ಡಿ.೧೭ ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ’ ಸ್ಪಂದನ ’ ಕೇಂದ್ರದ ಉದ್ಘಾಟನೆ

: ಸಾರ್ವಜನಿಕರಿಗೆ ಕಂದಾಯ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸೇವೆಯನ್ನು ಒಂದೇ ಸೂರಿನಡಿ ಒದಗಿಸಬಹುದಾಗಿರುವ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರವನ್ನು ಡಿ.೧೭ ರಂದು ಬೆ. ೧೧ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಆರಂಭಿಸಲಾಗುತ್ತಿದೆ.
ಸರ್ಕಾರದಿಂದ ಲಭ್ಯವಾಗುವ ಸೇವೆಗಳಿಗಾಗಿ ಸಾರ್ವಜನಿಕರು ವಿನಾಕಾರಣ ತೊಂದರೆ ಅನುಭವಿಸುವುದು ಹಾಗೂ ಅನಗತ್ಯ ವಿಳಂಬಕ್ಕೆ ಒಳಗಾಗುವುದನ್ನು ತಪ್ಪಿಸಿ, ಒಂದೇ ಸೂರಿನಡಿ ಸಕಲ ಸೇವೆಗಳು ವಿಳಂಬರಹಿತವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ’ಸ್ಪಂದನ’ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಡಿ. ೧೭ ರಂದು ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರದ ಉದ್ಘಾಟನೆ ನೆರವೇರಿಸುವರು. ಕಂದಾಯ ಇಲಾಖೆಯ ೩೬ ಸೇವೆಗಳು ಸೇರಿದಂತೆ ಭೂಮಿ ಕೇಂದ್ರದಲ್ಲಿನ ಪಹಣಿ ಹಾಗೂ ಮ್ಯೂಟೇಶನ್ ವಿತರೆ ಮತ್ತು ಭೂಮಾಪನ ಇಲಾಖೆಯ ಸೇವೆಗಳು, ಆಹಾರ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸೇವೆಗಳನ್ನು ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರು ಒಂದೇ ಸೂರಿನಡಿ ಪಡೆಯಬಹುದು.
ಜಿಲ್ಲಾಡಳಿತ ಭವನದಲ್ಲಿ ಪ್ರಾರಂಭಿಸಲಾಗುವ ’ಸ್ಪಂದನ’ ಕೇಂದ್ರದಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-೧), ಅನುಸೂಚಿತ ಜಾತಿ ಅಥವಾ ಪಂಗಡಗಳ ಪ್ರಮಾಣ ಪತ್ರ (ಪ.ಜಾತಿ/ಪ.ಪಂ), ವಿಧವಾ ದೃಢೀಕರಣ ಪತ್ರ, ಮರು ವಿವಾಹವಾಗದಿರುವ ದೃಢೀಕರಣ ಪತ್ರ, ವಸಿ ದೃಢೀಕರಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಗೇಣಿ ರಹಿತ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬ ಸದಸ್ಯ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ, ಕೃಷಿ ಕಾರ್ಮಿಕ ದೃಢೀಕರಣ ಪತ್ರ, ಬೋನಪೈಡ್ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ, ವ್ಯವಸಾಯಗಾರರ ದೃಢೀಕರಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ, ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ, ಉದ್ಯೋಗ ಉದೇಶಕ್ಕೆ ಆದಾಯ ದೃಢೀಕರಣ ಪತ್ರ, ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ, ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ, ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ, ಜೀವಂತ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ವಂಶವೃಕ್ಷದ ದೃಢೀಕರಣ ಪತ್ರ, ಹೈದ್ರಾಬಾದ ಕರ್ನಾಟಕ ಪ್ರದೇಶದ ವಸತಿ ಮತ್ತು ಅರ್ಹತಾ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ ಸೇವೆಗಳನ್ನು ಪಡೆಯಬಹುದು. ಮತ್ತು ೯೪ ಸಿ, ೯೪ ಸಿಸಿ ಸೇವೆಯನ್ನು ಪಡೆಯಬಹುದು. ವಿವಿಧ ಮಾಸಾಶನ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ಮೈತ್ರಿ, ಮನಸ್ವಿನಿ, ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ, ರೈರ ವಿಧವೆಯರ ಪಿಂಚಣಿ, ಅಂತ್ಯ ಸಂಸ್ಕಾರ ಯೋಜನೆ ಸೇವೆಗಳನ್ನು ಪಡೆಯಬಹುದು.
ಇದೇ ಕೇಂದ್ರದಲ್ಲಿ ಭೂಮಿ ಯೋಜನೆಯ ಸೇವೆಗಳು ಕೂಡ ಲಭ್ಯವಿದ್ದು, ಆರ್‌ಟಿಸಿ, ಹಕ್ಕು ಬದಲಾವಣೆ ಪ್ರತಿ, ಖಾತಾ ಪ್ರತಿ, ಭೂಮಿ ಆನ್‌ಲೈನ್ ಕಿಯಾಸ್ಕ್ ಸೇವೆಯಲ್ಲಿ ಖಾತಾ ಬದಲಾವಣೆ (ಪೌತಿ, ವಿಲ್ ಹಾಗೂ ಮೈನರ್ ಗಾರ್ಡಿಯನ್). ಸರ್ಕಾರಿ ಆದೇಶ( ಭೂ ಮಂಜೂರು, ಭೂ ಸುಧಾರಣೆ ಮಂಜೂರು, ಮರು ಮಂಜೂರು). ಕೋರ್ಟ್ ತಡೆ (ತಡೆ ಆಜ್ಞೆ, ತಡೆ ಬಿಡುಗಡೆ). ಹಕ್ಕು ಮತ್ತು ಋಣಭಾರ (ಆಧಾಯ/ಭೋಗ್ಯ, ಬಿಡುಗಡೆ, ಸರ್ಕಾರಿ ನಿಬಂಧನೆ). ಭೂ ಪರಿವರ್ತನೆ (ನಿವೇಶನ, ಕಾರ್ಖಾನೆ ಇತ್ಯಾದಿ). ತಕರಾರು (೩೦ ದಿವಸಗಳ ನೋಟಿಸ್ ಅವಧಿಯೊಳಗೆ ಇರುವ ವಹಿವಾಟುಗಳು)
ಸರ್ವೆ ಇಲಾಖೆಯ ಮೋಜಿಣಿ ಯೋಜನೆಯ ಸೇವೆಗಳಾದ ೧೧ ಇ-ಕ್ರಯ ವಿಭಾಗ, ದಾನ, ಕೋರ್ಟ್ ಡಿಕ್ರಿ, ಕೋರ್ಟ್ ಕಾಂಪ್ರಮೈಸ್, ಹಾಗೂ ಪ್ರಿ-ಅಲಿನೇಷನ್, ತತ್ಕಾಲ್ ಅರ್ಜಿ, ಹದ್ದುಬಸ್ತು, ಇ ಸ್ವತ್ತು ಸೇವೆಗಳು ಕೂಡ ಸಾರ್ವಜನಿಕರಿಗೆ ಸ್ಪಂದನ ಜನಸೇವಾ ಕೇಂದ್ರದಲ್ಲಿ ಲಭ್ಯವಿರಲಿದೆ.

Please follow and like us:
error