ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

koppal-cm-siddaramayy-visit-koppal-draught-area (10): ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಮಳೆಗಾಲ ಪ್ರಾರಂಭ ಆಗುವವರೆಗೂ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಜಾನುವಾರುಗಳ ಹಿತರಕ್ಷಣೆಗೂ ಆದ್ಯತೆ ನೀಡಿ, ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಯನ್ನು ಕೂಡಲೆ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಬರ ಪರಿಹಾರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಜಿಲ್ಲೆಯಲ್ಲಿ ಈಗಾಗಲೆ ೬ ಗೋಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಇನ್ನೂ ಕೆಲವೆಡೆ ಗೋಶಾಲೆಗಳನ್ನು ಪ್ರಾರಂಭಿಸುವಂತೆ ಶಾಸಕರುಗಳು ಒತ್ತಾಯಿಸಿದ್ದಾರೆ. ಅಗತ್ಯವಿರುವ ಎಲ್ಲೆಡೆ ಗೋಶಾಲೆಗಳನ್ನು ಪ್ರಾರಂಭಿಸಿ, ಜಾನುವಾರುಗಳಿಗೆ ಸಮರ್ಪಕ ಮೇವು ಮತ್ತು ಕುಡಿಯುವ ನೀರು ಪೂರೈಸಬೇಕು. ಅದೇ ರೀತಿ ಮೇವು ಸಂಗ್ರಹಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ಮೇವು ಬ್ಯಾಂಕ್ ಸ್ಥಾಪಿಸಿ ಮೇವು ದಾಸ್ತಾನು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೧೨೯೫೧೦ ಹೆ. ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ೬೪. ೪೪ ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಿತ್ತು. ಈಗಾಗಲೆ ೧೧೪೦೧೫ ರೈತರಿಗೆ ೪೬. ೧೮ ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಮೊತ್ತ ವಿತರಣೆ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲೂ ಮಳೆ ವಿಫಲದ ಕಾರಣ ೧೪೩೯೮೯ ಹೆ. ನಷ್ಟು ಹೆಚ್ಚಿನ ಬೆಳೆ ಹಾನಿಯಾಗಿದೆ. ರಾಜ್ಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಹಾನಿಯಾಗಿದ್ದು, ೧೪೧೬ ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ೭೨೩ ಕೋಟಿ ರೂ. ಮಾತ್ರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅನುದಾನ ಬಂದ ಕೂಡಲೆ ಹಿಂಗಾರು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪಾವತಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು : ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ೦೬ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ೧೧ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ನೀರು ಸರಬರಾಜು ಮಾಡಲಾಗುತ್ತಿದೆ, ಮುಂಬರುವ ದಿನಗಳಲ್ಲಿ ಟ್ಯಾಂಕರ್ ಮೂಲಕ ಸಾಗಾಣಿಕೆ ಮಾಡಬಹುದಾದ ಒಟ್ಟು ೧೦೪ ಗ್ರಾಮಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಗೆ ವಿವರಣೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಜನ-ಜಾನುವಾರುಗಳಿಗೆ ನಿಗದಿತ ಪ್ರಮಾಣದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ. ಕುಡಿಯುವ ನೀರಿನ ವಿಷಯದಲ್ಲಿ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೆ ಎಲ್ಲ ಜಿಲ್ಲೆಗಳಿಗೆ ತುರ್ತು ಕುಡಿಯುವ ನೀರು ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಮಳೆಗಾಲ ಪ್ರಾರಂಭವಾಗುವವರೆಗೂ ಸಮರ್ಪಕವಾಗಿ ನೀರು ಪೂರೈಸಿ, ಜನ-ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನೀರು ನೀಡಿ, ಖಾಸಗಿ ಬೋರ್‌ವೆಲ್ ಮೂಲಕವಾದರೂ ಚಿಂತೆಯಿಲ್ಲ, ಅಂತಹವರಿಗೆ ಉದಾರವಾಗಿ ಹಣ ನೀಡಿ, ಟ್ಯಾಂಕರ್ ಮೂಲಕ ನೀರು ಪೂರೈಸುವಾಗಲೂ, ಜನಸಂಖ್ಯೆ ಆಧಾರವಾಗಿ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ನೀರು ಪೂರೈಸಿ. ಕುಡಿಯುವ ನೀರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಗಳಿಗೆ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ವಿಷಯದಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಗಳು ಎಚ್ಚರಿಕೆ ನೀಡಿದರು.
