ದಿ. ೯ ರಂದು ಸಂಭ್ರಮದ ಬಸವ ಜಯಂತ್ಯೋತ್ಸವ

basavannaಕೊಪ್ಪಳ, ೦೭ : ಇದೇ ದಿ. ೦೯-೦೫-೨೦೧೬, ಸೋಮವಾರ ಜಿಲ್ಲಾಡಳಿತ ಕೊಪ್ಪಳ, ಬಸವ ಜಯಂತ್ಯೋತ್ಸವ ಸಮಿತಿ ಹಾಗೂ ಬಸವಾನುಯಾಯಿ ಸಂಘ-ಸಂಸ್ಥೆಗಳು ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಸಂಭ್ರಮದ, ಅರ್ಥಪೂರ್ಣ ಬಸವ ಜಯಂತ್ಯೋತ್ಸವವನ್ನು ಆಯೋಜಿಸಿದೆ. ಆ ದಿನ ಮುಂಜಾನೆ ೯ ಗಂಟೆಗೆ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಪೂಜೆ ಮತ್ತು ಮಾಲಾರ್ಪಣೆ ಕಾರ್ಯಕ್ರಮ ಜರುಗಲಿದೆ. ಸಂಜೆ ೪ ಗಂಟೆಗೆ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಜವಾಹರ ರಸ್ತೆ ಮೂಲಕ ಶ್ರೀ ಗವಿಮಠದ ಆವರಣದವರೆಗೆ ಬಸವೇಶ್ವರರ ಭಾವಚಿತ್ರದೊಂದಿಗೆ, ಕಲಾ ತಂಡಗಳೊಂದಿಗೆ, ಶರಣರ ಸಂದೇಶ ಸಾರುವ ಸ್ತಭ್ಧಚಿತ್ರಗಳ ಜೊತೆಯಲ್ಲಿ ಭವ್ಯ ಮೆರವಣಿಗೆ ಸಾಗುವುದು. ಮೆರವಣಿಗೆ ಶ್ರೀ ಗವಿಮಠದ ಆವರಣ ಪ್ರವೇಶಿಸುತ್ತಿದ್ದಂತೆಯೇ ಸಂಜೆ ೬.೦೦ ಗಂಟೆಗೆ ಬಸವಗೋಷ್ಠಿ ಕಾರ್ಯಕ್ರಮವು ಶ್ರೀ ಗವಿಮಠದ ಆವರಣದಲ್ಲಿ ಜರುಗುವುದು. ಈ ಬಸವಗೋಷ್ಠಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಇವರು ದಿವ್ಯ ಸಾನಿಧ್ಯ ವಹಿಸಲಿದ್ದು, ಶ್ರೀ ಗುರು ಬಸವ ಮಹಾಮನೆ, ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು ಪಾವನ ಸಾನಿಧ್ಯ ವಹಿಸಲಿದ್ದಾರೆ. ಖ್ಯಾತ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಡಾ. ಎಸ್.ಎಂ. ಜಾಮದಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಬಸವ ಚಿಂತನ ನೀಡುವರು. ಇನ್ನೋರ್ವ ಅತಿಥಿಗಳಾಗಿ ಐ.ಎ.ಎಸ್. ಅಧಿಕಾರಿಗಳಾದ ಶ್ರೀಮತಿ ಶಾಲಿನಿ ರಜನೀಶ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಗಣನೀಯ ಸಾಧನೆಗೈದ ಮೂವರು ವ್ಯಕ್ತಿಗಳಿಗೆ ’ಬಸವ ಕಾರುಣ್ಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಈ ಸಲದ ’ಬಸವ ಕಾರುಣ್ಯ’ ಪ್ರಶಸ್ತಿಯನ್ನು ಕಾಯಕ ಮತ್ತು ಸೇವಾ ಕ್ಷೇತ್ರದಲ್ಲಿ ಮಹಿಳಾ ಪೌರ ಕಾರ್ಮಿಕರಾದ ರೇಣುಕವ್ವ ಗಂಡ ಗುಡದಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಬಿ.ಬಿ.ಎಸ್. ಓದುತ್ತಿರುವ ಕುಣಿಕೇರಿ ತಾಂಡಾದ ಬಡ ವಿದ್ಯಾರ್ಥಿ ಗೋಪಾಲ ನಾಯಕ ತಂದೆ ರಡ್ಡಿ ನಾಯಕ ಇಟಗಿ ಮತ್ತು ೭ ಲಕ್ಷ ಗಿಡಗಳನ್ನು ಬೆಳೆಸಿರುವ ಕುಷ್ಟಗಿಯ ಪ್ರಗತಿಪರ, ಪರಿಸರ ಪ್ರೇಮಿ ರಮೇಶ ಬಳೂಟಗಿ ಇವರಿಗೆ ’ಬಸವ ಕಾರುಣ್ಯ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

Please follow and like us:
error

Related posts

Leave a Comment