ಜುಲೈನಲ್ಲಿ ಮುಖ್ಯಮಂತ್ರಿಗಳಿಂದ ಕೊಪ್ಪಳ ಮೆಡಿಕಲ್ ಕಾಲೇಜು ಉದ್ಘಾಟನೆ- ಶಿವರಾಜ ತಂಗಡಗಿ

shivaraj-tangadagi-minister-koppal-medical-collage shivaraj-tangadagi-minister-koppal ಜುಲೈ ತಿಂಗಳಿನಲ್ಲಿ ಕೊಪ್ಪಳದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಿಂದ ನೆರವೇರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಕಿಮ್ಸ್ ನಿರ್ದೇಶಕ ಎಸ್.ಎಂ. ಮಲಾಪುರೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು
ಕೊಪ್ಪಳ-ಗಂಗಾವತಿ ರಸ್ತೆಯಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಸೋಮವಾರದಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಮೂಲಕ ಈ ಭಾಗದ ಜನರಿಗೆ ನೀಡಿದ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಅತ್ಯಂತ ತ್ವರಿತಗತಿಯಲ್ಲಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಪೂರ್ಣಗೊಳಿಸುವುದು ನಮ್ಮ ಆಶಯವಾಗಿದ್ದು, ಈಗಾಗಲೆ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಇನ್ನೂ ಸಣ್ಣ ಪುಟ್ಟ ಕಾಮಗಾರಿ ಅಷ್ಟೇ ಬಾಕಿ ಉಳಿದಿದ್ದು, ೨೦೧೫-೧೬ ನೇ ಸಾಲಿನಲ್ಲಿ ೧೫೦ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವ್ಯಾಸಂಗವನ್ನು ಇದೇ ಕಾಲೇಜಿನಲ್ಲಿ ಮಾಡುತ್ತಿದ್ದು, ಅಗತ್ಯ ಪ್ರೊಫೆಸರ್‌ಗಳು ಹಾಗೂ ಸಿಬ್ಬಂದಿಗಳ ನೇಮಕಾತಿ ಮಾಡಲಾಗಿದೆ. ಮೆಡಿಕಲ್ ಕಾಲೇಜಿಗೆ ಇದುವರೆಗೂ ೧೩೦ ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಪರಿಷ್ಕೃತ ಅಂದಾಜಿನಂತೆ ಹೆಚ್ಚುವರಿಯಾಗಿ ೪೫ ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಇದಕ್ಕೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಜುಲೈ ತಿಂಗಳ ಒಳಗಾಗಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಆಹ್ವಾನಿಸಿ, ಉದ್ಘಾಟನೆಯನ್ನು ಅವರಿಂದಲೇ ನೆರವೇರಿಸಲಾಗುವುದು. ಈ ನಿಟ್ಟಿನಲ್ಲಿ ಇದಕ್ಕೆ ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರಿಗೆ ಹಾಗೂ ಕಿಮ್ಸ್ ನಿರ್ದೇಶಕ ಎಸ್.ಎಂ. ಮಲಾಪುರೆ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಕಿಮ್ಸ್ ನಿರ್ದೇಶಕ ಎಸ್.ಎಂ. ಮಲಾಪುರೆ, ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಾಗೂ ಆಡಳಿತಾಧಿಕಾರಿ ಮುನಿಯಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error