ದುರ್ಬಲ ವರ್ಗಗಳ ಆಶಾಕಿರಣ ದೇವರಾಜ ಅರಸು- ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ  

 devaraj_urs_100 devaraj_urs_100_birthday

: ಹಿಂದುಳಿದ ಮತ್ತು ಶೋಷಿತ ವರ್ಗದವರ ಧ್ವನಿಯಾಗಿ ಅವರನ್ನು ಮುಖ್ಯವಾಹಿನಿಗೆ ತರಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಿದ್ದ ದಿವಂಗತ ಡಿ. ದೇವರಾಜ ಅರಸು ಅವರು ದುರ್ಬಲ ವರ್ಗದವರ ಆಶಾಕಿರಣವಾಗಿದ್ದರು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಡಿ. ದೇವರಾಜ ಅರಸು ಅವರ 101 ನೇ ಜನ್ಮದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.     ದೇವರಾಜ ಅರಸು ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು, ಬಹು ಸಂಖ್ಯಾತರ ವಿರೋಧವನ್ನೂ ಲೆಕ್ಕಿಸದೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ  “ಉಳುವವನೇ ಹೊಲದೊಡೆಯ” ಆಗುವಂತಹ ಭೂ-ಸುಧಾರಣೆ ಕಾನೂನನ್ನು ಜಾರಿಗೆ ತಂದರು.  ಈ ಮೂಲಕ ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾಗಿದ್ದಾರೆ. ಹಿಂದುಳಿದ ವರ್ಗಗಳು, ದುರ್ಬಲರಿಗೆ ರಾಜಕೀಯ ಹಕ್ಕಿನ ನೆಲೆಯನ್ನು ಒದಗಿಸಿದಂತಹ ಮಹಾನ್ ವ್ಯಕ್ತಿ ಅರಸು ಅವರು.  ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಹಾಗೂ ಗ್ರಾಮೀಣ ಭಾಗದಲ್ಲಿ ಬಡ ಕೂಲಿಕಾರ್ಮಿಕರ ಬದುಕನ್ನು ಹಸನಾಗಿಸಲು ಅವರು ಹಾಕಿಕೊಟ್ಟಂತಹ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿಯುವಂತಹದು.  ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಹಸನಾಗಿಸಲು ಹಾಸ್ಟೆಲ್‍ಗಳನ್ನು ಸ್ಥಾಪಿಸುವ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದರು.  ಜೀತ ಪದ್ಧತಿ, ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಶೋಷಿತರ ಧ್ವನಿಯಾದರು. ಭಾಗ್ಯಜ್ಯೋತಿ ಮುಂತಾದ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಂತಹ ದೇವರಾಜ ಅರಸು ಅವರು ಎಲ್ಲ ರಾಜಕಾರಣಿಗಳಿಗೂ ಆದರ್ಶಪ್ರಾಯ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಜನಪರ ಯೋಜನೆಗಳು ಕೂಡ ಅರಸು ಅವರ ಚಿಂತನೆಗೆ ಹತ್ತಿರವಾದಂತಹ ಯೋಜನೆಗಳೇ ಆಗಿವೆ ಎಂದು ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಅರ್ಥಪೂರ್ಣ ಯೋಜನೆಗಳಿಗೆ ಇದೀಗ ಫಲ ದೊರೆಯುವಂತಾಗಿದೆ.  ಬಡ ವಿದ್ಯಾರ್ಥಿಗಳು ನೆಮ್ಮದಿಯಿಂದ ಶಿಕ್ಷಣ ಕಲಿಯುವಂತಾಗಿದೆ.  ಭೂಸುಧಾರಣೆ ಕಾಯ್ದೆ ಜಾರಿಯಿಂದ ಭೂಮಿತಾಯಿಯನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಕೃಷಿ ಕೂಲಿ ಕಾರ್ಮಿಕರು ಹೊಲದ ಒಡೆಯರಾದರು.  ಈ ಮೂಲಕ ಜೀತ ಪದ್ಧತಿ ನಿಷೇಧಕ್ಕೆ ಕಾಯಕಲ್ಪ ಹಾಕಿಕೊಟ್ಟರು ಎಂದರು.
