ಗೋಸೇವನೆ ವಿರುದ್ಧ ನೆಲೆ ಮತ್ತು ರಾಜಕೀಯ ಷಂಡ್ಯಂತ್ರ‬

ಗೋ-ಮಾಂಸ-ಸೇವನೆಗೋ ಸೇವನೆಯು ನಿರಂತರವಾಗಿ ಸದಾ ಚಚರ್ೆಯಲ್ಲಿರುವ ವಿಷಯವೇ ಆಗಿದೆ. ನಿಷೇಧಿಸಬೇಕು ಎಂಬ ಕೋಮುವಾದಿಗಳ ಗುಂಪು ಹಾಗೂ ನಿಷೇಧಿಸಬಾರದು ಎಂಬ ಪ್ರಗತಿಪರರ ಗುಂಪು. ಹೀಗೆ ನಿತ್ಯ ಚಾಲ್ತಿಯಲ್ಲಿರುವ ವಸ್ತು ವಿಷಯವಾಗಿ ಗೋ ನಿಂತಿದೆ. ಏಪ್ರಿಲ್ 18 2016 ರಂದು ರಾಜ್ಯದ ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆ ನೀಡಿದ್ದು ಮತ್ತು 04 ಮೇ 2016 ರಂದು ಶಿವಮೊಗ್ಗದಲ್ಲಿ ಸಂಕೇತಿ ಬ್ರಾಹ್ಮಣರಿಂದ ಮೇಕೆ ಯಾಗ ನಡೆಯಿತು ಎಂದು ಪ್ರಜಾವಾಣಿಯಲ್ಲಿ ವರದಿಯಾದದ್ದು ಮುಂತಾದವು ಸೇರಿದಂತೆ ಚರ್ಚೆಯಲ್ಲಿ ಹಾದು ಹೋಗುತ್ತಲೇ ಇವೆ. ಪರಮೇಶ್ವರ್ ಅವರು ಬ್ರಾಹ್ಮಣರು ಮಾಂಸ ತಿನ್ನುತ್ತಾರೆಂದು ಹೇಳಿಕೆ ಕೊಟ್ಟಿದ್ದಾಗ ಇಡೀ ಬ್ರಾಹ್ಮಣ ಸಮೂಹವೇ ಅವರ ವಿರುದ್ಧ ತಿರುಗಿ ಬಿದ್ದತ್ತು. ವೇದಗಳ ಕಾಲದಲ್ಲಿಯೇ ಕುದುರೆ, ಜಿಂಕೆ, ಹಸು, ಕಾಡು ಎಮ್ಮೆ ಹೀಗೆ ಹತ್ತಾರು ಪ್ರಾಣಿಗಳನ್ನು ತಿನ್ನುತ್ತಿದ್ದ ಹಿಂದೂಗಳು ಏಕಾ ಏಕಿ ಪರಮೇಶ್ವರ್ ವಿರುದ್ಧ ತಿರುಗಿ ಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ? ಹಾಗೆಯೆ ಶಿವಮೊಗ್ಗದ ಮತ್ತೂರಿನಲ್ಲಿ ಏಪ್ರಿಲ್ 22 ರಿಂದ 27ರವರೆಗೆ 8 ಆಡುಗಳನ್ನು ಯಾಗಮಾಡಿ ಬಲಿಕೊಟ್ಟು ಸಂಕೇತಿ ಬ್ರಾಹ್ಮಣರು ತಿಂದಿದ್ದಾರೆ. ಜತೆಗೆ 3ಸೋಮರಸ(ಯಂಡ)ವನ್ನು ಕುಡಿದಿದ್ದಾರೆ. ಆದರೆ ಇದು ಮಾಧ್ಯಮದಲ್ಲ ಚರ್ಚೆಗೆ ಸಿಕ್ಕ ಮೇಲೆ ಅದು ಆಡು ಅಲ್ಲ, ನಾವು ತಿಂದೆ ಇಲ್ಲ, ನಾವು ಕುಡಿದೆ ಇಲ್ಲ ಎಂದು ಸಮರ್ಥಿಸುತ್ತಾ ತಿಂದ ಬಾಯಿಗಳನ್ನು ವರೆಸಿಕೊಳ್ಳುತ್ತಿದ್ದರು. ಇರಲಿ ಇದೇನು ಹೊಸದಲ್ಲ ರಾಮಾಯಣದಲ್ಲಿಯೇ ಸೀತೆ ಮತ್ತು ರಾಮ ಸೋಮರಸ ಪ್ರಿಯರಾಗಿದ್ದರು ಎಂಬುದು ವ್ಯಕ್ತವಾಗಿರುವಾಗ ಇದೇನು ಹೊಸದೇನಲ್ಲ. ಆದರೂ ನಾವು ಮಾಂಸಹಾರ ವಿರೋಧಿಗಳು ಎಂದು ಹೇಳುವ ಇವರ ಹೇಳಿಕೆಗಳು ಹಾಸ್ಯಸ್ಪದದಂತಿವೆ.
ನಾನು ದಿನಾಂಕ ಮೇ 17, 2016 ರಂದು ಬೆಂಗಳೂರಿನಲ್ಲಿ ಹಲವು ಕಡೆ ಗೋ ಸೇವನೆ ಮಾಡುತ್ತಿದ್ದ ಚಿತ್ರಪಟಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದಾಗ, ಇದಕ್ಕೆ ಸಂಬಂಧಿಸಿದಂತೆ ಹಲವು ರಿತಿಯ ವಿರೊಧಗಳು ವ್ಯಕ್ತವಾದವು. ಹಾಗೆಯೇ ಕೆಲವರು ತೇಜೋವಧೆ ಮಾಡಿದ್ದರು. ಇರಲಿ ಅವರು ಹೇಳುತ್ತಾರೆಂದು ನನ್ನ ಸಾಂಸ್ಕೃತಿಕ ಹಕ್ಕಿಗೆ ದುರಾಭಿಮಾನಿಯಾಗಲಾರೆ. ಆಹಾರ ಸಂಸ್ಕೃತಿಯು ಅವರವರ ಹಕ್ಕು. ಇನ್ನೊಬ್ಬರ ಆಹಾರದ ಮೇಲೆ ಸವಾರಿ ಮಾಡುವುದು ಅಯೋಗ್ಯತನದ ಒಂದು ಭಾಗವೇ ಆಗಿದೆ. ಪ್ರತಿಯೊಂದು ಆಹಾರವು ಸಾಂಸ್ಕೃತಿಕ ಚೌಕಟ್ಟಿನೊಳಗೆ ಗುರುತಿಸಿಕೊಂಡಿದೆ. ಸಾಂಸ್ಕೃತಿಕ ಪ್ರತ್ಯೆಕತೆಯ ನಡುವೆಯು ಸಾಮಾಜಿಕ ಒಳಗೊಳ್ಳುವಿಕೆಯ ಕ್ರಿಯೆ ಇರಬೇಕು ಎಂಬ ಕನಿಷ್ಟ ಪ್ರಜ್ಷೆ ಕೇಸರಿ ಗುಂಪುಗಳಿಗೆ ಇಲ್ಲವಾಗಿದೆ.
