ಕೊಪ್ಪಳ ಏ. 19- ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವುದರಿಂದ, ಜಾನುವಾರುಗಳ ರಕ್ಷಣೆ ನಿಟ್ಟಿನಲ್ಲಿ ಈಗಾಗಲೆ ೦೩ ಗೋಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಇನ್ನೆರಡು ದಿನಗಳ ಒಳಗಾಗಿ ಇನ್ನು ೦೩ ಗ್ರಾಮಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಬಿ.ಎಸ್. ಜಯರಾಂ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾಗಿದ್ದರಿಂದ ಬರ ಪರಿಸ್ಥಿತಿ ತಲೆದೋರಿದೆ. ಜಾನುವಾರುಗಳ ರಕ್ಷಣೆ ದೃಷ್ಟಿಯಿಂದ, ಜಿಲ್ಲೆಯ ಕಲಕೇರಿ, ಹುಲಿಹೈದರ್, ಅಳವಂಡಿ ಮತ್ತು ಕುಕನೂರು ಗ್ರಾಮಗಳಲ್ಲಿ ಮೇವು ನಿಧಿಯನ್ನು ಸ್ಥಾಪಿಸಲಾಗಿತ್ತು. ಕಲಕೇರಿ ಮೇವು ಬ್ಯಾಂಕ್ನಲ್ಲಿ ೧೦ ಮೆ.ಟನ್ ಮೇವು ಸಂಗ್ರಹಿಸಲಾಗಿದ್ದು, ಹುಲಿಹೈದರ್- ೫. ೭೭ ಮೆ.ಟನ್, ಅಳವಂಡಿ ಮತ್ತು ಕುಕನೂರಿನಲ್ಲಿ ಸ್ಥಾಪಿಸಲಾಗಿರುವ ಮೇವು ಬ್ಯಾಂಕಿನಲ್ಲಿ ತಲಾ ೧೦ ಮೆ.ಟನ್. ಮೇವು ಸಂಗ್ರಹಿಸಲಾಗಿದೆ. ಗೋಶಾಲೆಗಳನ್ನು ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಸೂಚನೆ ಅನ್ವಯ ಈಗಾಗಲೆ ಜಿಲ್ಲೆಯ ಕನಕಗಿರಿ, ಹುಲಿಹೈದರ್ ಮತ್ತು ಅಳವಂಡಿ ಗ್ರಾಮಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ. ಉಳಿದಂತೆ ಯಲಬುರ್ಗಾ ತಾಲೂಕಿನ ತಳ್ಳೂರು, ಕುಷ್ಟಗಿ ತಾಲೂಕಿನ ತಾವರಗೇರಾ, ಕೊಪ್ಪಳ ತಾಲೂಕಿನ ಇರಕಲ್ಲಗಡ ಗ್ರಾಮಗಳಲ್ಲಿ ಗೋಶಾಲೆ ಪ್ರಾರಂಭಕ್ಕೆ ಅಗತ್ಯ ಶೆಡ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವು ಹಾಕಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆದಿದ್ದು, ಇನ್ನೆರಡು ದಿನಗಳ ಒಳಗಾಗಿ ಈ ಗ್ರಾಮಗಳಲ್ಲಿಯೂ ಗೋಶಾಲೆ ಪ್ರಾರಂಭಿಸಲಾಗುವುದು. ಯಲಬುರ್ಗಾ ತಾಲೂಕಿನ ತಳ್ಳೂರು ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್ ಹಾಗೂ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಗೋಶಾಲೆ ಪ್ರಾರಂಭಿಸಲು ಉದ್ದೇಶಿಸಿರುವ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಾನುವಾರುಗಳಿಗೆ ನೆರಳಿನ ವ್ಯವಸ್ಥೆಗೆ ಶೆಡ್ ನಿರ್ಮಾಣ, ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವ ಕುರಿತು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಅವರ ನಿರ್ದೇಶನದಂತೆ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಚಿಕ್ಕೊಪ್ಪ ಗ್ರಾಮದಲ್ಲಿಯೂ ಗೋಶಾಲೆ ಪ್ರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲ ಗೋಶಾಲೆಗಳಲ್ಲೂ ಜಾನುವಾರುಗಳಿಗೆ ಅಗತ್ಯ ನೆರಳಿನ ವ್ಯವಸ್ಥೆ ಹಾಗೂ ಸಮರ್ಪಕ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಬಿ.ಎಸ್. ಜಯರಾಂ ಅವರು ತಿಳಿಸಿದ್ದಾರೆ.
ಜಿಲ್ಲೆಯ ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಿರುವೆಡೆ ಗೋಶಾಲೆ ಪ್ರಾರಂಭ- ಡಾ. ಬಿ.ಎಸ್. ಜಯರಾಂ
Please follow and like us: