ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ : ಬಾಕಿ ಸೀಟುಗಳಿಗೆ ಅರ್ಜಿ ಆಹ್ವಾನ

koppal_medical_college

ಅರೆವೈದ್ಯಕೀಯ ಕೋರ್ಸ್ : ಬಾಕಿ ಉಳಿದ ಸೀಟುಗಳಿಗೆ ಅರ್ಜಿ ಆಹ್ವಾನ
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಕೊಪ್ಪಳದಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಪ್ಯಾರಾಮೆಡಿಕಲ್ ತರಬೇತಿ ಕೇಂದ್ರದಲ್ಲಿ, ಅರೆವೈದ್ಯಕೀಯ ಕೋರ್ಸ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದ ಸೀಟುಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳದ ಕಿಮ್ಸ್‌ನಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಪ್ಯಾರಾಮೆಡಿಕಲ್ ಕೇಂದ್ರದಲ್ಲಿ ಅರೆವೈದ್ಯಕೀಯ ಕೋರ್ಸ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಅರೆವೈದ್ಯಕೀಯ ಮಂಡಳಿ ಬೆಂಗಳೂರು ಇವರಿಂದ ಭರ್ತಿ ಮಾಡಿ, ಬಾಕಿ ಉಳಿದ ಸೀಟುಗಳನ್ನು ಭರ್ತಿ ಮಾಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.
ಕೋರ್ಸ್‌ಗಳ ವಿವರ ಇಂತಿದೆ: ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಮೆಡಿಕಲ್ ಎಕ್ಸ್‌ರೇ ಟೆಕ್ನಾಲಜಿ, ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್, ಡಿಪ್ಲೋಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಡಿಪ್ಲೋಮಾಇನ್ ಅಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ.
ಕೊರ್ಸ್ ಅವಧಿಯು, ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಗೆ ೩ ವರ್ಷ ಹಾಗೂ ಪಿಯುಸಿ ಅಭ್ಯರ್ಥಿಗಳಿಗೆ ೨ ವರ್ಷ. ವಯೋಮಿತಿ ಸಾಮಾನ್ಯ ವರ್ಗದವರಿಗೆ ಗರಿಷ್ಠ ೩೫ ವರ್ಷ ಮತ್ತು ಪ.ಜಾತಿ/ಪ.ಪಂಗಡ ಹಾಗೂ ಸೇವಾನಿರತ ಅಭ್ಯರ್ಥಿಗಳಿಗೆ ೪೦ ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವವರು ಡಿಪ್ಲೋಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ ಕೋರ್ಸ್ ಹೊರತು ಪಡಿಸಿ ಉಳಿದ ಎಲ್ಲಾ ಕೋರ್ಸ್‌ಗಳಿಗೆ ಪಿಯುಸಿ (ವಿಜ್ಞಾನ) ತತ್ಸಮಾನ ಪರೀಕ್ಷೆ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ) ವಿಷಯಗಳನ್ನು ತೆಗೆದುಕೊಂಡು ತೇರ್ಗಡೆಯಾಗಿರಬೇಕು. ಎಸ್‌ಎಸ್‌ಎಲ್‌ಸಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮೇಲಿನ ಎಲ್ಲಾ ಕೋರ್ಸ್‌ಗಳಿಗೂ ಅರ್ಹರಾಗಿರುತ್ತಾರೆ. ಡಿಪ್ಲೋಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ ಕೋರ್ಸ್‌ಗೆ ಪಿಯುಸಿ (ಸೈನ್ಸ್ ಕಾಮರ್ಸ್, ಆರ್ಟ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅಥವಾ ಎಸ್‌ಎಸ್‌ಎಲ್‌ಸಿ ತೇರ್ಗಡೆ, ಇದರೊಂದಿಗೆ ಆಂಗ್ಲ ಕಿರಿಯ ಬೆರಳಚ್ಚು ಅಥವಾ ಬೆಸಿಕ್ ಕಂಪ್ಯೂಟರ್ ತರಬೇತಿಯನ್ನು ಅಂಗೀಕೃತ ವಿದ್ಯಾ ಸಂಸ್ಥೆಯಿಂದ ತೇರ್ಗಡೆ ಹೊಂದಿರಬೇಕು. ಅರ್ಜಿದಾರರು ೧ ರಿಂದ ೧೦ ನೇ ತರಗತಿ ಅಥವಾ ಪಿಯುಸಿ ವರೆಗೆ ಕನಿಷ್ಟ ೦೭ ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ದೃಢೀಕರಣ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಲಗತ್ತಿಸಿರುವ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಇಲ್ಲವಾದಲ್ಲಿ ಅವಕಾಶ ನೀಡಲಾಗುವುದಿಲ್ಲ.
ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೊಪ್ಪಳ ಕಾರ್ಯಲಯದಲ್ಲಿ ಅರ್ಜಿ ಶುಲ್ಕ ಪಾವತಿಸಿ ಪಡೆಯಬಹುದು. ಅರ್ಜಿ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ-೧೫೦, ಪ.ಜಾತಿ/ಪ.ಪಂಗಡ/ಪ್ರವರ್ಗ-೧ ಅಭ್ಯರ್ಥಿಗಳಿಗೆ ರೂ-೫೦ ನಿಗದಿಪಡಿಸಿದೆ. ಭರ್ತಿ ಮಾಡಿದ ಅರ್ಜಿಯನ್ನು ಡಿ.೧೩ ಸಂಜೆ ೪ ಗಂಟೆಯೊಳಗಾಗಿ ಸಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಅವರು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು. ಕೋರ್ಸ್ ನಡೆಯುವ ದಿನಾಂಕವನ್ನು ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಸ್ವವಿಳಾಸಕ್ಕೆ ಸೂಚನಾ ಪತ್ರ ಕಳುಹಿಸಲಾಗುವುದು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ಯಾರಾ ಮೆಡಿಕಲ್ ತರಬೇತಿ ಕೇಂದ್ರ ಕಿಮ್ಸ್ ವಿಭಾಗದಲ್ಲಿ ಸಹಾಯವಾಣಿ ತೆರೆದಿದ್ದು, ಸಹಾಯವಾಣಿ ಸಂ-೦೮೫೩೯-೨೨೫೯೪೪, ೨೨೫೦೨೨ ಅಥವಾ ಮೊ-೯೪೪೮೫೬೭೮೧೯ ಇಲ್ಲಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error