ಗ್ರಾ.ಪಂಗಳು ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಜಿಪಂ ಸಿಇಒ ಸೂಚನೆ

: ಗ್ರಾಮ ಪಂಚಾಯಿತಿಗಳು ಮಕ್ಕಳ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಒದಗಿಸಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಯನ್ನು ಕ್ರೀಯಾಶೀಲವಾಗಿ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿದ ಮಕ್ಕಳ ಹಕ್ಕುಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿ ಅನುಷ್ಠಾನ ತರುವ ಕುರಿತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಗ್ರಾಮ ಸಭೆ ನವೆಂಬರ್ ೧೪ ರಿಂದ ೩೦ ರೊಳಗಾಗಿ ಆಯೋಜಿಸಲು ಆದೇಶಿಸಲಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಕ್ರೀಯಾಶೀಲವಾಗಿ ನಡೆಸಬೇಕು. ಮಕ್ಕಳ ಹಕ್ಕುಗಳ ಗ್ರಾಮಸಭೆ ಮಗುವಿನ ಘನತೆ, ಗೌರವ ಮತ್ತು ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಉತ್ತಮ ವೇದಿಕೆಯಾಗಿದೆ. ಪ್ರತಿ ಮಗು ಶಿಕ್ಷಣದ ಮುಖ್ಯವಾಹಿಸಿಗೆ ಬರಬೇಕು. ಗ್ರಾಮಸಭೆಯಲ್ಲಿ ಮಕ್ಕಳು ವ್ಯಕ್ತಪಡಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಗ್ರಾಮ ಪಂಚಾಯತ್‌ಗಳು ಒದಗಿಸಬೇಕು ಮತ್ತು ಈ ಕುರಿತು ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ ಸಹಾಯಕ ಕಾರ್ಯದರ್ಶಿ ಶರಣಪ್ಪ ಮಾತನಾಡಿ ಮಕ್ಕಳು ಸುಖ, ಶಾಂತಿ, ನೆಮ್ಮದಿಯಿಂದ ಕಲಿಯುವ ವಾತಾವರಣ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ ಮಹತ್ವದ್ದಾಗಿದೆ. ಜಿಲ್ಲೆಯು ಗ್ರಾಮ ಸಭೆ ಆಯೋಜಿಸುವುದರಲ್ಲಿ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಮಾಜಿ ಸದಸ್ಯ ವಾಸುದೇವ ಶರ್ಮಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸಭೆಯ ಪೂರ್ವಸಿದ್ಧತೆ, ಆಯೋಜನೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅನುಷ್ಠಾನದ ಕುರಿತು ತರಬೇತಿ ನೀಡಿದರು. ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಂಯೋಜಕ ಹರೀಶ್.ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ, ಮಕ್ಕಳ ವಿಷೇಶ ಪೊಲೀಸ್ ಘಟಕದ ಸಮಾಜ ಸೇವಕ ಬಸಪ್ಪ ಹಾದಿಮನಿ ಹಾಗೂ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಲ್ಲಪ್ಪ ತಳವಾರ ಕಾರ್ಯಕ್ರಮ ನಿರೂಪಿಸಿದರು.ಶಿವರಾಮ ವಂದಿಸಿದರು.

Leave a Reply