ಕೊಪ್ಪಳದಲ್ಲಿ ನ. ೦೫ ರಂದು ಹಂಸಲೇಖ ತಂಡದಿಂದ ಗಾನ-ಯಾನ

ganayana-programme ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣ ವಜ್ರ ಮಹೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದೊಂದಿಗೆ ಕನ್ನಡ ಚಲನಚಿತ್ರ ಗೀತೆಗಳನ್ನು ಒಳಗೊಂಡ ಗಾನ-ಯಾನ ಕಾರ್ಯಕ್ರಮವನ್ನು ನ. ೦೫ ರಂದು ಸಂಜೆ ೬ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದು, ಕನ್ನಡದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರ ತಂಡವು ಗಾನಯಾನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ.
ಬೆಂಗಳೂರಿನ ಹಂಸಲೇಖ ಇಮೇಜಸ್ ತಂಡದವರು ಗಾನಯಾನ ಕಾರ್ಯಕ್ರಮ ನಡೆಸಿಕೊಡಲಿದ್ದು, ಖ್ಯಾತ ಗಾಯಕಿ ಲತಾ ಹಂಸಲೇಖ, ಉದಯೋನ್ಮುಖ ಗಾಯಕರಾದ ಶ್ರುತಿ, ಪ್ರತಿಮಾ, ಗುರು, ದೀಪಕ್ ಮತ್ತು ಶಶಿ ಅವರು ಹಂಸಲೇಖ ಅವರ ತಂಡದಲ್ಲಿರುತ್ತಾರೆ. ಕರ್ನಾಟಕ ಏಕೀಕರಣ ನಡೆದುಬಂದ ಹಾದಿ, ಕನ್ನಡ ಚಲನಚಿತ್ರ ರಂಗದ ಬೆಳವಣಿಗೆಗೆ ಕನ್ನಡ ಹಾಡುಗಳ ಕೊಡುಗೆ ಹಾಗೂ ಕನ್ನಡ ನಾಡು ನುಡಿಯನ್ನು ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನವನ್ನು ’ಗಾನ-ಯಾನದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಇಂತಹ ಸೃಜನಾತ್ಮಕ ಕಾರ್ಯಕ್ರಮಗಳ ಸವಿಯನ್ನು ಸವಿಯಲು ಉತ್ತಮ ಸದಾವಕಾಶ ಕೊಪ್ಪಳ ಜನರಿಗೆ ಒದಗಿಬಂದಿದೆ. ಪ್ರವೇಶ ಉಚಿತವಾಗಿದ್ದು, ಕನ್ನಡ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು, ಕನ್ನಡೋಪಾಸಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ವಿಶೇಷ ಸ್ತಬ್ಧಚಿತ್ರ : ಕರ್ನಾಟಕ ರಾಜ್ಯದ ಏಕೀಕರಣವಾಗಿ ೬೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸಲು ಸ್ತಬ್ಧಚಿತ್ರವೊಂದನ್ನು ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿದೆ. ಈ ಸ್ತಬ್ಧಚಿತ್ರದಲ್ಲಿ ಕನ್ನಡ ನಾಡು, ನುಡಿಗಾಗಿ ನಡೆದ ಹೋರಾಟದ ಘಟನಾವಳಿಗಳು, ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ ಒಳಗೊಂಡಂತೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿರುವ ಘಟನೆಗಳ ಕುರಿತ ಸಚಿತ್ರ ಮಾಹಿತಿಯನ್ನು ಒಳಗೊಂಡ ಈ ಸ್ತಬ್ಧಚಿತ್ರಕ್ಕೆ ’ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂಬ ಶೀರ್ಷಿಕೆ ಇದೆ. ನವೆಂಬರ್ ೦೫ ರಂದು ಮಧ್ಯಾಹ್ನ ೦೩ ಗಂಟೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸುವ ಈ ಸ್ತಬ್ಧಚಿತ್ರ ಕೊಪ್ಪಳ ನಗರದ ತಹಸಿಲ್ದಾರ್ ಕಚೇರಿ ಆವರಣದಿಂದ ಹೊರಟು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಅಂತಿಮವಾಗಿ ಸಂಜೆ ಸಾಹಿತ್ಯ ಭವನದ ಬಳಿ ಸಾರ್ವಜನಿಕರ ವೀಕ್ಷಣೆಗಾಗಿ ನಿಲ್ಲಲಿದೆ. ಸ್ತಬ್ಧಚಿತ್ರದ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲ ಕನ್ನಡಪರ ಸಂಘಟನೆಗಳು, ಕನ್ನಡ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ತಬ್ಧಚಿತ್ರದ ಮೆರವಣಿಗೆ ಹಾಗೂ ಗಾನ-ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Please follow and like us:
error