ಜು. ೧೬ ರಿಂದ ಆರ್‌ಟಿಇ ನಲ್ಲಿ ಬಾಕಿ ಉಳಿದಿರುವ ಸೀಟುಗಳ ಭರ್ತಿ ಪ್ರಕ್ರಿಯೆ

: ಪ್ರಸಕ್ತ ಸಾಲಿನ ಆರ್.ಟಿ.ಇ. ಅಡಿ ೦೧ ಮತ್ತು ೦೨ ನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ನಂತರ ಜಿಲ್ಲೆಯಲ್ಲಿ ಖಾಲಿ ಉಳಿದಿರುವ ೪೨೮ koppal-dcಸೀಟುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಜುಲೈ ೧೬ ರಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಮೊದಲನೆ ಮತ್ತು ಎರಡನೆ ಸುತ್ತಿನಲ್ಲಿ ಲಾಟರಿ ಮೂಲಕ ಸೀಟುಗಲ ಹಂಚಿಕೆಯಾಗಿದ್ದು, ವಾಸಸ್ಥಳದಿಂದ ಶಾಲೆಗೆ ಇರುವ ಅಂತರದ ಕಾರಣ ಅಥವಾ ವಾರ್ಡ್ ಹೊರಭಾಗದಲ್ಲಿ ಇರುವ ಕಾರಣ ಅಥವಾ ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಅರ್ಜಿ ಸಲ್ಲಿಸಿದ್ದ ಕಾರಣ ತಿರಸ್ಕರಿಸಲ್ಪಟ್ಟಿದ್ದರಿಂದ, ಅಂತಹ ಅಭ್ಯರ್ಥಿಗಳಿಗೆ ದೂರದ ಅಂತರವನ್ನು ಸಡಿಲಿಸಿ ಸೀಟು ಹಂಚಿಕೆಯಾದ ಶಾಲೆಯಲ್ಲಿ ಸೀಟು ಖಾಲಿ ಇದ್ದಲ್ಲಿ, ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಒಂದು ವೇಳೆ, ಖಾಲಿ ಇರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿ ತಿರಸ್ಕರಿಸಲ್ಪಟ್ಟ ಅರ್ಜಿಗಳಿದ್ದಲ್ಲಿ (ಮೀಸಲಾತಿ ಪ್ರಕಾರ) ಲಾಟರಿ ಮೂಲಕ ಪಾಲಕರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಸೀಟು ಹಂಚಿಕೆಯಾದ ಶಾಲೆಗಳಲ್ಲಿ ಆರ್‌ಟಿಇ ಅಡಿ ಮೀಸಲಿಟ್ಟಿದ್ದ ಎಲ್ಲ ಸೀಟುಗಳು ಭರ್ತಿಯಾಗಿದ್ದಲ್ಲಿ, ಅಂತಹ ಮಕ್ಕಳು, ಅರ್ಜಿಯಲ್ಲಿ ಬೇರೆ ಶಾಲೆಗಳಿಗೆ ನೀಡಿರುವ ಆದ್ಯತೆಯನ್ನು ಪರಿಗಣಿಸಿ ಅಂತಹ ಶಾಲೆಗಳಲ್ಲಿ ಸೀಟು ಖಾಲಿ ಇದ್ದಲ್ಲಿ, ಮೊದಲ ಆದ್ಯತೆ ಮೇಲೆ ಸೀಟು ಹಂಚಿಕೆ ಮಾಡಲಾಗುವುದು.
ತಾಲೂಕುವಾರು ಉಳಿಕೆ ಸೀಟುಗಳು ಹಾಗೂ ಆಯ್ಕೆ ಪ್ರಕ್ರಿಯೆ ನಡೆಯುವ ದಿನಾಂಕ ಹಾಗೂ ಸ್ಥಳದ ವಿವರ ಇಂತಿದೆ. ಯಲಬುರ್ಗಾ ತಾಲೂಕಿನಲ್ಲಿ ಉಳಿಕೆ ಇರುವ ಸೀಟುಗಳ ಸಂಖ್ಯೆ- ೪೯, ಆಯ್ಕೆ ಪ್ರಕ್ರಿಯೆ ಜುಲೈ ೧೬ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಬಿ.ಆರ್.ಸಿ., ಮುಧೋಳ ರಸ್ತೆ, ಯಲಬುರ್ಗಾ ಇಲ್ಲಿ ನಡೆಯಲಿದೆ. ಕುಷ್ಟಗಿ ತಾಲೂಕಿನಲ್ಲಿ ಉಳಿಕೆ ಇರುವ ಸೀಟುಗಳ ಸಂಖ್ಯೆ- ೯೭. ಆಯ್ಕೆ ಪ್ರಕ್ರಿಯೆ ಜುಲೈ ೧೬ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕುಷ್ಟಗಿಯ ಬಿ.ಆರ್.ಸಿ.ಯಲ್ಲಿ ನಡೆಯಲಿದೆ. ಕೊಪ್ಪಳ ತಾಲೂಕಿನಲ್ಲಿ ಉಳಿಕೆ ಇರುವ ಸೀಟುಗಳ ಸಂಖ್ಯೆ ೧೦೨. ಆಯ್ಕೆ ಪ್ರಕ್ರಿಯೆ ಜುಲೈ ೧೮ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳ ಜವಾಹರ ರಸ್ತೆಯಲ್ಲಿರುವ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಗಂಗಾವತಿ ತಾಲೂಕಿನಲ್ಲಿ ಉಳಿಕೆ ಸೀಟುಗಳ ಸಂಖ್ಯೆ ೧೮೦. ಆಯ್ಕೆ ಪ್ರಕ್ರಿಯೆ ಜುಲೈ ೧೯ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಗಂಗಾವತಿಯ ನೀಲಕಂಠೇಶ್ವರ ಸರ್ಕಲ್ ಹತ್ತಿರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯು ಆಯಾ ತಾಲೂಕು ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ. ಪ್ರಕ್ರಿಯೆಯ ಮೇಲುಸ್ತುವಾರಿ ಹೊಣೆಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ವಹಿಸಲಾಗಿದೆ. ಸಂಬಂಧಿಸಿದ ಮಕ್ಕಳ ಪಾಲಕರು ಸೂಕ್ತ ದಾಖಲೆಗಳೊಂದಿಗೆ ನಿಗದಿತ ದಿನಾಂಕ ಮತ್ತು ಸ್ಥಳದಲ್ಲಿ ಹಾಜರಾಗುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

Please follow and like us:
error