ಗೋ ಮಾಂಸ ಹಿಂದೂಗಳ ಅವಿಭಾಜ್ಯ ಅಂಗವೇ ಆಗಿತ್ತು. ಅದನ್ನು ಐತಿಹಾಸಿಕ ಪ್ರಾಚೀನ ಗ್ರಂಥಗಳು ಸಹ ಉಲ್ಲೇಖಿಸುತ್ತವೆ. ರಂತಿದೇವನ ಸಾಮ್ರಾಜ್ಯದಲ್ಲಿ ಮೋಜಿನ ಕೂಟದಲ್ಲಿ ದನದ ಮಾಂಸ ತಿನ್ನುತ್ತಿದ್ದರು ಎಂದು ಮೇಘದೂತದಲ್ಲಿ ಕಾಳಿದಾಸನೇ ಹೇಳಿದ್ದಾನೆ. ಆದರೂ ಕೂಡ ಮಾಂಸದ ಧ್ವಂಧ್ವ ಇಂದಿಗೂ ನಿಂತಿಲ್ಲಾ. ಹಿಂದೂಗಳು ಗೋವನ್ನು ಸಾಕುತ್ತಿದ್ದರು ಅದು ನಿಜವೇ ಇರಬಹುದು. ಆದರೆ ಯಾಕೆ ಸಾಕುತ್ತಿದ್ದರು? ಅದರ ಮಾಂಸಕ್ಕಾಗಿ ಸಾಕುತ್ತಿದ್ದರು. ವೇದಗಳ ಕಾಲದಲ್ಲಿ ಊಟಕ್ಕೆ ಪ್ರಮುಖವಾಗಿ ಗೋವನ್ನು ಬಳಸುವುದರೊಂದಿಗೆ ಯಾಗ-ಯಜ್ಞಗಳಂತಹ ಕಾರ್ಯಕ್ಕೆ ಗೋವಧೆ, ಗೋಮಾಂಶ ನೈವೇಧ್ಯ ಮತ್ತು ಭಕ್ಷಣೆ ಮುಂತಾದವುಗಳಿಗೆ ಋತ್ವಿಜರು ಪಾಲ್ಗೊಳ್ಳುತ್ತಿದ್ದರು ಎಂಬುದನ್ನು ಈಗಾಗಲೇ ನಾವು ವೇದಗಳ ಕಾಲದ ಇತಿಹಾಸದಿಂದ ಇಲ್ಲಿಯ ತನಕ ಓದಿಕೊಂಡೇ ಬರುತ್ತಿದ್ದೇವೆ. ಹಿಂದೂಗಳು ಗೋ ಸೇವನೆ ಮಾಡುತ್ತಿದ್ದರು ಕೂಡ ಕಾಲಾನಂತರದಲ್ಲಿ ಅದನ್ನು ಬಿಟ್ಟಿರಬಹುದು ಅಥವಾ ಕದ್ದು ಮುಚ್ಚಿ ತಿನ್ನುತ್ತಿರಬಹುದು. ಆದರೆ ತಿಂದು ಬದುಕಿರುವುದಂತು ದಿಟವೇ ಆಗಿದೆಯಲ್ಲ. ಆದರೂ ರಾಜಕೀಯ ಹಿಚ್ಚಾಶಕ್ತಿ ಮತ್ತು ಸಾಮಾಜಿಕ ಚೌಕಟ್ಟಿನ ಇಬ್ಬಂಧಿತನಕ್ಕೆ ಗೋವನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು ನಾಚಿಗೇಡು. ಅದಕ್ಕೂ ಮುನ್ನ ನಾವು ಗೋವು ಈ ದೇಶದಲ್ಲಿ ಪ್ರತಿಯೊಬ್ಬರು ಹೇಗೆ ಬಳಸಲ್ಪಡುತ್ತಿದ್ದಾರೆ ಎಂಬುದನ್ನು ತಿಳಿಯಬೇಕಿದೆ.
