ದಾಭೋಲ್ಕರ್ ಹತ್ಯೆ : ಸಿಬಿಐಯಿಂದ ಸನಾತನ ಸಂಸ್ಥೆಯ ಕಾರ್ಯಕರ್ತನ ಬಂಧನ

:Narendra-Dabholkar ಖ್ಯಾತ ಚಿಂತಕ ನರೇಂದ್ರ ದಾಭೋಲ್ಕರ್ ಅವರನ್ನು 2013ರಲ್ಲಿ ಪುಣೆಯಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆಗೆ ಸೇರಿದ ಹಿಂದೂ ಜನಜಾಗೃತಿ ಸಮಿತಿ ಸದಸ್ಯ ವೀರೇಂದ್ರಸಿಂಗ್ ತಾವಡೆ ಎಂಬಾತನನ್ನು ಬಂಧಿಸಲಾಗಿದೆ. ಈ ಪ್ರಕರಣದ ಸಂಬಂಧ ಸಿಬಿಐ ಆರೋಪಿಯನ್ನು ಬಂಧಿಸಿರುವುದು ಇದೇ ಮೊದಲು.

ಆತನನ್ನು ಜೂ.16ರ ವರೆಗೆ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಮುಂಬೈ ಸಮೀಪದ ಪನವೇಲ್‌ನಲ್ಲಿ ನಿನ್ನೆ ರಾತ್ರಿ ಈತನನ್ನು ಬಂಧಿಸಿ, ಇಂದು ಮಧ್ಯಾಹ್ನ ಪುಣೆಯ ವಿಶೇಷ ಕೋರ್ಟ್ ನಲ್ಲಿ ಹಾಜರುಪಡಿಸಲಾಯಿತು.

ಈ ಸಮಿತಿಯು ಗೋವಾ ಮೂಲದ ಕ್ರಾಂತಿಕಾರಿ ಹಿಂದೂ ಸಂಘಟನೆಯಾದ ಸನಾತನ ಸಂಸ್ಥೆ ಜತೆ ಸಂಪರ್ಕ ಹೊಂದಿದ್ದು, 2015ರ ಫೆಬ್ರವರಿಯಲ್ಲಿ ನಡೆದ ಮತ್ತೊಬ್ಬ ಚಿಂತಕ ಗೋವಿಂದ ಪನ್ಸಾರೆಯವರ ಹತ್ಯೆ ಪ್ರಕರಣದಲ್ಲಿ ಈ ಸಂಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಸಂಬಂಧ ನಡೆಯುತ್ತಿರುವ ತನಿಖೆ ಹಿನ್ನೆಲೆಯಲ್ಲಿ ವೀರೇಂದ್ರಸಿಂಗ್ ತಾವಡೆ ಅವರನ್ನು ಸಿಬಿಐ ಬಂಧಿಸಿದೆ. ಅವರನ್ನು ಮಧ್ಯಾಹ್ನ 3 ಗಂಟೆಗೆ ವಿಶೇಷ ಕೋರ್ಟ್‌ನಲ್ಲಿ ಹಾಜರುಪಡಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿಬಿಐ ವಕ್ತಾರ ದೇವಪ್ರೀತ್ ಸಿಂಗ್ ಹೇಳಿದ್ದಾರೆ. ಮುಂಬೈ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು 2014ರ ಮೇ ತಿಂಗಳಲ್ಲಿ ಸಿಬಿಐಗೆ ಹಸ್ತಾಂತರಿಸಿದ ಬಳಿಕ, ಮೊದಲ ಬಂಧನ ಇದಾಗಿದೆ.

ದಾಭೋಲ್ಕರ್ ಅವರು ಮೂಢನಂಬಿಕೆ ವಿರೋಧಿ ಚಳವಳಿಗಾರರಾಗಿದ್ದು, 2013ರ ಆಗಸ್ಟ್ 20ರಂದು ಹಾಡಹಗಲೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಲು ಕಾರಣವಾಗಿತ್ತು. ಹಲವು ಮಂದಿ ಗಣ್ಯ ಲೇಖಕರು ಹಾಗೂ ವ್ಯಕ್ತಿಗಳು ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಆರೋಪದಲ್ಲಿ ಪ್ರಶಸ್ತಿಗಳನ್ನು ವಾಪಸು ಮಾಡಿದ್ದರು.

ಇದಕ್ಕೂ ಮುನ್ನ ತನಿಖಾ ಸಂಸ್ಥೆ ಘಟನೆಯ ಸಂಬಂಧ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ವಿಶ್ಲೇಷಿಸಿದಾಗ ತಾವಡೆ ವಿರುದ್ಧ ಅನುಮಾನ ವ್ಯಕ್ತವಾಗಿತ್ತು. ಈತ ಇಎನ್‌ಟಿ ಸರ್ಜನ್ ಆಗಿದ್ದು, ಸನಾತನ ಸಂಸ್ಥೆಯ ಸಾರಂಗ್ ಅಕೋಲ್‌ಕರ್ ಅವರ ಅನುಯಾಯಿಯಾಗಿದ್ದು, ಈತನ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. 2009ರ ಗೋವಾ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಮನವಿ ಮೇರೆಗೆ 2012ರ ಜುಲೈನಲ್ಲಿ ಇಂಟರ್‌ಪೋಲ್, ಸಾರಂಗ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಅವರ ಮನೆಯ ಮೇಲೆ ಜೂನ್ 2ರಂದು ದಾಳಿ ನಡೆಸಿ ತಪಾಸಣೆ ಕೈಗೊಳ್ಳಲಾಗಿದ್ದು, ಹಲವು ಹಂತಗಳನ್ನು ಅವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ತಾವಡೆ ಹಾಗೂ ಅಕೋಲ್‌ಕರ್ ಅವರ ನಿವಾಸಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಹಲವು ಸಿಮ್‌ಕಾರ್ಡ್, ಮೊಬೈಲ್ ಫೋನ್, ಕಂಪ್ಯೂಟರ್ ಮಾಹಿತಿ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇವರು ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಕೆಲ ಸೈಬರ್ ವಿಧಿವಿಜ್ಞಾನ ಸಾಕ್ಷಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ, ಇವರ ವಿರುದ್ಧ ತನಿಖೆ ತೀವ್ರಗೊಳಿಸಲಾಗಿತ್ತು. 34 ವರ್ಷದ ಅಕೋಲ್‌ಕರ್ ಅವರು, ದಾಭೋಲ್ಕರ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸೂತ್ರದಾರ ಎಂದು ಹೇಳಲಾಗಿದೆ. ಗೋವಾ ಸ್ಫೋಟ ಸಂಬಂಧ ಎನ್‌ಐಎ ಅವರನ್ನು ಹುಡುಕುತ್ತಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಐಎ, ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದ್ದು, ಭದ್ರತಾ ಸಂಸ್ಥೆಗಳಿಗೆ ಅವರ ಇರುವಿಕೆಯ ಜಾಡು ಇನ್ನೂ ಸಿಕ್ಕಿಲ್ಲ.

courtesy : varthabharati

Please follow and like us:
error