ಕೊಪ್ಪಳ ಜೆಪಿ ಮಾರುಕಟ್ಟೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ- ಶಿವರಾಜ ತಂಗಡಗಿ

shivaraj-tangadagi-minister-kannadanet (1) shivaraj-tangadagi-minister-kannadanet (2) shivaraj-tangadagi-minister-kannadanet (3) shivaraj-tangadagi-minister-kannadanet (4) shivaraj-tangadagi-minister-kannadanet (5) shivaraj-tangadagi-minister-kannadanet (6) : ಕೊಪ್ಪಳ ನಗರದಲ್ಲಿ ನಿರ್ಮಾಣವಾಗಲಿರುವ ಜೆಪಿ ಮಾರುಕಟ್ಟೆ ಕಾಮಗಾರಿಯನ್ನು ನಿಗದಿತ ೧೮ ತಿಂಗಳ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಬಳಕೆಗೆ ಅನುವು ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕೊಪ್ಪಳ ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಅಂದಾಜು ರೂ. ೪ ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಜೆ.ಪಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಭಾನುವಾರದಂದು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ನಗರದಲ್ಲಿ ಜೆಪಿ ಮಾರುಕಟ್ಟೆ ಪುನರ್ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಮತ್ತು ವಿವಿಧ ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಜೆಪಿ ಮಾರುಕಟ್ಟೆ ನಿರ್ಮಾಣ ಈ ಹಿಂದಿನ ಸರ್ಕಾರ ಇರುವಾಗಲೆ ಪ್ರಾರಂಭವಾಗಬೇಕಿತ್ತು. ಆದರೆ ಯೋಜನೆಗೆ ಕೆಲ ಮಾರ್ಪಾಡು ಮಾಡಬೇಕಿದ್ದರಿಂದ ನೆನೆಗುದಿಗೆ ಬಿದ್ದಿತ್ತು. ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಪರಿಷ್ಕೃತ ಯೋಜನೆಗೆ ಅನುಮೋದನೆ ದೊರೆತು, ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಇದೀಗ ೦೪ ಕೋಟಿ ರೂ. ವೆಚ್ಚದಲ್ಲಿ ಜೆಪಿ ಮಾರುಕಟ್ಟೆ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ. ಕಾಮಗಾರಿ ಪೂರ್ಣಗೊಳಿಸಲು ೧೮ ತಿಂಗಳ ಕಾಲಮಿತಿಯನ್ನು ಗುತ್ತಿಗೆದಾರರಿಗೆ ನಿಗದಿಪಡಿಸಲಾಗಿದೆ. ಆದರೆ ಗುತ್ತಿಗೆದಾರರು ೧೨ ತಿಂಗಳುಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಂಡು ಜನರ ಬಳಕೆಗೆ ಅರ್ಪಣೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ಹೇಳಿದರು.
ಕೊಪ್ಪಳ ನಗರದ ಹುಲಿಕೆರೆ ಅತ್ಯಂತ ಮಹತ್ವದ ಕೆರೆಯಾಗಿದ್ದು, ಹುಲಿಕೆರೆಯಲ್ಲಿನ ಹೂಳು ತೆಗೆಸಿ, ಅಭಿವೃದ್ಧಿಪಡಿಸುವುದು ಹಾಗೂ ಈ ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಯೋಜನೆಯ ಡಿಪಿಆರ್ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೆ ಕೊಪ್ಪಳ ತಾಲೂಕಿನ ಕೆರೆಗಳು ಹಾಗೂ ಯಲಬುರ್ಗಾ ತಾಲೂಕಿನ ಭಾಗಶಃ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲು ಸಹ ಚಿಂತನೆ ನಡೆಸಲಾಗಿದೆ. ಈಗಾಗಲೆ ಗಂಗಾವತಿ ತಾಲೂಕಿನಲ್ಲಿ ಹಲವು ಕೆರೆಗಳಿಗೆ ನದಿ ನೀರು ತುಂಬಿಸುವ ಕಾಮಗಾರಿ ಈಗಾಗಲೆ ಪೂರ್ಣಗೊಳ್ಳುವ ಹಂತ ತಲುಪಿದ್ದು, ಕೆರೆ ತುಂಬಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇಂತಹ ಯೋಜನೆಗಳು ಬರ ಪರಿಸ್ಥಿತಿ ನಿರ್ವಹಣೆಗೆ ಹಾಗೂ ಅಂತರ್ಜಲ ಸುಧಾರಣೆಗೆ ಉತ್ತಮ ಯೋಜನೆಗಳಾಗಿವೆ. ಪ್ರಸಕ್ತ ಬರ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಬರ ನಿರ್ವಹಣೆ ನಿಟ್ಟಿನಲ್ಲಿ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಮೂರ‍್ನಾಲ್ಕು ಬಾರಿ ಸಭೆಯನ್ನು ಜರುಗಿಸಿ, ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಕುರಿತು ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಅಗತ್ಯ ಸಹಕಾರವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕೇಂದ್ರ ಪುರಸ್ಕೃತ ಹೌಸಿಂಗ್ ಫಾರ್ ಆಲ್ ಅಭಿಯಾನದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ನಗರ ಪ್ರದೇಶದ ಕಡು ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಲು ಸಬ್ಸಿಡಿ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿದ್ದು, ಇಂತಹ ಯೋಜನೆಗಳ ಸದುಪಯೋಗವನ್ನು ಬಡವರು ಪಡೆದುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ೬೩ ಅನ್ನು ೧೩೦೦ ಕೋಟಿ ರೂ. ವೆಚ್ಚದಲ್ಲಿ ಚತುಷ್ಪತ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲೆಯ ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು, ರಾಜ್ಯ ಸರ್ಕಾರದಿಂದ ಡಿಪಿಆರ್ ತಯಾರಿಸಿ, ಪ್ರಸ್ತಾವನೆ ಸಲ್ಲಿಸಿದಲ್ಲಿ, ಯೋಜನೆಯ ಜಾರಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ನಗರದಲ್ಲಿ ಜೆಪಿ ಮಾರುಕಟ್ಟೆ ನಿರ್ಮಾಣವಾಗಬೇಕು ಎನ್ನುವ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಕಾಲ ಇದೀಗ ಬಂದಿದೆ. ಜೆಪಿ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ ೧೦೭ ಮಳಿಗೆಗಳು ಹಾಗೂ ಮೊದಲನೆ ಅಂತಸ್ತಿನಲ್ಲಿ ೨೯ ಮಳಿಗೆಗಳು ನಿರ್ಮಾಣವಾಗಲಿವೆ. ೧೮ ತಿಂಗಳ ಒಳಗಾಗಿ ಸುಸಜ್ಜಿತ ಮಾರುಕಟ್ಟೆ ಲೋಕಾರ್ಪಣೆಯಾಗಲಿದೆ. ಕೊಪ್ಪಳ ನಗರದ ಸಾಲಾರ್‌ಜಂಗ್ ರಸ್ತೆ ಹಾಗೂ ಸಿಂಪಿಲಿಂಗಣ್ಣ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಅಲ್ಲದೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಎಪಿಎಂಸಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಜಿ.ಪಂ. ಸದಸ್ಯರುಗಳಾದ ರಾಜಶೇಖರ ಹಿಟ್ನಾಳ್, ಗೂಳಪ್ಪ ಹಲಗೇರಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಸೇರಿದಂತೆ ನಗರಸಭೆಯ ಹಲವು ಸದಸ್ಯರುಗಳು ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸ್ವಾಗತಿಸಿದರು, ಪೌರಾಯುಕ್ತ ರಮೇಶ್ ಪಟ್ಟೇದಾರ ವಂದಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ ೮೦ ಲಕ್ಷ ರೂ. ವೆಚ್ಚದಲ್ಲಿ ಗಡಿಯಾರಕಂಬ-ಗೌರಿಅಂಗಳ ಸಿಸಿ ರಸ್ತೆ ಕಾಮಗಾರಿಗೆ ಗಡಿಯಾರ ಕಂಬದ ಬಳಿ ಭೂಮಿ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply