ಕೊಪ್ಪಳದ ಬಡವರಿಗೆ ನಿವೇಶನ ವಿತರಿಸಲು ೧೦೦ ಎಕರೆ ಖರೀದಿ- ರಾಘವೇಂದ್ರ ಹಿಟ್ನಾಳ

ಕೊಪ್ಪಳ plots_distribution_koppal raghavendra_hitnal_koppalನಗರ ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಬಡ ಜನರಿಗೆ ಸರ್ಕಾರದಿಂದ ನಿವೇಶನ ಒದಗಿಸಲು ೧೦೦ ಎಕರೆ ಹಾಗೂ ಭಾಗ್ಯನಗರದ ವ್ಯಾಪ್ತಿಯ ಜನರಿಗಾಗಿ ೭೫ ಎಕರೆ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರದಂದು ನಗರ ಆಶ್ರಯ ಯೋಜನೆಯಡಿ ೧೦೩೦ ಫಲಾನುಭವಿಗಳಿಗೆ ಗುಂಪು ಮನೆಗಳ ಹಕ್ಕು ಪತ್ರ ವಿತರಣೆ ಮಾಡುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಿರೇಸಿಂದೋಗಿ ರಸ್ತೆ ಹಾಗೂ ಹೂವಿನಾಳ ರಸ್ತೆಯಲ್ಲಿ ಪ್ರಾಯೋಗಿಕವಾಗಿ ೨೦೦೦ ಗುಂಪು ಮನೆಗಳನ್ನು ನಿರ್ಮಿಸಿ, ಬಡ ಜನರಿಗೆ ಮಂಜೂರು ಮಾಡುವ ಯೋಜನೆ ಸುಮಾರು ವರ್ಷಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಈಗಿನ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಪರಿಶ್ರಮದಿಂದಾಗಿ ಇಂದು, ಅರ್ಹ ಫಲಾನುಭವಿಗಳಿಗೆ ಗುಂಪು ಮನೆಗಳ ಹಕ್ಕುಪತ್ರವನ್ನು ವಿತರಿಸಲಾಗುತ್ತಿದೆ. ೭೧ ಎಕರೆ ಜಮೀನಿನಲ್ಲಿ ೨೦೦೦ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಪ್ರತಿ ಮನೆಯ ಘಟಕ ವೆಚ್ಚ ೨.೩೦ ಲಕ್ಷ ರೂ. ಇದ್ದು, ಫಲಾನುಭವಿಗಳು ವಂತಿಕೆಯಾಗಿ ೩೦ ಸಾವಿರ ರೂ. ಪಾವತಿಸಿದ್ದಾರೆ. ಸರ್ಕಾರ ಪ್ರತಿ ಮನೆಗೆ ೭೫ ಸಾವಿರ ರೂ. ಸಬ್ಸಿಡಿ ನೀಡಲಿದ್ದು, ೧. ೨೫ ಲಕ್ಷ ರೂ. ಗಳ ಸಾಲವನ್ನು ಬ್ಯಾಂಕ್ ಮೂಲಕ ಒದಗಿಸಲಾಗುವುದು. ಬ್ಯಾಂಕ್ ಸಾಲ ಒದಗಿಸಲು ಫಲಾನುಭವಿ ಹಕ್ಕುಪತ್ರವನ್ನು ಬ್ಯಾಂಕ್‌ಗೆ ಸಲ್ಲಿಸಬೇಕಾಗಿರುವುದರಿಂದ, ಫಲಾನುಭವಿಗಳ ಅನುಕೂಲಕ್ಕಾಗಿ ಇಂದು ಹಕ್ಕುಪತ್ರವನ್ನು ಅರ್ಹರಿಗೆ ವಿತರಿಸಲಾಗುತ್ತಿದೆ. ೨೦೦೦ ಜನರ ಪೈಕಿ ೧೦೩೦ ಫಲಾನುಭವಿಗಳು ಮಾತ್ರ ವಂತಿಗೆ ಪಾವತಿಸಿರುವುದರಿಂದ, ಅಷ್ಟೇ ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಎಲ್ಲ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಒಟ್ಟಾರೆ ೧೦. ೩೫ ಕೋಟಿ ರೂ. ಗಳ ಸಾಲ ಒದಗಿಸುವಂತೆ ಮಾಡಲು ನಗರಸಭೆ ಕ್ರಮ ಕೈಗೊಳ್ಳಲಿದೆ. ನಿರ್ಮಿತಿ ಕೇಂದ್ರದಿಂದ ಈಗಾಗಲೆ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಎಲ್ಲ ಫಲಾನುಭವಿಗಳಿಗೆ ಪೂರ್ಣಗೊಂಡ ಮನೆಗಳ ವಿತರಣೆಗೆ ಸಹ ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ನಗರ ವ್ಯಾಪ್ತಿಯ ನಿವೇಶನ ರಹಿತ ಜನರಿಗೆ ನಿವೇಶನ ಒದಗಿಸಲು ೧೦೦ ಎಕರೆ ಜಮೀನು, ಅದೇ ರೀತಿ ಭಾಗ್ಯನಗರ ವ್ಯಾಪ್ತಿಯ ಜನರಿಗೆ ೭೫ ಎಕರೆ ಜಮೀನು ಖರೀದಿಸಲು ನಿರ್ಧರಿಸಲಾಗಿದ್ದು, ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ನಗರಕ್ಕೆ ೨೪*೭ ಕುಡಿಯುವ ನೀರು ಪೂರೈಕೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ತ್ವರಿತವಾಗಿ ಯೋಜನೆ ಜಾರಿಗೆ ತರಲಾಗುವುದು. ಅಲ್ಲದೆ ಹುಲಿಕೆರೆಗೆ ತುಂಗಭದ್ರ ನೀರು ತುಂಬಿಸುವ ಕಾರ್ಯವೂ ಶೀಘ್ರ ಪೂರ್ಣಗೊಳ್ಳಲಿದೆ. ಬಸವೇಶ್ವರ ವೃತ್ತದಿಂದ ಗಡಿಯಾರ ಕಂಬದವರೆಗಿನ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯ, ಸಿಂಪಿಲಿಂಗಣ್ಣ ರಸ್ತೆ, ಸಾಲಾರ್‌ಜಂಗ್ ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ ಕಳೆದ ಮೂರ‍್ನಾಲ್ಕು ವರ್ಷದಿಂದ ಜನರಿಗೆ ೨೦೦೦ ಗುಂಪು ಮನೆಗಳ ವಿತರಣೆ ಕಾರ್ಯ ವಿಳಂಬವಾಗಿತ್ತು. ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಲು ಮನೆಯ ಹಕ್ಕುಪತ್ರವನ್ನು ಭದ್ರತಾ ದಾಖಲೆಯಾಗಿ ಸಲ್ಲಿಸಬೇಕಿರುವುದರಿಂದ, ಇದೀಗ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸಮಾರಂಭ ಉದ್ಘಾಟಿಸಿ, ಕೊಪ್ಪಳ ನಗರವನ್ನು ಸುಂದರವಾಗಿಸಲು ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಿ, ಗಿಡಮರಗಳನ್ನು ಬೆಳೆಸಿ, ಮಾದರಿ ನಗರವನ್ನಾಗಿಸಿ. ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಉಪಾಧ್ಯಕ್ಷೆ ಮೀನಾಕ್ಷಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ನಗರಸಭೆ ಸದಸ್ಯರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಸ್ವಾಗತಿಸಿದರು. ೨೦೦೦ ಗುಂಪು ಮನೆಗಳ ಯೋಜನೆಯಲ್ಲಿ ೨೮ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Please follow and like us:
error