ಜಿಲ್ಲಾ ಮಟ್ಟದ ಯುವಜನೋತ್ಸವ ರಾಜ್ಯಕ್ಕೆ ಆಯ್ಕೆಯಾದ ತಂಡ

yuvajanotsava_koppal
ಕೊಪ್ಪಳ ಡಿ. ೧೬. ನಗರದ ಸಾಹಿತ್ಯ ಭವನದಲ್ಲಿ ಈಚೆಗೆ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ ವಿವಿಧ ರೀತಿಯ ಗುಂಪು ಮತ್ತು ವಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡದ ವಿವರ.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಗುಂಪು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತಿಯ ಸ್ಥಾನ ಪಡೆದ ತಂಡ ಇದೇ ೨೩ ರಂದು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಲಾಗುವದು.
ಗುಂಪು ಸ್ಪರ್ಧೆಯಲ್ಲಿ ಜನಪದ ನೃತ್ಯ ಶ್ರೀ ಗೌರಿಶಂಕರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭಾಗ್ಯನಗರ (ಪ್ರಥಮ), ಜನಪದ ಗೀತೆಯಲ್ಲಿ ಶ್ರೀ ಕೊಟ್ಟೂರೇಶ್ವರ ಸಂಗೀತ ವಿದ್ಯಾಲಯ ಗಂಗಾವತಿ (ಪ್ರಥಮ), ಜ್ಯೋತಿ ಮಹಿಳಾ ಮಂಡಳ ಕುಷ್ಟಗಿ ಮತ್ತು ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ, ಕುಷ್ಟಗಿ (ದ್ವಿತಿಯ) ವಯಕ್ತಿಕ ಸ್ಪರ್ಧೆಯಲ್ಲಿ ತಬಲ ಸೋಲೋ ಕುಮಾರ ಶಂಕ್ರಪ್ಪ ಬಿನ್ನಾಳ (ಪ್ರಥಮ), ಕೊಳಲು ನಾಗರಾಜ ಶ್ಯಾವಿ ಭಾಗ್ಯನಗರ (ಪ್ರಥಮ), ಶಾಸ್ತ್ರೀಯ ಸಂಗೀತ ಹಿಂದುಸ್ಥಾನಿ ಪ್ರತಿಭಾ ಭಿಕ್ಷಾವತಿಮಠ (ಪ್ರಥಮ) ಮತ್ತು ಮಲ್ಲಿಕಾ ದೇವರಕೊಳ್ಳದ (ದ್ವಿತಿಯ) ಓಡಿಸ್ಸಿ ಕುಮಾರಿ ದೀಪಿಕಾ ವಾರಕರ್ (ಪ್ರಥಮ), ಆಶುಭಾಷಣ ಶ್ವೇತಾ ರಂಗಪಲ್ಲಿ (ಪ್ರಥಮ) ಮತ್ತು ಆನಂದ ಜವಳಿ (ದ್ವಿತಿಯ), ಕತಕ್ ಮಂಜುನಾಥ ಉಪ್ಪಾರ ಅಳವಂಡಿ (ಪ್ರಥಮ), ಭರತನಾಟ್ಯ ಚಿತ್ರಾ ಮ್ಯಾಳಿ (ಪ್ರಥಮ), ಮಂಜುನಾಥ ಉಪ್ಪಾರ (ದ್ವಿತಿಯ), ಅಲ್ತಾಫ್ ಹುಸೇನ್ (ತೃತೀಯ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಸಮಾರೋಪ ಸಮಾರಂಭ : ನಿರ್ಣಾಯಕರ ಪರವಾಗಿ ಮಾತನಾಡಿದ ಸಂಗೀತ ಶಿಕ್ಷಕ ಸದಾಶಿವ ಪಾಟೀಲ್, ಯುವಜನರು ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಇಂಥಹ ಕಾರ್ಯಕ್ರಮಗಳು ಪೂರಕ ವಾತಾವರಣ ಮೂಡಿಸುತ್ತವೆ, ಆದರೆ ವಿಜೇತರಿಗೆ ನಗದು ಬಹುಮಾನವನ್ನು ಸಹ ಸರಕಾರ ಕೊಡಬೇಕು ಅಂದರೆ ಇನ್ನಷ್ಟು ಹೆಚ್ಚು ಸ್ಪರ್ಧಿಗಳು ಬರುತ್ತಾರೆ ಎಂದ ಅವರು, ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿರುವ ಸಂಘಟಕರು ಶ್ಲಾಘನೀಯವೆಂದರು.
ಇದೇ ವೇಳೆ ಮಾತನಾಡಿದ ಕಲಾವಿದ ಜೀವನಸಾಬ್ ಬಿನ್ನಾಳ, ಯುವಜನರು ಇಂದು ತಮ್ಮ ಸಮಯವನ್ನು ಅನಾವಶ್ಯಕವಾಗಿ ಹಾಳು ಮಾಡಿಕೊಳ್ಳುತ್ತಿದ್ದಾರೆ, ಫೇಸ್‌ಬುಕ್ ವ್ಯಾಟ್ಸಪ್ ಟ್ವೀಟರ್‌ಗಳನ್ನೇ ಜೀವನ ಮಾಡಿಕೊಂಡಿರುವದರಿಂದ ಕಲೆ ಸಂಸ್ಕೃತಿ ಅವನತಿಯತ್ತ ಸಾಗುತ್ತಿವೆ, ಇದರ ಬಗ್ಗೆ ಇಲಾಖೆಗಳು ತುರ್ತಾಗಿ ಕ್ರಮವಹಿಸಬೇಕು ಎಂದರು.
ವೇದಿಕೆಯಲ್ಲಿ ಕೆ.ಎಂ.ಪಾಟೀಲ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಗೇರಿ, ಜಗದಯ್ಯ ಸಾಲಿಮಠ, ರಾಕೇಶ ಕಾಂಬ್ಳೇಕರ್, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ಪಂಡಿತ್, ಸುಭಾಸ ಕಲಾಲ್, ರಾಘವೇಂದ್ರ ಅರಕೇರಿ, ಯುವ ಸ್ಪಂದನದ ಭೀಮೇಶ ಕುರಿ, ಹನುಮಂತಪ್ಪ ವಗ್ಯಾನವರ, ರಂಗಸ್ವಾಮಿ ಗಂಗಾವತಿ ಇತರರು ಇದ್ದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸ್ವಾಗತಿಸಿದರು, ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಗದಯ್ಯ ಸಾಲಿಮಠ ವಂದಿಸಿದರು.

Please follow and like us:
error