ಜಿಲ್ಲೆಯಲ್ಲಿ ಬರ : ದ್ರಾಕ್ಷಿ, ಮಾವು ಬೆಳೆಗಾರರು ತಪ್ಪದೆ ಬೆಳೆ ವಿಮೆ ಮಾಡಿಸಿ- ಆರ್. ರಾಮಚಂದ್ರನ್

ceo_koppal ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಹೀಗಾಗಿ ಈ ಬಾರಿ ದ್ರಾಕ್ಷಿ ಮತ್ತು ಮಾವು ಬೆಳೆಗಳ ಇಳುವರಿ ಆಶಾದಾಯಕವಾಗಿಲ್ಲ. ಆರ್ಥಿಕ ಸಂಕಷ್ಟದಿಂದ ಪಾರಾಗಲು ರೈತರು ಡಿ. ೧೦ ರ ಒಳಗಾಗಿ ಬೆಳೆ ವಿಮೆಗೆ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ರೈತರಿಗೆ ಮನವಿ ಮಾಡಿಕೊಂಡರು.
ಕೊಪ್ಪಳ ಜಿಲ್ಲೆಯ ಹಾಲಹಳ್ಳಿ, ಗಿಣಿಗೇರ ಸೇರಿದಂತೆ ವಿವಿಧ ಗ್ರಾಮಗಳ ಮಾವು ಮತ್ತು ದ್ರಾಕ್ಷಿ ತೋಟಗಳಿಗೆ ಮಂಗಳವಾರದಂದು ಭೇಟಿ ನೀಡಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಈ ವರ್ಷವೂ ಮುಂಗಾರು ಮಳೆ ವಿಫಲವಾಗಿದ್ದು, ಹಿಂಗಾರು ಕೂಡ ರೈತರ ಕೈಹಿಡಿದಿಲ್ಲ. ಕೃಷಿ ಬೆಳೆಗಾರರಿಗೆ ಹಿಂಗಾರು ಹಂಗಾಮಿಗೆ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ ಜಾರಿಯಲ್ಲಿದ್ದು, ಬೆಳೆ ಸಾಲ ಪಡೆಯುವ ಮತ್ತು ಪಡೆಯದಿರುವ ಎಲ್ಲ ರೈತರು ಬೆಳೆ ವಿಮೆ ಮಾಡಿಸಬೇಕು. ತೋಟಗಾರಿಕೆ ಬೆಳೆಗಳಾದ ಮಾವು, ದ್ರಾಕ್ಷಿ ಮತ್ತು ಮೆಣಸಿನಕಾಯಿ ಬೆಳೆಗೆ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ದ್ರಾಕ್ಷಿ ಮತ್ತು ಮಾವು ಬೆಳೆಗೆ ರೈತರು ವಿಮೆ ಮಾಡಿಸಲು ಡಿ. ೧೦ ಕೊನೆಯ ದಿನವಾಗಿದ್ದು, ಮೆಣಸಿನಕಾಯಿ (ನೀರಾವರಿ) ಬೆಳೆಗೆ ಡಿ. ೩೦ ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ, ತೋಟಗಾರಿಕೆ ಬೆಳೆಗಳು ಉತ್ತಮವಾಗಿ ಬರುವ ಸಂಭವ ಕಡಿಮೆ ಇದ್ದು, ರೈತರು, ಆರ್ಥಿಕ ಸಂಕಷ್ಟದಿಂದ ಪಾರಾಗಲು, ಬೆಳೆ ವಿಮೆ ಮಾಡಿಸುವುದು ಉತ್ತಮ. ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದಿರುವ ರೈತರು ಹೀಗೆ ಎಲ್ಲ ರೈತರು ಬೆಳೆ ವಿಮೆ ಮಾಡಿಸಿಕೊಂಡಲ್ಲಿ, ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಾಧ್ಯವಾಗಲಿದೆ. ಬೆಳೆ ವಿಮೆಗೆ ನೋದಣಿ ಮಾಡಿಸಲು ರೈತರು ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ /ಖಾತೆ ಪುಸ್ತಕ/ ಕಂದಾಯ ರಶೀದಿಯನ್ನು, ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಹಾಜರುಪಡಿಸಿ ನೊಂದಣಿ ಮಾಡಿಕೊಳ್ಳಬೇಕು. ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ವಿಮಾ ಕಂತು ಪಾವತಿಸಲು ರೈತರು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮತ್ತು ಇತರೆ ಸ್ಥಳೀಯ ಬ್ಯಾಂಕ್ ಗಳಿಗೆ ಸಂಪರ್ಕಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ರೈತರಲ್ಲಿ ಮನವಿ ಮಾಡಿಕೊಂಡರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಹಾಗೂ ಉಪಯೋಗಗಳು ಮತ್ತು ನೋಂದಣಿಗೆ ರೈತರು ಮಾಡಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

Please follow and like us:
error