ಗುಜರಾತ್’ನಲ್ಲಿ ದಲಿತರ ಪ್ರತಿಭಟನೆ : ಅನ್ಯಾಯಕ್ಕೆ ಪ್ರಬಲವಾದ ಎದಿರೇಟು

ಗೋವು ತಿಂದು ಗೋವಿನಂತಾದವರು ಗುಂಡಾಗಿಯೂ ಸಿಡಿಯಬಲ್ಲರು….

ಇಂದು ಗುಜರಾತ್’ನ ದಲಿತ ಸಮುದಾಯ ಇನ್ನು ಮುಂದೆ ತಾನು ಸತ್ತ ದನಗಳನ್ನು ಎತ್ತುವುದಿಲ್ಲ ಎಂದು ಘೋಷಿಸುವ ಮೂಲಕ ತನ್ನ ಮೇಲಿನ ಅನ್ಯಾಯಕ್ಕೆ ಅತ್ಯಂತ ಪ್ರಬಲವಾದ ಎದಿರೇಟು ನೀಡಿದೆ. ತಾವು ಗೋವು ತಿಂದು ಗೋವಿನಂತೆ ಇರುವ ಜನರಾದರೂ ಸಿಡಿದುಬಿದ್ದರೆ ನಿಮಗೆ ಉಳಿಗಾಲವಿಲ್ಲ ಅನ್ನುವ ಸಂದೇಶವನ್ನು ಸಾರಿದೆ.

govu-pratibhatane

ಗುಜರಾತ್’ನಲ್ಲಿ ದಲಿತರ ಪ್ರತಿಭಟನೆ ಗಂಭೀರ ಸ್ವರೂಪ ಪಡೆಯುತ್ತಿದೆ. ಇಷ್ಟು ಕಾಲ ತಮ್ಮ ಮೇಲಿನ ದೌರ್ಜನ್ಯವನ್ನು ಮೂಕವಾಗಿ ಸಹಿಸಿದ್ದ ಸಮುದಾಯ ಸಿಡಿದು ಬಿದ್ದಿದೆ. ಜುಲೈ 11ರಂದು ಗುಜರಾತ್’ನ ಉನಾ ಎಂಬಲ್ಲಿ ಸತ್ತ ದನದ ಚರ್ಮ ಸುಲಿದು ಮಾರಾಟ ಮಾಡುತ್ತಿದ್ದ ದಲಿತ ಯುವಕರನ್ನು ಶಿವಸೇನೆಯ ಸಂಸ್ಕೃತಿ ರಕ್ಷಕರು ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದರು. ಅದಕ್ಕೆ ಪ್ರತಿರೋಧವಾಗಿ ದಲಿತರು ಮೊನ್ನೆ ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸತ್ತ ದನಗಳ ಅಸ್ತಿಪಂಜರಗಳನ್ನು, ಶವಗಳನ್ನು ತಂದು ಸುರಿದು ಆಕ್ರೋಶ ದಾಖಲಿಸಿದ್ದರು. ಈ ಪ್ರಕರಣದಿಂದ ಪರಿಸ್ಥಿತಿ ವ್ಯಗ್ರಗೊಂಡಿದ್ದು, ಉನಾದ ನೆರೆಹೊರೆಯ ಪಟ್ಟಣಗಳಿಗೂ ಪ್ರತಿಭಟನೆಯ ಕಾವು ಹಬ್ಬುತ್ತಿದೆ.

ಈವರೆಗಿನಂತೆ ಸದರಿ ಪ್ರಕರಣದಲ್ಲಿ 4 ಪೊಲೀಸ್ ಅಧಿಕಾರಿಗಳು ಮತ್ತು 9 ಇತರೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆ ಇಂದು ಗುಜರಾತ್’ನ ದಲಿತ ಸಮುದಾಯ ಇನ್ನು ಮುಂದೆ ತಾನು ಸತ್ತ ದನಗಳನ್ನು ಎತ್ತುವುದಿಲ್ಲ ಎಂದು ಘೋಷಿಸುವ ಮೂಲಕ ತನ್ನ ಮೇಲಿನ ಅನ್ಯಾಯಕ್ಕೆ ಅತ್ಯಂತ ಪ್ರಬಲವಾದ ಎದಿರೇಟು ನೀಡಿದೆ. ತಾವು ಗೋವು ತಿಂದು ಗೋವಿನಂತೆ ಇರುವ ಜನರಾದರೂ ಸಿಡಿದುಬಿದ್ದರೆ ನಿಮಗೆ ಉಳಿಗಾಲವಿಲ್ಲ ಅನ್ನುವ ಸಂದೇಶವನ್ನು ಸಾರಿದೆ. ಪ್ರತಿಭಟನೆ ಆರಂಭಗೊಂಡು ಮೂರು ದಿನಗಳಾದರೂ ಅದರ ಕಾವು ತಗ್ಗದೆ ಗುಜರಾತ್ ರಾಜ್ಯಾದ್ಯಂತೆ ಹರಡುತ್ತಿರುವುದೇ ಇದಕ್ಕೆ ಸಾಕ್ಷಿ.

