್ತದೆ ಎಂದು ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಪುನರುಚ್ಚಿಸಿದರು.
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಪ್ರಧಾನ ವೇದಿಕೆಯಲ್ಲಿ ಡಿ.೪ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯು ನಶಿಸುತ್ತದೆ ಎನ್ನುವುದು ಬರೀ ಮಾತಷ್ಟೇ. ಸಾವಿರಾರು ವರ್ಷಗಳ ಕಾಲ ಕನ್ನಡವು ಹಲವಾರು ಸವಾಲುಗಳನ್ನು ಎದುರಿಸುತ್ತ ಬಂದಿರುವದನ್ನು ನೋಡಿದರೆ ಕನ್ನಡವು ಸದಾಕಾಲ ಜೀವಂತಿಕೆಯಿಂದಿರುವ ಭಾಷೆಯಾಗಿಯೇ ಇರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಕನ್ನಡ ಭಾಷೆಯನ್ನು ಉಳಿಸಬೇಕೆಂದರೆ ಜನರಿಗೆ ಬದುಕುವ ಭರವಸೆ ಕೊಡಬೇಕಿದೆ. ಭಾಷೆ ಮತ್ತು ಬದುಕನ್ನು ಒಟ್ಟಿಗೆ ನೋಡಿದರೆ, ಜನರಿಗೆ ಬದುಕುವ ಸ್ವಾತಂತ್ರ್ಯವನ್ನು ಕಲ್ಪಿಸಿದರೆ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ಕನ್ನಡ ಸಾಹಿತ್ಯಕ್ಕೆ ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಶಾಂತರಸ, ಗಜಲ್ ಗುಂಡಮ್ಮ ಸೇರಿದಂತೆ ಹಲವರ ಕೊಡುಗೆ ಅತ್ಯಂತ ಅಪಾರವಾದುದಾಗಿದೆ ಎಂದರು.
ನಮ್ಮ ನೆಲವು, ನಮ್ಮ ದೇಶವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂಬ ವಾಸ್ತವವನ್ನು ಮರೆತಾಗ ಮಾತ್ರ ಕೆಲವು ಅನಾಹುತಗಳು ಸಂಭವಿಸುತ್ತವೆ. ಇಂತಹ ಸೂಷ್ಮ ಸಂಗತಿಗಳನ್ನು ತಿಳಿದು ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರ ಸೊತ್ತಾಗಿದೆ. ಕಸಾಪ ಯಾವುದೋ ಒಂದು ಜಾತಿಯ, ಧರ್ಮದ ವೇದಿಕೆಯೆಂದು ಯಾರೂ ಕೂಡ ತಿಳಿಯಬಾರದು. ಇದು ಜನರ ಸಂಸ್ಥೆಯಾಗಿದೆ. ಪಟ್ಟಭದ್ರರು ಇಲ್ಲಿ ನುಸುಳಬಾರದು. ಕಸಾಪದಿಂದ ಉತ್ತಮ ಕಾರ್ಯಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಮಾತನಾಡಿ, ಕಸಾಪ ಆಡಳಿತದಲ್ಲಿ ಇಲ್ಲಿವರೆಗೆ ಯಾರದೇ ಹಸ್ತಕ್ಷೇಪವಾಗಿಲ್ಲ. ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶರಣಪ್ರಕಾಶ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರ ಹಾಗೂ ಇತರರು ಇದ್ದರು.
ಮನಸಿದ್ದರೆ ಮಾತ್ರ ಕಲೆ, ಸಾಹಿತ್ಯಕ್ಕೆ ಬೆಲೆ ಬರುತ್ತದೆ. ನಾಡು-ನುಡಿ ಉಳಿಯಲು ಜನರ ಮನಸೇ ಮುಖ್ಯ. ಅಂತಹ ಮನಸು ರಾಯಚೂರು ಜನರದ್ದು. ರಾಯಚೂರು ಜನರು ತೋರಿದ ಪ್ರೀತಿಯನ್ನು ನಾನೆಂದೂ ಮರೆಯಲಾರೆ.”
-ಡಾ.ಬರಗೂರು ರಾಮಚಂದ್ರಪ್ಪ, ಹಿರಿಯ ಚಿಂತಕರು, ಸಾಹಿತಿಗಳು
*ಕೋಟ್ಸ್
ಈ ನೆಲದಲ್ಲಿ ಗುರುತರವಾಗಿರುವ ಬಂಡಾಯ ಸಾಹಿತ್ಯ ಚಳುವಳಿಗೆ ಒಂದು ಹೊಸ ದಿಕ್ಕು, ಛಂದಸ್ಸು, ಮೀಮಾಂಸೆ ನೀಡಿದ ಗೆಳೆಯ ಬರಗೂರು ರಾಮಚಂದ್ರಪ್ಪ. ಅವರ ಅಧ್ಯಕ್ಷತೆಯಲ್ಲಿ ನುಡಿಹಬ್ಬ ನಡೆದದ್ದು ಅರ್ಥಪೂರ್ಣವಾದುದಾಗಿದೆ.
-ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿಗಳು

Please follow and like us:
error