ದೇವರಾಜ ಅರಸು ಅವರ ಕುರಿತು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ವಿಶೇಷ ಉಪನ್ಯಾಸ ನೀಡಿ, ಅರಸು ಅವರು ಅಧಿಕಾರದ ಆಸೆಗಾಗಿ ರಾಜಕೀಯಕ್ಕೆ ಬಂದವರಲ್ಲ.  ರಾಜ್ಯದ ಎಂಟನೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದೇವರಾಜ ಅರಸು ಅವರು, ಜಮೀನ್ದಾರಿಕೆ ಪದ್ಧತಿಯನ್ನು ಕೊನೆಗಾಣಿಸಿ, ಶ್ರಮಜೀವಿ ರೈತನಿಗೇ ಭೂಮಿಯ ಒಡೆಯನಾಗುವಂತೆ, ಯಾವುದೇ ಸರ್ಕಾರ ಕೈಗೊಳ್ಳದ ಐತಿಹಾಸಿಕ ತೀರ್ಮಾನವನ್ನು ಕೈಗೊಂಡರು.  ಅನೇಕ ಅಡೆ-ತಡೆ ಹಾಗೂ ವಿರೋಧಗಳನ್ನು ಲೆಕ್ಕಿಸದೆ ಕನ್ನಡಿಗರ ಭಾವನೆಯನ್ನು ಅರ್ಥ ಮಾಡಿಕೊಂಡು, 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡುವ ದಿಟ್ಟ ನಿರ್ಧಾರವನ್ನು ಅರಸು ಅವರು ಕೈಗೊಂಡರು.  ಶ್ರೇಷ್ಠ ಕುಸ್ತಿಪಟುವಾಗಿ ರೂಪುಗೊಂಡ ಅವರು ಬೌದ್ಧಿಕ ಹಾಗೂ ದೈಹಿಕ ಸಾಮಥ್ರ್ಯ ಗಳಿಸುವ ಮೂಲಕ ರಾಜಕೀಯದಲ್ಲೂ ಶ್ರೇಷ್ಠತೆಯನ್ನು ಗಳಿಸಿದರು. ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳು, ಪ.ಜಾತಿ, ಪ.ವರ್ಗ ಸೇರಿದಂತೆ ಎಲ್ಲ ದುರ್ಬಲ ವರ್ಗಗಳ ಸ್ಥಿತಿಗತಿಗಳನ್ನು ಅರಿತು ಎಲ್.ಜಿ. ಹಾವನೂರು ಅವರ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು, ದುರ್ಬಲವರ್ಗದವರಿಗೆ ಮೀಸಲಾತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಈ ಮೂಲಕ ಹಿಂದುಳಿದ ವರ್ಗದವರರನ್ನು ಮುಖ್ಯ ವಾಹಿನಿಗೆ ಸೇರಿಸುವಂತಹ ಮಹತ್ವದ ಕಾರ್ಯವನ್ನು ಅರಸು ಅವರು ಕೈಗೊಂಡರು ಎಂದರು.  ಈಗಿನ ರಾಜಕಾರಣಿಗಳಿಗೆ ಅರಸು ಅವರ ಚಿಂತನೆಗಳನ್ನು ಒಳಗೊಂಡಂತಹ ತರಬೇತಿ ಶಿಬಿರವನ್ನು ಆಯೋಜಿಸುವ ಅಗತ್ಯವಿದೆ ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಹೇಳಿದರು.

ಕೊಪ್ಪಳ ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿ ಮುಂದಿನ, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಮಾದರ್, ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಉಪಸ್ಥಿತರಿದ್ದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಸ್ವಾಗತಿಸಿದರು.   ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  ಭವ್ಯ ಮೆರವಣಿಗೆಯು ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ನೆರವೇರಿತು.
Please follow and like us:
error