ಡೆಂಗ್ಯೂ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಎಂ.ಕನಗವಲ್ಲಿ ಸೂಚನೆ

DCKanagavalli ಡೆಂಗ್ಯೂ ಮತ್ತು ಚಿಕೂನ್‌ಗುನ್ಯ ರೋಗಗಳು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.
ಅವರು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮೇ-೧೬ ರ ಅಂಗವಾಗಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾಗಳ ಹರಡುವಿಕೆ ಮತ್ತು ನಿಯಂತ್ರಣ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿ ಜಿಲ್ಲೆಯ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಗೆ, ನಗರಸಭೆ ಕಮಿಷನರ್‌ಗಳಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದ್ದು ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ. ರೋಗ ಹರಡದಂತೆ ತಡೆಗಟ್ಟಲು ಇಂದಿನಿಂದಲೇ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು. ಡೆಂಗ್ಯೂ ಚಿಕುನ್ ಗುನ್ಯಾಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲದಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಯೊಂದೇ ಪರಿಹಾರ ಮಾರ್ಗವಾಗಿದೆ.
ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಮಳೆಯಿಂದಾಗಿ ತಗ್ಗು ಪ್ರದೇಶಗಳು ಗುಂಡಿಗಳು ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಅಂತಹ ಪ್ರದೇಶಗಳನ್ನು ಗುರುತಿಸಿ ತಗ್ಗು ಗುಂಡಿಗಳನ್ನು ಮುಚ್ಚಿಸಲು ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಪ್ರದೇಶ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು, ಪೈಪ್‌ಲೈನ್ ಸೋರಿಕೆ ಗುರುತಿಸಿ ಶೀಘ್ರ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಿದರು. ನಗರ ಪ್ರದೇಶಗಳಲ್ಲಿ ಡೆಂಗ್ಯೂ/ಚಿಕೂನ್‌ಗುನ್ಯಾ ರೋಗಗಳ ಬಗ್ಗೆ ಹೆಚ್ಚು ವರದಿಯಾಗುವುದರಿಂದ ನಗರ ಪ್ರದೇಶಗಳಿಗೆ ವಿಶೇಷ ಕಾರ್ಯಯೋಜನೆ ರೂಪಿಸಿ ಅದರಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು. ಎಳೆನೀರು ಚಿಪ್ಪುಗಳು, ಅನುಪಯುಕ್ತ ಟೈರುಗಳು, ಪ್ಲಾಸ್ಟಿಕ್ ಕಪ್ ಇತ್ಯಾಧಿ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಸೊಳ್ಳಗಳು ಹರಡದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ವಿರುಪಾಕ್ಷರಡ್ಡಿ ಮಾದಿನೂರು ಮಾತನಾಡಿ ಜನವರಿಯಿಂದ ಇಲ್ಲಿಯವರೆಗೆ ೬೮ ಶಂಕಿತ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ೧೮ ಪ್ರಕರಣಗಳು ಖಚಿತಪಟ್ಟಿವೆ ಇದರಲ್ಲಿ ಹೆಚ್ಚಿನ ಪ್ರಕರಣಗಳು ನಗರ ಪ್ರದೇಶಗಳಿಂದ ವರದಿಯಾಗಿವೆ ಎಂದರು. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಗಳಿಗೆ ನಿರ್ಧಿಷ್ಟ ಔಷದಿ ಇಲ್ಲದಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಯೊಂದೆ ಪರಿಹಾರ ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ಸಲಹೆಗಾರ ಕೆ. ರಮೇಶ ರೋಗಗಳ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಪಾತ್ರಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಕಾಂತ ಬಾಸೂರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್, ಸಹಾಯಕ ಎಂಟೋಮಾಜಿಸ್ಟ್ ಎಲ್. ಹಿರೇಗೌಡರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಕಾರ್ಯಕ್ರಮ ಅನುಸ್ಟಾನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

Leave a Reply