ಗೋ ಮಾಂಸವು ವೈದ್ಯಕೀಯ ಕ್ಷೇತ್ರದಲ್ಲಿ, ಉಪಕರಣಗಳ ಮೂಲಕ ಮತ್ತು ಆಹಾರ ಕ್ರಮವಾಗಿ ಪ್ರತಿಯೊಬ್ಬರಲ್ಲೂ ಬಳಕೆಯಾಗುತ್ತಿದೆ. ಕೆಲವರು ತಿಂದರೆ ಮತ್ತೆ ಕೆಲವರು ವೈದ್ಯಕೀಯವಾಗಿ ಬಳಸಿಕೊಳ್ಳುತ್ತಾರೆ. ಕೆಲವರಿಗೆ ಉಪಕರಣಗಳ ರೂಪದಲ್ಲಿರುತ್ತದೆ. ಹೀಗೆ ಒಂದಲ್ಲ ರಿತಿಯಲ್ಲಿ ಗೋವು ಬಳಕೆಯಾಗುತ್ತಿದೆ. ಆದರೆ ತಿನ್ನುವವರನ್ನು ಮಾತ್ರ ಪ್ರಶ್ನೆ ಮಾಡುತ್ತಿರುವುದು ಏಕೆ? ವೈದ್ಯಕೀಯಕ್ಕು ದನವನ್ನು ಕಡಿಯಲೇ ಬೇಕು. ಉಪಕರಣಗಳ ತಯಾರಿಕೆಗೂ ದನ ಕಡಿಯಲೇ ಬೇಕು. ಹಾಗೆಯೇ ತಿನ್ನುವುದಕ್ಕು ಕಡಿಯಲೇ ಬೇಕು. ಆದರೆ ಅದಲ್ಲೆವನ್ನು ಹೊರತು ಪಡಿಸಿ ಕೇವಲ ತಿನ್ನುವವರನ್ನು ಮಾತ್ರ ವಿರೋಧಿಸುತ್ತಿರುವುದೇಕೆ? ಹಸು ಮತ್ತು ಎಮ್ಮೆ ಚರ್ಮಗಳಿಂದ ಬೆಲ್ಟ್ ತಯಾರಾಗುತ್ತದೆ. ಆದರೆ ಇವರು ಬೆಲ್ಟ್ ಹಾಕುವವರನ್ನು ಏಕೆ ಪ್ರಶ್ನೆ ಮಾಡುವುದಿಲ್ಲ. ದನದ ಗೊರಸು ಮತ್ತು ಕೊಡುಗಳಿಂದ ಜೆಲ್ಲಿ ತಯಾರಾಗುತ್ತದೆ, ಆದರೆ ಮನೆ ಕಟ್ಟುವವರನ್ನು ಇವರು ಏಕೆ ವಿರೋಧಿಸುವುದಿಲ್ಲ. ದನದ ಎಲುಬಿಂದ ಸಕ್ಕರೆ ತಯಾರಾಗುತ್ತಿದೆ. ಕೊಬ್ಬಿನಿಂದ ವಿಶೆಷ ಬಗೆಯ ಎಣ್ಣೆ ತಯಾರಾಗುತ್ತದೆ. ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಅವರಿಗೆ ಕೊಡುವ ಚುಚ್ಚು ಮದ್ದು ಕೂಡ ದನದ ಅಂಶವನ್ನೆ ಒಳಗೊಂಡಿರುತ್ತದೆ. ಕಾರಿನ ಇಂಧನ ಚಳಿಯಲ್ಲು ಕೆಡದಂತೆ ನೋಡಿಕೊಳ್ಳುವುದಕ್ಕೂ ದನದ ಕೊಬ್ಬನ್ನೆ ಬಳಸಲಾಗುತ್ತದೆ. ಹೆಣ್ಣಾಗಲಿ ಅಥವಾ ಗಂಡಾಗಲಿ ಹಚ್ಚಿಕೊಳ್ಳುವ ಸೌಂದರ್ಯ ವರ್ಧಕಕ್ಕೂ ದನ ಬೇಕು. ಹಾಗೆಯೆ ನಾವು ಬೆಳಗ್ಗೆ ಎದ್ದು ತಿಕ್ಕುವ ಕೋಲ್ಗೇಟ್, ಪೆಪ್ಸುಡೆಂಟ್ ಮುಂತಾದ ಟೂಥ್ ಪೇಸ್ಟ್ ಗಳು