ಗರ್ಭಕೋಶದ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಕೊಪ್ಪಳ ಕಿಮ್ಸ್ ವೈದ್ಯರ ಸಾಧನೆ

 ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೊಪ್ಪಳ ನಗರದ ೬೦ ವರ್ಷದ   ಮಹಿಳೆಯೋರ್ವಳಿಗೆ ಕೊಪ್ಪಳ ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರುಗಳ ತಂಡವು ಜಟಿಲವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, ಬಡ ಕುಟುಂಬಕ್ಕೆ ಆಶಾಕಿರಣವಾಗಿದೆ.  ಕಿಮ್ಸ್ ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಿದಾಗಿನಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆ ಯನ್ನು ಬೋಧಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.  ವಿವಿಧ ವಿಭಾಗಗಳಲ್ಲಿ ತಜ್ಞ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದು, ಹೊರರೋಗಿಗಳ ಸಂಖ್ಯೆ ಹಾಗೂ ಒಳರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ದುರ್ಲಭ ಶಸ್ತ್ರ ಕ್ರಿಯೆಗಳನ್ನು ಇಲ್ಲಿ ಯಶಸ್ವಿಯಾಗಿ ನೆರವೇರಿಸುತ್ತಿದೆ.ಇತ್ತೀಚೆಗೆ ಕೊಪ್ಪಳ ನಗರದ ೬೦ ವರ್ಷದ ವಯೋವೃದ್ದ ಮಹಿಳೆ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹಲವಾರು ವೈದ್ಯರನ್ನು ಕಂಡು ಹಣ ಹೊಂದಿಸಲಾಗದೆ ಅಸಹಾಯಕರಾಗಿದ್ದರು.  ಇವರಿಗೆ ಆಶಾಕಿರಣವಾಗಿ ಗೋಚರಿಸಿದ್ದು ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ. ಶಂಕರ ಮಲಪುರೆ.   ಗರ್ಭಕೋಶ ಕ್ಯಾನ್ಸ್‌ರ್‌ನಿಂದ ಮಹಿಳೆಯ ಸಂಪೂರ್ಣ ಪರೀಕ್ಷೆಯ ನಂತರ, ಇಲ್ಲಿನ ಪ್ರಸೂತಿ ವಿಭಾಗದ ತಜ್ಞ ವೈದ್ಯರಾದ ಡಾ.ಸುರೇಖಾ ಡಾ.ಧನಲಕ್ಷ್ಮಿ ಇವರೊಡನೆ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.   ಪೂರ್ವಭಾವಿಯಾಗಿ ಶಸ್ತ್ರ ಚಿಕಿತ್ಸೆಯ ವಿವಿಧ ಹಂತಗಳನ್ನು ಚರ್ಚಿಸಿದ ನಂತರ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು.   ಸಂಪೂರ್ಣ ಗರ್ಭಕೋಶ, ಗರ್ಭನಾಳ, ಅಂಡಾಶಯ ಹಾಗೂ ಯೋನಿಯ ಕೆಲ ಬಾಗವನ್ನು ತೆಗೆಯಲಾಯಿತು.   ಇದೀಗ, ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ದಿನನಿತ್ಯದ ಕೆಲಸಗಳನ್ನು ಮಾಡುತ್ತಾ ಆರೋಗ್ಯವಂತರಾಗಿದ್ದಾರೆ.   ಡಾ.ವಿನಯಾ ಇವರು ಸಹ ಸಂದರ್ಭಕ್ಕೆ ತಕ್ಕಂತೆ ಸಲಹೆ ನೀಡುತ್ತಿದ್ದುದು ವಿಶೇಷ. ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ್ ಮತ್ತು ತಂಡದವರ ಸಹಕಾರ ಶ್ಲಾಘನೀಯ ಶುಶ್ರೂಷಕ ಸಿಬ್ಬಂದಿಯವರು ಸಹ ರೋಗಿಯ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಇಂತಹ ಜಟಿಲ ಶಸ್ತ್ರಕ್ರಿಯೆಗಳನ್ನು ಸಾಮಾನ್ಯವಾಗಿ, ಬಹು ವೈದ್ಯರಿರುವ  ನುರಿತ ಸಿಬ್ಬಂದಿಗಳಿಂದ ಮತ್ತು ಸಕಲ ಸೌಕರ್ಯಗಳಿರುವ ಆಸ್ಪತ್ರೆಗಳಲ್ಲಿ  ಕೈಗೊಳ್ಳುತ್ತಾರೆ.  ಆದರೆ, ಲಭ್ಯವಿರುವ ವೈದ್ಯ ವೃಂದ ಹಾಗು ಉಪಕರಣಗಳಿಂದ ಇಂತಹ ವಿರಳ ಶಸ್ತ್ರಚಿಕಿತ್ಸೆಯನ್ನು ಕೊಪ್ಪಳ ಕಿಮ್ಸ್ ವೈದ್ಯರು ಮಾಡಿರುವುದು ಶ್ಲಾಘನೀಯ.ಸಾರ್ವಜನಿಕರು ವೈದ್ಯರೊಂದಿಗೆ ತಾಳ್ಮೆ ಮತ್ತು ಸಹಕಾರದಿಂದ ವರ್ತಿಸಿದ್ದಲ್ಲಿ, ಮತ್ತು ಆಸ್ಪತ್ರೆಯ ಆವರಣದಲ್ಲಿ ಶುಚಿತ್ವವನ್ನು ಕಾಪಾಡಿದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಫೂರ್ತಿದಾಯಕವಾಗುತ್ತದೆ ಎನ್ನುತ್ತಾರೆ ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಪುರೆ ಅವರು.

Please follow and like us:
error