ತುಂಗಭದ್ರಾ ಕಾಲುವೆಗಳಿಗೆ ಸೆ. ೧೫ ರವರೆಗೆ ನೀರು ಪೂರೈಕೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ

icc-meeting-munirabad-kada icc-meeting-munirabad-kada-santosh-lad icc-meeting-munirabad-kada-santosh-lad-basavaraj-rayareddy- ತುಂಗಭದ್ರಾ ಜಲಾಶಯದಿಂದ ಪ್ರಸಕ್ತ ಮುಂಗಾರು ಹಂಗಾಮಿಗೆ ಸದ್ಯ ಪೂರೈಕೆ ಮಾಡಲಾಗುತ್ತಿರುವ ನೀರಿನ ಪ್ರಮಾಣವನ್ನು ಸೆ. ೧೫ ರವರೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ. ಬರುವ ದಿನಗಳಲ್ಲಿ ನೀರಿನ ಒಳಹರಿವಿನ ಪ್ರಮಾಣವನ್ನು ಆಧರಿಸಿ, ಸೆ. ೧೫ ರ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಸಂತೊಷ್ ಲಾಡ್ ಅವರು ಹೇಳಿದರು.
ಮುನಿರಾಬಾದ್‌ನ ಕಾಡಾ ಸಭಾಂಗಣದಲ್ಲಿ ಮಂಗಳವಾರದಂದು ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿನ ೧೦೪ ನೇ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ಜು. ೧೮ ರಂದು ಬೆಂಗಳೂರಿನಲ್ಲಿ ಜರುಗಿದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯಲ್ಲಿ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನವೆಂಬರ್ ೩೦ ರವರೆಗೆ ಒಟ್ಟಾರೆ ೭೬೦೦ ಕ್ಯೂಸೆಕ್ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಮಳೆ ಪ್ರದೇಶವಾಗಿರುವ ಮಲೆನಾಡಿನಲ್ಲಿ ಮಳೆಯ ಕೊರತೆಯಾಗಿರುವುದರಿಂದ, ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮು ಸೇರಿದಂತೆ ಎರಡು ಬೆಳೆಗಳನ್ನು ಬೆಳೆಯಲು ಒಟ್ಟಾರೆ ೧೨೭ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಆದರೆ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ಒಳಹರಿವಿನ ಪ್ರಮಾಣವೂ ಕಡಿಮೆ ಇದೆ. ಸದ್ಯ ಜಲಾಶಯದಲ್ಲಿ ೫೦ ಟಿ.ಎಂ.ಸಿ. ಮಾತ್ರ ನೀರು ಸಂಗ್ರಹವಿದ್ದು, ಒಳಹರಿವು ಸುಮಾರು ೧೫೦೦೦ ಕ್ಯೂಸೆಕ್ ನಷ್ಟಿದೆ. ಇದರಿಂದಾಗಿ ಎರಡೂ ಬೆಳೆಗಳಿಗೆ ಸೇರಿದಂತೆ ಅಂದಾಜು ೭೦ ಟಿಎಂಸಿ ಅಷ್ಟು ನೀರಿನ ಕೊರತೆ ಆಗಲಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದ್ದು, ಅದಕ್ಕಾಗಿ ೧೦ ಟಿಎಂಸಿ ನೀರನ್ನು ಕಾಯ್ದಿರಿಸಿಕೊಳ್ಳಲಾಗುವುದು. ಆದ್ದರಿಂದ, ಸದ್ಯ ಇರುವ ಒಳಹರಿವಿನ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಸಂಗ್ರಹದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ರೈತರಿಗೆ ತೊಂದರೆ ಆಗದಂತೆ ಮಾಡುವ ಉದ್ದೇಶದಿಂದ, ಜು. ೧೮ ರಂದು ಬೆಂಗಳೂರಿನಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸೆ. ೧೫ ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಸರಾಸರಿ ೩೨೦೦ ಕ್ಯೂಸೆಕ್, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಸರಾಸರಿ ೬೫೦ ಕ್ಯೂಸೆಕ್, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ ೧೦೫೦ ಕ್ಯೂಸೆಕ್ ಸೇರಿದಂತೆ ವಿವಿಧ ಕಾಲುವೆಗಳಿಗೆ ಒಟ್ಟಾರೆ ೭೬೦೦ ಕ್ಯೂಸೆಕ್ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಒಳಹರಿವಿನ ಪ್ರಮಾಣ ಹೆಚ್ಚಾಗಿ, ನೀರಿನ ಸಂಗ್ರಹ ಹೆಚ್ಚಾದಲ್ಲಿ, ಸೆ. ೧೫ ರ ನಂತರವೂ ಇದೇ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ಆದರೆ ನೀರಿನ ಹರಿವು ಮತ್ತು ಸಂಗ್ರಹ ಕಡಿಮೆ ಆದಲ್ಲಿ ಸೆ. ೧೫ ರ ನಂತರ ಮತ್ತೊಮ್ಮೆ ಸಭೆ ಸೇರಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿ, ಮುಂದಿನ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೆ ಭತ್ತ ನಾಟಿ ಮಾಡಿರುವ ರೈತರಿಗೆ ಮೊದಲನೆ ಬೆಳೆ ಬೆಳೆಯಲು ತೊಂದರೆ ಆಗಲಾರದು. ಆದರೆ ರೈತರ ಹಿತದೃಷ್ಟಿಯಿಂದ ಇದುವರೆಗೂ ಭತ್ತ ನಾಟಿ ಮಾಡದೇ ಇರುವ ರೈತರು, ಭತ್ತದ ಬೆಳೆ ಬೆಳೆಯದೆ, ಕಡಿಮೆ ನೀರು ಬಳಕೆ ಮಾಡಲಾಗುವ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಜಲಾಶಯದ ನೀರಿಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ಕೃಷಿಕರಿಗೆ ನೀರು ಒದಗಿಸುವುದು ನಮ್ಮ ಆದ್ಯತೆಯಾಗಿದ್ದು, ಕಾರ್ಖಾನೆಗಳಿಗೆ ಸದ್ಯ ಪೂರೈಕೆ ಮಾಡಲಾಗುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಸಂತೊಷ್ ಲಾಡ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕಾಡಾ ಅಧ್ಯಕ್ಷ ವಸಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಶಾಸಕರುಗಳು, ಸಂಸದರು, ಜಿಲ್ಲಾಧಿಕಾರಿಗಳು ಸೇರಿದಂತೆ ತುಂಗಭದ್ರಾ ಯೋಜನಾ ವೃತ್ತದ ಉನ್ನತ ಅಧಿಕಾರಿಗಳು, ರೈತ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Please follow and like us:
error