ಗುಜರಾತ್: ಹಸುವಿನ ಕಳೇಬರ ವಿಲೇವಾರಿಗೆ ನಕಾರ ದಲಿತ ಕುಟುಂಬಕ್ಕೆ ಥಳಿತ; ಗರ್ಭಿಣಿಯ ಹೊಟ್ಟೆಗೆ ಒದ್ದರು

dalit-india-gujaratಬಾಣಸಕಂಠ, ಸೆ.25: ಹಸುವಿನ ಕಳೇಬರವೊಂದನ್ನು ವಿಲೇವಾರಿ ಮಾಡಲು ನಿರಾಕರಿಸಿದ್ದಕ್ಕಾಗಿ ಗುಜರಾತ್‌ನ ಬಾಣಸಕಂಠ ಜಿಲ್ಲೆಯ ಕರ್ಜಾ ಗ್ರಾಮದಲ್ಲಿ ಶುಕ್ರವಾರ ಗರ್ಭಿಣಿ ಮಹಿಳೆ ಸೇರಿದಂತೆ ದಲಿತ ಕುಟುಂಬವೊಂದರ ಸದಸ್ಯರನ್ನು ಬರ್ಬರವಾಗಿ ಥಳಿಸಲಾಗಿದೆಯೆಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಗರ್ಭಿಣಿ ಮಹಿಳೆ ಸಂಗೀತಾ ಎಂಬವರ ಹೊಟ್ಟೆಗೆ ದುಷ್ಕರ್ಮಿಗಳು ಒದ್ದಿದ್ದು, ತೀವ್ರ ರಕ್ತಸ್ರಾವವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ. ತಮ್ಮ ಕುಟುಂಬವು ಹಸುವಿನ ಕಳೇಬರ ಎತ್ತಲು ನಿರಾಕರಿಸಿದ ಬಳಿಕ, ನಿನ್ನೆ ರಾತ್ರಿ ದರ್ಬಾರ್(ಠಾಕೂರ್) ಸಮುದಾಯಕ್ಕೆ ಸೇರಿದ 10 ಮಂದಿಯ ಗುಂಪೊಂದು ತನ್ನ ಗರ್ಭಿಣಿ ಪತ್ನಿ ಸಂಗೀತಾ ಬೆನ್ ಎಂಬಾಕೆ ಸೇರಿದಂತೆ ತನ್ನ ಕುಟುಂಬದ ಮೇಲೆ ದಾಳಿ ಮಾಡಿತೆಂದು ಮಹಿಳೆಯ ಪತಿ ನೀಲೇಶ್ ಭಾಯಿ ಧುನಾಭಾಯಿ ರಣ್ವಾಸಿಯ ಎಂಬವರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

 ಅವರು ತನಗೆ ಅವಾಚ್ಯವಾಗಿ ಬೈದು ಥಳಿಸಿದರು. ಆ ಬಳಿಕ ಮನೆಯೊಳಗೆ ನುಗ್ಗಿ ತನ್ನ ಬಸುರಿ ಪತ್ನಿ ಸಂಗೀತಾಳ ಹೊಟ್ಟೆಗೆ ಹಾಗೂ ಮೈಗೆ ದೊಣ್ಣೆಯಿಂದ ಥಳಿಸಿದರೆಂದು ಅವರು ತಿಳಿಸಿದ್ದಾರೆ.

ಹಸುವಿನ ಕಳೇಬರ ವಿಲೇವಾರಿಗಾಗಿ ಹೊಲಕ್ಕೆ ತಾನು ಹೋಗದಿದ್ದಲ್ಲಿ, ಸಂಗೀತಾಳನ್ನು ಕೊಲ್ಲುವ ಬೆದರಿಕೆಯನ್ನೂ ಅವರು ಹಾಕಿದರೆಂದು ರಣ್ವಾಸಿಯಾ ದೂರಿದ್ದಾರೆ.

ಸಂಗೀತಾ ಹಾಗೂ ಇತರ ಇಬ್ಬರು ಹೆಂಗಸರ ಸಹಿತ 6 ಮಂದಿ ಗಾಯಗೊಂಡಿದ್ದಾರೆ.

ಸಂಗೀತಾರನ್ನು ಪಾಲನ್‌ಪುರದ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಘು ಗಾಯಗಳಾಗಿದ್ದ ರಣ್ವಾಸಿಯಾ ಮತ್ತಿತರರನ್ನು ಪ್ರಥಮ ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಬಟವರ್ ಸಿಂಹ ಚೌಹಾಣ್ (26), ಮಾಂಕು ಸಿಂಹ ಚೌಹಾಣ್ (21), ಯೋಗಿ ಸಿಂಹ ಚೌಹಾಣ್ (25), ಬವರ್ ಸಿಂಹ ಚೌಹಾಣ್ (45), ದಿಲ್‌ವೀರ ಸಿಂಹ ಚೌಹಾಣ್ (23) ಹಾಗೂ ನರೇಂದ್ರ ಸಿಂಹ ಚೌಹಣ್ (23) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆಯೆಂದು ಬಾಣಸಕಂಠದ ಪೊಲೀಸ್ ಅಧೀಕ್ಷಕ ನೀರಜ್ ಬಡ್ಗುಜರ್ ತಿಳಿಸಿದ್ದಾರೆ.

ಅವರು ನನ್ನ ಹೊಟ್ಟೆಗೆ ಒದ್ದರು: ಸಂಗೀತಾ

 ಬಾಣಸ್‌ಕಂಠ, ಸೆ.25: ಹಸುವಿನ ಕಳೇಬರ ವಿಲೇವಾರಿ ಮಾಡಲು ನಿರಾಕರಿಸಿದುದಕ್ಕಾಗಿ ತಮ್ಮ ಕುಟುಂಬವನ್ನು ಮೇಲ್ಜಾತಿಯ ಸಮುದಾಯದ ಗುಂಪೊಂದು ಥಳಿಸಿದ ಘಟನೆಯನ್ನು ಗುಜರಾತ್‌ನ 25ರ ಹರೆಯದ ಗರ್ಭಿಣಿ ದಲಿತ ಮಹಿಳೆ ಸಂಗೀತಾ ಈ ಕೆಳಗಿನಂತೆ ವಿವರಿಸಿದ್ದಾರೆ.

‘‘ಠಾಕೂರ್ ಸಮುದಾಯದ ಗುಂಪೊಂದು ಶುಕ್ರವಾರ ಮೋಟಾಕರ್ಜಾ ಗ್ರಾಮದ ನಮ್ಮ ಮನೆಗೆ ಬಂದಿತು. ಸತ್ತ ದನವೊಂದನ್ನು ವಿಲೇವಾರಿ ಮಾಡುವಂತೆ ಅವರು ನಮ್ಮನ್ನು ಒತ್ತಾಯಿಸಿದರು’’.

‘‘ಆದರೆ, ನಮ್ಮ ಕುಟುಂಬ ಬಹಳ ಕಾಲದ ಹಿಂದೆಯೇ ಈ ಕೆಲಸವನ್ನು ಬಿಟ್ಟಿದೆ. ಅಲ್ಲದೆ, 2 ತಿಂಗಳ ಹಿಂದೆ, ದಲಿತ ಸಮುದಾಯದ ನಾಲ್ವರು ಯುವಕರನ್ನು ಸಾರ್ವಜನಿಕವಾಗಿ ಥಳಿಸಿದ ಬಳಿಕ, ಸತ್ತ ಜಾನುವಾರುಗಳ ವಿಲೇವಾರಿ ಮಾಡುವುದನ್ನು ದಲಿತ ಗುಂಪುಗಳು ಬಹಿಷ್ಕರಿಸಿವೆ’’.

‘‘ನಮ್ಮ ನಿರ್ಧಾರದಿಂದ ಆಕ್ರೋಶಗೊಂಡ ಅವರು, ಸ್ಥಳದಿಂದ ತೆರಳಿ 20 ಮಂದಿಯ ದೊಡ್ಡ ಗುಂಪಿನೊಂದಿಗೆ ಬಂದರು. ಏನು ನಡೆಯುತ್ತಿದೆಯೆಂಬುದು ನಮಗೆ ಅರಿವಾಗುವ ಮೊದಲೇ ಅವರು ನಮ್ಮನ್ನು ಬಯ್ಯತೊಡಗಿದರು ಹಾಗೂ ಮರದ ದೊಣ್ಣೆಗಳಿಂದ ಥಳಿಸಲಾರಂಭಿಸಿದರು. ಅವರು ನನ್ನ ಹೊಟ್ಟೆಗೆ ಒದ್ದರು. ನನಗೆ ರಕ್ತ ಸ್ರಾವ ಆರಂಭವಾಯಿತು’’ ಎಂದು 5 ತಿಂಗಳ ಬಸುರಿ ಸಂಗೀತಾ ವಿವರಿಸಿದ್ದಾರೆ.

‘‘ಅರ್ಧ ತಾಸಿನ ಕಾಲ ಬೈಗುಳ ಹಾಗೂ ಥಳಿತ ಮುಂದುವರಿಸಿದ ಬಳಿಕ ಗುಂಪು ಸ್ಥಳದಿಂದ ಪರಾರಿಯಾಯಿತು. ಘಟನೆಯಲ್ಲಿ ನನ್ನ ಪತಿ ನೀಲೇಶ್ ಸಹಿತ ಇತರ 6 ಮಂದಿ ಗಾಯಗೊಂಡಿದ್ದಾರೆ. ನಾವು ಈ ಕೆಲಸ ಮಾಡುವುದಿಲ್ಲವೆಂದು ಹೇಳುತ್ತಿದ್ದರೂ ಕೇಳದೆ, ನಾವು ಅಂತಹ ನಿಕೃಷ್ಟ ಕೆಲಸಕ್ಕಾಗಿಯೇ ಇರುವವರೆಂದು ಅವರು ಹೇಳುತ್ತಲೇ ಇದ್ದರು’ ಎಂದು ಸಂಗೀತಾ ಹೇಳಿದ್ದಾರೆ.

Please follow and like us:
error

Related posts

Leave a Comment