ಕೊಪ್ಪಳ ಜಿಲ್ಲೆಯ ಸ್ವಚ್ಛವಾಗಿಸಲು ಜೂ. ೧೬ ರಿಂದ ಸ್ವಚ್ಛತಾ ಸಪ್ತಾಹ- ಡಿ.ಸಿ. ಕನಗವಲ್ಲಿ

dc-koppalಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ, ಸರ್ಕಾರದ ಸೂಚನೆಯಂತೆ ಜೂ. ೧೬ ರಿಂದ ೨೨ ರವರೆಗೆ ಸ್ವಚ್ಛತಾ ಸಪ್ತಾಹ ಆಚರಿಸುವ ಮೂಲಕ ಕೊಪ್ಪಳ ಜಿಲ್ಲೆಯನ್ನು ಸ್ವಚ್ಛವಾಗಿಸಲು ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರೂ ಸಹಕರಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲೆಯಲ್ಲಿ ಸ್ವಚ್ಛತಾ ಸಪ್ತಾಹ ಆಚರಿಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಮಳೆ ಪ್ರಾರಂಭವಾಗಿದ್ದು, ಸೊಳ್ಳೆಗಳಿಂದ ಹರಡುವ ಮಲೇರಿಯಾ, ಚಿಕುನ್‌ಗುನ್ಯಾ, ಡೆಂಗ್ಯು ಅಲ್ಲದೆ ವಾಂತಿ-ಭೇದಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಜೂ. ೧೬ ರಿಂದ ೨೨ ರವರೆಗೆ ಸ್ವಚ್ಛತಾ ಸಪ್ತಾಹ ಆಚರಿಸಬೇಕಿದ್ದು, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಆಗಬೇಕು. ಸಪ್ತಾಹದ ಅಂಗವಾಗಿ ಜಿಲ್ಲೆಯ ಕೊಳಚೆ ಪ್ರದೇಶಗಳು, ಕಟ್ಟಡ ನಿರ್ಮಾಣದ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಪ್ರದೇಶಗಳು, ಆಸ್ಪತ್ರೆಗಳು, ಕಾರ್ಖಾನೆಗಳ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಳ್ಳಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹಾಗೂ ನೀರು ನಿಲ್ಲುವ ಸ್ಥಿತಿ ಇದೆ. ಆಯಾ ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳು ಖಾಲಿ ನಿವೇಶನ ಹೊಂದಿರುವ ಮಾಲೀಕರುಗಳಿಗೆ ಸ್ವಚ್ಛಗೊಳಿಸಲು ಸೂಚನೆ ನೀಡಬೇಕು. ಸ್ವಚ್ಛಗೊಳಿಸದಿದ್ದಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರೋಗಗಳು ಹೆಚ್ಚು ಹರಡುವ ಸ್ಥಳಗಳನ್ನು ಗುರುತಿಸಿ, ಆರೋಗ್ಯ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸಬೇಕು ಅಲ್ಲದೆ ರೋಗಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು. ಸ್ಪ್ರೇಯಿಂಗ್ ಉಪಕರಣ, ಫಾಗಿಂಗ್ ವ್ಯವಸ್ಥೆಯುಳ್ಳ ವಿಶೇಷ ವಾಹನಗಳನ್ನು ಸಿದ್ಧಪಡಿಸಿ, ಜಿಲ್ಲೆಗೆ ಕನಿಷ್ಟ ೦೩ ವಾಹನಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಬೇಕು. ಒಟ್ಟಾರೆ ಸ್ವಚ್ಛತಾ ಸಪ್ತಾಹ ಮುಗಿಯುವುದರೊಳಗೆ ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛತೆ ಕಂಡು ಬರುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛತಾ ಸಪ್ತಾಹ ಕುರಿತು ವಿವರಣೆ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು, ಜೂ. ೧೬ ರಂದು ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವಿದ್ದು, ಅಂದು ಜನರಿಗೆ ಆರೋಗ್ಯ ಶಿಕ್ಷಣ ನೀಡುವುದು. ಕೊಪ್ಪಳದಲ್ಲಿ ಅಂದು ಹಮಾಲರ ಕಾಲೋನಿಯಲ್ಲಿ ಸ್ಥಳೀಯ ಸಂಸ್ಥೆ ಸಿಬ್ಬಂದಿಯೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ. ೧೭ ರಂದು ನಿರ್ಮಾಣ ಹಂತದಲ್ಲಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹಾಗೂ ಸ್ವಚ್ಛತೆ ಕುರಿತು ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುವುದು. ಜೂ. ೧೮ ರಂದು ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸ್ವಚ್ಛತೆ ಹಾಗೂ ಹೋಟೆಲ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು. ಜೂ. ೧೯ ರಂದು ಸರ್ಕಾರಿ ಕಟ್ಟಡಗಳಲ್ಲಿ ಅಂದರೆ ಎಲ್ಲ ಸರ್ಕಾರಿ ಕಟ್ಟಡಗಳ ಸುತ್ತಮುತ್ತ ಸ್ವಚ್ಛ ವಾತಾವರಣ ಕಲ್ಪಿಸುವಂತೆ ಅಧಿಕಾರಿ, ಸಿಬ್ಬಂದಿಗಳನ್ನು ಪ್ರೇರೇಪಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳುವುದು. ಜೂ. ೨೦ ರಂದು ಬಸ್‌ನಿಲ್ದಾಣ, ಸಂತೆ, ದೇವಸ್ಥಾನ ದಂತಹ ಸಾರ್ವಜನಿಕ ಪ್ರದೇಶಗಳಲ್ಲಿನ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು. ಜೂ. ೨೧ ರಂದು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೈಗೊಳ್ಳುವುದು, ರೋಗಿಗಳನ್ನು ಸಂಪರ್ಕಿಸಿ ಆರೋಗ್ಯ ಶಿಕ್ಷಣ ನೀಡಲಾಗುವುದು. ಜೂ. ೨೨ ರಂದು ಕಾರ್ಖಾನೆ, ಕಲ್ಲು ಕ್ವಾರಿಗಳ ಮಾಲೀಕರುಗಳೊಂದಿಗೆ ಸಭೆ ಕೈಗೊಂಡು, ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ, ಡಾ. ರಮೇಶ್ ಮೂಲಿಮನಿ, ಡಾ. ಎಸ್.ಕೆ. ದೇಸಾಯಿ, ಡಾ. ವಿ.ಎಸ್. ಮಾದಿನೂರ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆ ವತಿಯಿಂದ ಮಂಜುನಾಥ ಗೊಂಡಬಾಳ ಪಾಲ್ಗೊಂಡಿದ್ದರು.

Please follow and like us:
error