ದಲಿತರನ್ನು ಕಟ್ಟಿಹಾಕಿ ಬಡಿಯುತ್ತಿರುವ ಈ ವಿಡಿಯೋ ನೋಡಿ

ಗೋವುರಾಜಕಾರಣ ಮತ್ತು ಸಮೂಹಸನ್ನಿ

ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಇಂಥ ಪ್ರಕರಣಗಳನ್ನು ಕೇಳುತ್ತಿದ್ದೆವು. ಆದರೆ ಈ ಒಂದು ವರ್ಷದಿಂದ ಇಂಡಿಯಾದಲ್ಲಿ ಗೋವು ಅನ್ನುವ ಪದವೇ ಒಂದು ಸನ್ನಿಯಂತೆ ಬದಲಾಗಿದೆ. ಇಂದು ಸಂಘ ಪರಿವಾರ ಹಾಗೂ ಬಿಜೆಪಿಯ ಮುಖ್ಯಸ್ಥರು ಗುಜರಾತ್ ಘಟನೆಗೆ ವಿಷಾದ ವ್ಯಕ್ತಪಡಿಸಿ ಹೇಳಿಕೆಯನ್ನೇನೋ ನೀಡಿದ್ದಾರೆ. ಆದರೆ ಅವರ ದನಿಯಲ್ಲಿ ಅದೆಷ್ಟು ಪ್ರಾಮಾಣಿಕತೆ ಇದೆ ಅನ್ನೋದು ಪ್ರಶ್ನೆ. ಏಪ್ರಿಲ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಇಬ್ಬರು ಗೋಸಾಗಾಣಿಕೆದಾರರನ್ನು ಕೊಂದು ಮರಕ್ಕೆ ನೇಣು ಹಾಕಲಾಗಿತ್ತು. ಅದರ ನಂತರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಇಂಥದೇ ಘಟನೆ ನಡೆದಿದ್ದವು. ಆಗೆಲ್ಲ ಬಾಯಿಗೆ ಬೀಗ ಹಾಕಿಕೊಂಡಿದ್ದ ಪರಿವಾರ, ಈಗ ತಮ್ಮ ಸೇನಾನಾಯಕನ ಸ್ವಂತ ರಾಜ್ಯದಲ್ಲಿ ಉರಿ ಹತ್ತಿರುವುದಕ್ಕೆ ಕಾಟಾಚಾರದ ಪ್ರತಿಕ್ರಿಯೆ ನೀಡಿದಂತಿದೆ.

 ಇಷ್ಟಕ್ಕೂ ಇವತ್ತು ಗೋವುರಾಜಕಾರಣ ಇಷ್ಟು ಅಸಹ್ಯಕರವಾಗಿ ಬೆಳೆದು ನಿಲ್ಲಲು ಬಲಪಂಥೀಯ ಸಂಘಟನೆಗಳೇ ಕಾರಣ ಅನ್ನೋದು ಸುಸ್ಪಷ್ಟ. ಇತ್ತೀಚೆಗಷ್ಟೆ ಬಿಜೆಪಿ ಶಾಸಕ ಸಂಗೀತ್ ಸೋಮ್, ಹಲಾಲ್ ಮಾಂಸ ರಫ್ತು ಕಂಪನಿಯ ಮಾಲಕ ಅನ್ನುವ ವಿಷಯ ಬಹಿರಂಗಗೊಂಡು ಚರ್ಚೆಯಾಗಿತ್ತು. ಈತ ಜನರ ನಡುವೆ ಗೋರಕ್ಷಣೆಯ ಸೇನಾನಿಯಂತೆ ತನ್ನನ್ನು ಬಿಂಬಿಸಿಕೊಂಡಿದ್ದ! ಇದಕ್ಕೆ ಹಿಂದೆಯೂ ಬಿಜೆಪಿ ಹಾಗೂ ಭಜರಂಗದಳಗಳ ವಿಪಿನ್ ಬಿಲೌಹ, ಎಮ್ ಎನ್ ಜೈನ್, ಕೆ.ಯಾದವ್ ಮೊದಲಾದವರು ಗೋಸಾಗಾಣಿಕೆ ಮತ್ತು ಕಸಾಯಿಖಾನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೋಸಾಗಾಣಿಕೆಯ ಹಿಂದೆ ಕೆಲವು ಭಜರಂಗಿಗಳ ಕೈ ಇರುವುದು ಮೇಲಿಂದ ಮೇಲೆ ಸಾಬೀತಾಗಿದೆ. ಇಷ್ಟೆಲ್ಲ ಹುಳುಕಿರುವ ಬಿಜೆಪಿ, ತನ್ನ ಜನರ ಧಂಧೆ ಕಾಪಾಡಿಕೊಳ್ಳಲಿಕ್ಕೋ ಲಾಭವನ್ನೆಲ್ಲ ತಾನೇ ನುಂಗಲಿಕ್ಕೋ, ಜನಕ್ಕೆ ‘ಗೋರಕ್ಷಣೆಯ’ ಹುಚ್ಚು ಹಿಡಿಸುತ್ತಾ ವಿಷಬೀಜ ಬಿತ್ತುತ್ತಿದೆ. ಇದೇ ಇತ್ತೀಚಿನ ದಿನಗಳಲ್ಲಿ ಗೋವಿನ ವಿಷಯವಾಗಿ ಮುಸ್ಲಿಮ್ ಮತ್ತು ದಲಿತರ ಮೇಲೆ ಹಲ್ಲೆ ಹೆಚ್ಚಾಗಲು ಕಾರಣವಾಗಿದೆ.

courtesy : maadyamanet

Please follow and like us:
error