ಗ್ರಾಮೀಣ ಕುಡಿಯುವ ನೀರು ಯೋಜನೆ ಅಕ್ರಮ : ೩೧ ಜನರ ವಿರುದ್ಧ ಎಸಿಬಿ ನಲ್ಲಿ ಪ್ರಕರಣ ದಾಖಲು

ಕೊಪ್ಪಳ ಜಿಲ್ಲೆಯಲ್ಲಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ನಡೆದಿದೆ ಎನ್ನಲಾದ ೨೩. ೪೧ ಕೋಟಿ ರೂ. ಗಳ ಅಕ್ರಮ ಪ್ರಕರಣ ಸಂಬಂಧಿಸಿದಂತೆ ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ೩೧ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆಯ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಕೊಪ್ಪಳ ಎಸಿಬಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಕೇಂದ್ರ ಕಚೇರಿ ಮತ್ತು ಬಳ್ಳಾರಿಯ ಎಸಿಬಿ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಬಂದ ದೂರಿನ ಅನ್ವಯ ಕೊಪ್ಪಳದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ೨೦೧೩ ರ ಸೆಪ್ಟಂಬರ್ ೨೧ ರಿಂದ ೨೦೧೪ ರ ಫೆಬ್ರವರಿ ೦೬ ರವರೆಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪಾವತಿಸಿರುವ ೨೩,೪೧,೮೬,೪೭೪ ರೂ. ಗಳ ಕಾಮಗಾರಿಯಲ್ಲಿ ಕಾರ್ಯಪಾಲಕ ಇಂಜಿನಿಯರ್ ರವಿಪ್ರಸಾದ್, ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳಾದ ಶರಣಪ್ಪಗೌಡ, ಬಿ.ಸಿ. ತೋಟಗಂಟಿ, ಎಂ.ಎನ್. ಪಾಟೀಲ್, ಜಾಕೀರ ಹುಸೇನ ಅಲ್ಲದೆ ಸಹಾಯಕ, ಕಿರಿಯ ಇಂಜಿನಿಯರ್‌ಗಳು, ಅಧಿಕಾರಿಗಳು ಸೇರಿದಂತೆ ಒಟ್ಟು ೩೧ ಜನರ ಮತ್ತು ೧೫೦೩ ಬಿಲ್ಲುಗಳ ಪಾವತಿ ಪಡೆದಿರುವ ಗುತ್ತಿಗೆದಾರರು ಹಾಗೂ ಇತರರ ವಿರುದ್ಧ ಸರ್ಕಾರಕ್ಕೆ ವಂಚನೆ ಕುರಿತಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ೧೯೮೮ ಹಾಗೂ ಭಾರತ ದಂಡ ಸಂಹಿತೆಯ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆಯ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಕೊಪ್ಪಳ ಎಸಿಬಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ

Leave a Reply