ತಯಾರಾಗಬೇಕಾದರೆ ದನ ಬೇಕೆ ಬೇಕು. ಹೀಗೆ ನಾವು ದಿನನಿತ್ಯ ಬಳಸುವ ಬಹುತೇಕ ನಿತ್ಯ ಬಳಕೆ ವಸ್ತುಗಳಲ್ಲಿ ದನವಿದೆ. ದನವು ಇಲ್ಲವಾದಲ್ಲಿ ಬಹುತೇಕ ವಸ್ತುಗಳು ತಯಾರಾಗುವುದೇ ಕಷ್ಟಕರವಾಗಿದೆ. ಈ ಮೇಲೆ ತಿಳಿಸಿದಂತೆ ವಸ್ತುಗಳು ತಯಾರಾಗಬೇಕೆಂದರೆ ದನವನ್ನು ಕಡಿಯಲೇ ಬೇಕು. ನಿಮಗೆ ಗೋ ಮಾತೆಯ ಮೇಲೆ ಪ್ರಿತಿ ಇದ್ದರೆ. ಆಕೆ ನಿಮ್ಮ ತಾಯಿಯೆ ಆಗಿದ್ದರೆ, ನಿಮ್ಮ ತಾಯಿಯನ್ನು ರಕ್ಷಣೆ ಮಾಡಿಕೊಳ್ಳಬೇಕೆನ್ನುವ ಸ್ವಾಭಿಮಾನವಿದ್ದರೆ, ಜೆಲ್ಲಿ ನಿಲ್ಲಿಸಿ, ಇಂಧನ, ಸೌಂದರ್ಯ ವರ್ಧಕ, ಟೂಥ್ ಪೇಸ್ಟ್, ಬೆಲ್ಟ್, ವೈದ್ಯಕೀಯ ಟ್ಯಾಬ್ಲೆಟ್, ಸಿರಿಂಜ್, ಎಣ್ಣೆ ಮುಂತಾದ ವಸ್ತುಗಳನ್ನು ನಿಲ್ಲಿಸಿ. ಅದರ ಬಗ್ಗೆ ಮಾತನಾಡದೆ ಕೇವಲ ತಿನ್ನುವುದರ ಬಗ್ಗೆ ಮಾತ್ರ ಮಾತನಾಡುವುದು ಅನಕ್ಷರಸ್ಥರ ಲಕ್ಷಣವೇ ಹೊರತು. ಆತ್ಮ ವಿಮರ್ಶಕರ ಲಕ್ಷಣವಲ್ಲ.
ಆರ್ ಎಸ್ ಎಸ್, ಭಾಜಪ ಮುಂತಾದ ಹಿಂದೂ ಪರ ಕೆಲಸ ಮಾಡುವ ಪಕ್ಷ ಮತ್ತು ಸಂಘಟನೆಗಳು ತಲೆ ಎತ್ತಿದ ಮೇಲೆ ಗೋವನ್ನು ತಮ್ಮ ಸಂಘಟನೆಯ, ಧರ್ಮದ ಮತ್ತು ಪಕ್ಷದ ಮುಖವಾಣಿಯನ್ನಾಗಿ ಮಾಡಿಕೊಳ್ಳಲಾಗಿದೆ. ಆ ಮೂಲಕ ಗೋವನ್ನು ಪ್ರಿತಿಸುವ, ತಾಯಿ ಎನ್ನುವ ನಾಟಕವಾಡುತ್ತಾ ಮತಬ್ಯಾಂಕ್ ರಾಜಕಾರಣ ಮತ್ತು ಔದ್ಯಮಿಕ ರಾಜಕಾರಣ ಮಾಡಲಾಗುತ್ತಿದೆ. ಈ ದೇಶದಲ್ಲಿ ಕ್ರಿಶ್ಚಿಯನ್, ಮುಸಲ್ಮಾನ ಮತ್ತು ದಲಿತರು ಬಹುತೇಕವಾಗಿ ದನದ ಮಾಂಸ ತಿನ್ನುವವರೆ ಆಗಿದ್ದಾರೆ. ಇವರು ಈ ಕಾಲಕ್ಕೆ ರೂಢಿಸಿಕೊಂಡವರಲ್ಲ, ಪೂವರ್ಿಕರ ಕಾಲದಿಂದಲೂ ಇವರು ಕೂಡ ದನದ ಮಾಂಸಹಾರಿಗಳೆ ಆಗಿದ್ದಾರೆ. ಆದ್ದರಿಂದ ಅವರನ್ನು ದನದ ಮಾಂಸದಿಂದ ದೂರವಿರಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಷ್ಟೆಲ್ಲಾ ವಸ್ತುಗಳನ್ನು ತಯಾರು ಮಾಡುವ ಮತ್ತು ಅದನ್ನು ಉತ್ಪಾದಿಸುವ ಕಂಪನಿಗಳನ್ನು ವಿರೋಧಿಸದೆ ಕೇವಲ ತಿನ್ನುವವರನ್ನಷ್ಟೆ ವಿರೊಧಿಸುವುದರಲ್ಲಿಯೂ ಲಾಭದಾಯಕ ರಾಜಕಾರಣವಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ. ಆ ಕಂಪನಿಗಳಿಗೆ ಹಿಂದೂಗಳೆ ದನದ ಅಂಶಗಳನ್ನು ಪೂರೈಸುವವರಾಗಿದ್ದಾರೆ. ಇದರ ಜತೆಗೆ ವಿದೇಶಗಳಿಗೆ ರಫ್ತು ಮಾಡುವ ಕಂಪನಿಗಳು ಕೂಡ ಇವರದೇ ಬಹುತೇಕ ಏಜೆನ್ಸಿಗಳಿವೆ. ಆ ಮೂಲಕ ಕೋಟ್ಯಾಂತರ ಲಾಭಗಳಿಸಲಾಗುತ್ತಿದೆ. ಭಾರತದಲ್ಲಿ ದನಗಳು ಎಥೇಚ್ಚವಾಗಿ ಸಿಕ್ಕಷ್ಟು ಅತಿ ಹೆಚ್ಚು ಲಾಭವಿದೆ. ಆದರೆ ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ದಲಿತರು ದನದ ಮಾಂಸ ಪ್ರಿಯರಾಗಿರುವುದರಿಂದ ಅವರ ಕಂಪನಿಗಳ ವಹಿವಾಟಿಗೆ ಸಮಸ್ಯೆಯಾಗುತ್ತದೆ. ಆ ಕಾರಣಕ್ಕೆ ಅವರು ಕಂಪನಿಗಳ ಬಗ್ಗೆ ಚಕಾರವನ್ನೆ ಎತ್ತುವುದಿಲ್ಲ. ಅದರ ಜತೆಗೆ ಅದನ್ನು ಧಾಮರ್ಿಕ ಚೌಕಟ್ಟಿನಲ್ಲಿ ನಿಲ್ಲಿಸಿದ್ದು ಮತ ಬ್ಯಾಂಕ್ ರಾಜಕಾರಣ. ಅಧಿಕಾರದ ಪ್ರಲಾಪಕ್ಕಾಗಿ ದಲಿತರು, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ತಿನ್ನದಂತೆ ಮಾಡಲು ಗೋವನ್ನು ಧಾರ್ಮೀಕರಣಗೊಳಿಸಲಾಗಿದೆ. ಈ ವಿಷಯ ಕೇಸರಿ ಮತೀಯವಾದಿಗಳಿಗೂ ಗೊತ್ತು. ಆದರೆ ಇದು ಸಾಮಾನ್ಯ ಜನರಿಗೆ ಅರ್ಥವಾಗದಂತೆ ಮಾಡಲಾಗಿದೆ. ಧಾರ್ಮಿಕತೆ, ನಂಬಿಕೆ, ದೇವರು, ಮಾತೆ ಎನ್ನುವ ಬಂಧನದಲ್ಲಿ ಕೂಡಿ ಹಾಕಲಾಗಿದೆ. ಇದರೊಳಗೊಂದು ರಾಜಕೀಯ, ಲಾಭದಾಯಕ ಷಡ್ಯಂತ್ರವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ.