ಉದ್ಯೋಗ ನೀಡಿ : ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇದ್ದು, ಕೂಲಿ ಕಾರ್ಮಿಕರಿಗೆ ಕೆಲಸದ ಅಗತ್ಯವಿದೆ. ಜಿಲ್ಲೆಯಲ್ಲಿ ಈ ವರ್ಷ ೨೪ ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಬೇಸಿಗೆಯಲ್ಲಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗದ ಅಗತ್ಯತೆ ಇರುತ್ತದೆ. ಮುಂದೆ ಮಳೆಗಾಲ ಪ್ರಾರಂಭವಾದಾಗ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕೆ ಕೂಲಿ ಕಾರ್ಮಿಕರ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಈವರೆಗೆ ಕೇವಲ ೧. ೦೩ ಲಕ್ಷ ಮಾನವ ದಿನಗಳನ್ನು ಮಾತ್ರ ಸೃಜಿಸಲಾಗಿದೆ. ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ಸಾಧನೆ ಕಡಿಮೆ ಇದೆ. ಈ ರೀತಿ ಆದಲ್ಲಿ ಈ ವರ್ಷ ಗುರಿ ಸಾಧನೆ ಕಷ್ಟಸಾಧ್ಯ. ಜೂನ್ ತಿಂಗಳಿನಾಂತ್ಯದ ವೇಳೆಗೆ ಕನಿಷ್ಟ ೩ ಲಕ್ಷ ಮಾನವ ದಿನಗಳನ್ನು ಸೃಜಿಸಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು. ಪ್ರತಿ ವಾರಕ್ಕೊಮ್ಮೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಸಭೆಗೆ ಆಯಾ ಶಾಸಕರನ್ನೂ ಆಹ್ವಾನಿಸಬೇಕು. ಈಗಾಗಲೆ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತಿದ ಮಣ್ಣನ್ನು ಸಾಗಿಸಲು ಜೆಸಿಬಿ ಯಂತ್ರ ಬಳಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ತನಿಖೆಗೆ ಆದೇಶ : ಜಿಲ್ಲೆಯಲ್ಲಿ ಒಟ್ಟು ೧೬ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದ್ದು, ಈಗಾಗಲೆ ೯ ಯೋಜನೆಗಳು ಪೂರ್ಣಗೊಂಡಿವೆ. ೦೨ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಉಳಿದ ಇನ್ನೂ ೦೫ ಅನುಷ್ಠಾನಗೊಳ್ಳಬೇಕಿದೆ. ಆದರೆ ಈಗಾಗಲೆ ಪೂರ್ಣಗೊಂಡಿರುವ ಹಾಗೂ ಪೂರ್ಣಗೊಳ್ಳಬೇಕಿರುವ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹಲವು ಯೋಜನೆಗಳಲ್ಲಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಉದ್ದೇಶಿತ ಯೋಜನೆಯಂತೆ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂದು ಯಲಬುರ್ಗಾ ಮತ್ತು ಕೊಪ್ಪಳ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಎಲ್ಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಸಮಗ್ರ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರಿಗೆ ಸೂಚನೆ ನೀಡಿದರು.
ಅಧಿಕಾರಿಗಳಿಗೆ ತಾಕೀತು : ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬರ ಪರಿಸ್ಥಿತಿ ನಿವಾರಣೆ ಆಗುವವರೆಗೂ, ಗ್ರಾಮಗಳಿಗೆ ಭೇಟಿ ನೀಡಬೇಕು. ಅಲ್ಲಿನ ಜನರನ್ನು ಸಂಪರ್ಕಿಸಬೇಕು. ಜನರೊಂದಿಗೆ ಸಮಾಲೋಚಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ನಿರ್ಲಕ್ಷ್ಯ, ಅಸಡ್ಡೆತನ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಇಬ್ಬರು ಅಧಿಕಾರಿಗಳ ಅಮಾನತು : ಜಿಲ್ಲೆಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ನಡೆಸಿದ ಜಂಟಿ ಸಮೀಕ್ಷೆ ಸಮರ್ಪಕವಾಗಿಲ್ಲ, ಅಧಿಕಾರಿಗಳು ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸದ ಕಾರಣಕ್ಕೆ ಯಲಬುರ್ಗಾ ತಹಸಿಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಹಾಗು ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರನ್ನು ಅಮಾನತುಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಉಪಸ್ಥಿತರಿದ್ದರು.

Please follow and like us:
error