ದಾಖಲೆ ರಹಿತ ಗ್ರಾಮಗಳ ದಾಖಲೀಕರಣವಾಗುವುದು ಅವಶ್ಯವಾಗಿದೆ- ಶಿವಮೂರ್ತಿ ನಾಯಕ್

doddanagouda-patil-kustagi-mla-koppal-dc-sp-ceo-adc: ಜಿಲ್ಲೆಯಲ್ಲಿ ದಾಖಲೆ ರಹಿತವಾಗಿರುವ ಹಲವು ಜನವಸತಿ ಪ್ರದೇಶಗಳಿದ್ದು, ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯ ಸಮರ್ಪಕವಾಗಿಸಲು ಅಂತಹ ಗ್ರಾಮಗಳನ್ನು ದಾಖಲೆ ಸಹಿತದ ಗ್ರಾಮಗಳನ್ನಾಗಿಸುವುದು ಅವಶ್ಯವಾಗಿದೆ ಎಂದು ಕರ್ನಾಟಕ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್ ಅವರು ಹೇಳಿದರು.
ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಖಾಸಗಿ, ಅರಣ್ಯ ಮತ್ತು ಸರ್ಕಾರಿ ಜಾಗಗಳಲ್ಲಿ ಹಲವಾರು ವರ್ಷಗಳಿಂದ ವಾಸವಿರುವವರ ಮನೆಗಳಿಗೆ ಇದುವರೆಗೂ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂತಹ ಸುಮಾರು ೩೬ ಗ್ರಾಮಗಳಿವೆ. ಕ್ಯಾಂಪ್, ದೊಡ್ಡಿ, ಹಟ್ಟಿ, ಕಾಲೋನಿ, ತಾಂಡಾ ಮುಂತಾದ ಹೆಸರುಗಳಿಂದ ಇಂತಹ ಗ್ರಾಮಗಳನ್ನು ಕರೆಯಲಾಗುತ್ತಿದೆ. ದಾಖಲೆರಹಿತ ಗ್ರಾಮಗಳಾಗಿರುವುದರಿಂದ ಸರ್ಕಾರದ ಯೋಜನೆಗಳ ಮೂಲಕ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಇಲ್ಲಿ ಒದಗಿಸಲು ತೊಂದರೆಯಾಗುತ್ತಿದೆ. ಎಲ್ಲರಿಗೂ ಬದುಕುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ನೀಡಿದೆ. ಈ ನಿಟ್ಟಿನಲ್ಲಿ ಇಂತಹ ಪ್ರದೇಶಗಳಿಗೆ ಸಮರ್ಪಕ ದಾಖಲೆಗಳನ್ನು ಸೃಷ್ಟಿಸಿ, ಅರ್ಹ ಜನರಿಗೆ ದಾಖಲೆಗಳನ್ನು ಒದಗಿಸುವ ಮೂಲಕ ಅವರ ಬದುಕಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರವೂ ಕ್ರಮ ಕೈಗೊಂಡಿದೆ. ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವ ತಾಂಡಾಗಳಿಗೆ ಈಗ ಯಾವ ಹೆಸರಿದೆಯೋ, ಪರಂಪರಾಗತವಾಗಿ ಅದೇ ಹೆಸರು ಉಳಿಯುವಂತಾಗಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶೋಷಿತ ಜನರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್ ಅವರು ಹೇಳಿದರು.
ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರಿಗೆ ರುದ್ರಭೂಮಿಯ ಕೊರತೆಯಿಂದಾಗಿ ತೊಂದರೆಗೆ ಒಳಗಾದ ಬಗ್ಗೆ ದೂರುಗಳು ಬಂದಲ್ಲಿ, ಕೂಡಲೆ ಜಿಲ್ಲಾಡಳಿತ ಸ್ಪಂದಿಸಬೇಕು. ಒಬ್ಬ ವ್ಯಕ್ತಿ ಮರಣದ ನಂತರ ಗೌರವಯುತವಾಗಿ ಅಂತ್ಯಕ್ರಿಯೆ ಲಭಿಸುವುದು ಸಂವಿಧಾನಬದ್ಧ ಹಕ್ಕಾಗಿದೆ. ರುದ್ರಭೂಮಿ ಲಭ್ಯವಿಲ್ಲದಿರುವ ಗ್ರಾಮಗಳ ವಿವರವಾದ ಮಾಹಿತಿಯನ್ನು ಸಮಿತಿಗೆ ಒದಗಿಸಬೇಕು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದಲ್ಲಿ, ಅಂತಹ ಶಾಲೆಗಳ ವಿವರವನ್ನು ಒದಗಿಸಿದಲ್ಲಿ, ದುರಸ್ತಿಗೆ ಅನುದಾನ ಒದಗಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:

Leave a Reply