ನಮ್ಮೂರ ಶಾಲೆಗೆ-ಯುವಜನರು ಕಾರ್ಯಕ್ರಮ ಅನುಷ್ಠಾನ: ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ರಾಜ್ಯ ಯುವನೀತಿ ಅನುಷ್ಠಾನ ಅಡಿಯಲ್ಲಿ ’ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯುವಕ/ಯುವತಿ ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಚಟುವಟಿಕೆಗಳನ್ನು ಪರಿಗಣಿಸಿ ತಾಲೂಕಿಗೆ ಒಂದರಂತೆ ತಲಾ ಒಂದು ಸಂಘಕ್ಕೆ ರೂ.೧ ಲಕ್ಷದಂತೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುವುದು. ಇಲಾಖೆಯಲ್ಲಿ ನೊಂದಾಯಿತ ಸಂಘಗಳು ಅರ್ಜಿ ಸಲ್ಲಿಸಬಹುದು.
ನೊಂದಾವಣೆಗೊಂಡಿರುವ ಸಂಘ ಸಂಸ್ಥೆಗಳ ಕಾರ್ಯ ವ್ಯಾಪ್ತಿಯಲ್ಲಿರುವ ಒಂದು ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಂಡು ಭೌತಿಕ ಹಾಗೂ ಬೌದ್ಧಿಕ ಚಟುವಟಿಕೆಗಳು, ಆಟದ ಮೈದಾನ ಅಭಿವೃದ್ಧಿ, ಹಸಿರೀಕರಣ, ಕೈತೋಟ, ನಿರ್ಮಾಣ, ಶಾಲೆಯ ಪರಿಸರ ಸಂರಕ್ಷಣೆ, ಶೈಕ್ಷಣಿಕ ಸಾಮಗ್ರಿಗಳ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ, ವೈಜ್ಞಾನಿಕ ವಿಷಯಗಳಲ್ಲಿ ಅರಿವು ಮೂಡಿಸುವುದು, ಮಳೆಕೊಯ್ಲು ನಿರ್ಮಾಣ, ಬುದ್ಧಿಮಾಂದ್ಯ ಶಾಲೆ ಅಥವಾ ಅಲೆಮಾರಿ ಮಕ್ಕಳಿಗೆ ಶೈಕ್ಷಣಿಕ ಸಹಕಾರ ನೀಡುವ ಕಾರ್ಯಗಳು ಸೇರಿದಂತೆ ಸರಕಾರ ನಿಗದಿಪಡಿಸಿದ ಮಾರ್ಗಸೂಚಿಯಂತೆ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವುದು ಕಡ್ಡಾಯವಾಗಿದೆ.
ಇಲಾಖೆಯಲ್ಲಿ ಮಾನ್ಯತೆ ಪಡೆದಿರುವ ಸಂಘ-ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಹಿಂದಿನ ಕನಿಷ್ಠ ಮೂರು ವರ್ಷಗಳ ಯುವ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಒಂದೇ ಶಾಲೆಯನ್ನು ಎರಡು ಸಂಘಗಳು ಆಯ್ಕೆ ಮಾಡುವಂತಿಲ್ಲ. ಒಂದು ತಾಲೂಕಿನಿಂದ ಒಂದೇ ಯುವ ಸಂಘವನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಪ್ರೋತ್ಸಾಹಧನ ಪಡೆದ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ.
ನೊಂದಾಯಿತ ಯುವ ಸಂಘಗಳು ನಿಗದಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತಿಮವಾಗಿ ಅಂತಿಮ ಸುತ್ತಿನಲ್ಲಿ ಆಯ್ಕೆಗೊಳ್ಳುವ ತಾಲೂಕಿಗೆ ಒಂದು ಸಂಘದಂತೆ, ಪ್ರೋತ್ಸಾಹ ಧನ ನೀಡಲಾಗುವುದು. ಆಸಕ್ತರು ಇಲಾಖೆಯಿಂದ ಅರ್ಜಿ ಪಡೆದು ಜೂ.೨೫ ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದೂ.ಸಂ: ೦೮೫೩೯-೨೦೧೪೦೦ ಇಲ್ಲಿಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು  ತಿಳಿಸಿದ್ದಾರೆ.

Please follow and like us:
error