ಭಾರತದಲ್ಲಿ ಗೋವು ಧರ್ಮಕ್ಕೆ ಮಾರ್ಪಡಿಸಿದ್ದೆ ರಾಜಕೀಯ ಅಧಿಕಾರಕ್ಕೆ ಎಂಬುದು ಈಗಾಗಲೇ ಹಲವರಿಗೆ ತಿಳಿದಿದೆ. ಅದರ ಜತೆಗೆ ಇದೊಂದು ರಾಜಕೀಯ ಪ್ರೇರಿತ ಎಂದು ಕೇಸರಿ ಪಡೆಗಳ ಗುರುಗಳಾದ ಗೋಳ್ವಾಳ್ಕರ್ ಅವರೆ ಒಪ್ಪಿಕೊಂಡಿದ್ದಾರೆ. ಭಾರತ ಸರ್ಕಾರ 1960 ರಲ್ಲಿ ನ್ಯಾಯಮೂರ್ತಿ ಎ.ಕೆ. ಸರ್ಕಾರ್ ಅವರ ನೇತೃತ್ವದಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ನೇಮಿಸಿತ್ತು. ಆರ್ ಎಸ್ ಎಸ್ ನ ಪ್ರಮುಖರಾಗಿದ್ದ ಎಂ.ಎಸ್. ಗೊಳ್ವಾಳ್ಕರ್, ಪುರಿ ಶಂಕರಾಚಾರ್ಯ ಮತ್ತು ಡಾ.ವರ್ಗೀಸ್ ಕುರಿಯನ್ ಈ ಸಮಿತಿಯ ಸದಸ್ಯರಾಗಿದ್ದರು. ಹಾಲು ಉತ್ಪಾದನೆ ಕ್ಷೇತ್ರದಲ್ಲಿ ಗಣನೀಯವಾಗಿ ಹೆಸರಾಗಿದ್ದ ದಿ ಮಿಲ್ಕ ಮ್ಯಾನ್ ಆಫ್ ಇಂಡಿಯಾ ಎಂಬ ಖ್ಯಾತಿಯನ್ನು ಡಾ.ವರ್ಗೀಸ್ ಗಳಿಸಿದ್ದರು. ಅವರು ಗೊಳ್ವಾಳ್ಕರೊಡನೆ ಗೋಹತ್ಯೆ ಕುರಿತಂತೆ ವೈಜ್ಞಾನಿಕವಾಗಿ ವಾದಿಸಿದರು. ಅವರ ವಾದಕ್ಕೆ ಉತ್ತರಿಸಲಾಗದ ಗೋಳ್ವಾಳ್ಕರ್, ಗೋಹತ್ಯಾ ನಿಷೇದ ಬೆಂಬಲಿಸುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತಂತೆ ಇದೆಲ್ಲಾ ಕೇವಲ ರಾಜಕೀಯಕ್ಕಾಗಿ ಎಂದು ಒಪ್ಪಿಕೊಂಡಿದ್ದರು ಸ್ವತಹ ಗೊಳ್ವಾಳ್ಕರ್ ಅವರೆ ಇವೆಲ್ಲಾ ರಾಜಕೀಯ ಎಂದು ಬಹಿರಂಗ ಪಡಿಸಿದರು. ಹಾಗಾಗಿ ಗೋ ಹತ್ಯೆ, ತಿನ್ನುವುದು ಮುಂತಾದವು ಕುರಿತಂತೆ ಧಾರ್ಮೀಕರಣಗೊಳಿಸಿ ಅದನ್ನು ತಿನ್ನದಂತೆ ಮತ್ತು ಕಡಿಯದಂತೆ ಮಾಡಲು ಕಾರ್ಯನಿರ್ವಹಿಸುತ್ತಿರುವುದು ಕೇವಲ ರಾಜಕಾರಣಕ್ಕೆ ಹೊರತು. ಮಾತೆ ಎಂದಾಗಲಿ, ಧರ್ಮ ಎಂದಾಗಲಿ, ಪವಿತ್ರ ಎಂದಾಗಲಿ ಮತ್ಯಾವುದೂ ಅಲ್ಲ. ಇಂತಹ ಸೂಕ್ಷ್ಮಗಳನ್ನು ಪ್ರತಿಯೊಬ್ಬರು ಅರಿತು ನಡೆಯಬೇಕಿದೆ. ಆ ಮೂಲಕ ಜನಾಭಿಪ್ರಾಯ ರೂಪಿಸಿ ಇವರ ಮುಖವಾಡಗಳನ್ನು ಬಯಲಿಗೆಳೆಯುತ್ತ ಹೆಜ್ಜೆ ಹಿಡಬೇಕಿದೆ.
ಹಾರೋಹಳ್ಳಿ ರವಿಂದ್ರ
Please follow and like us:
error