ಕೇಂದ್ರ ಸರ್ಕಾರದಿಂದ ಬರ ಪರಿಹಾರ ಅನುದಾನ ಬಿಡುಗಡೆಯ ನಿರೀಕ್ಷೆ-ಸಿ.ಎಂ. ಸಿದ್ದರಾಮಯ್ಯ

cm-siddaramayya cm-siddaramayya-in-koppal-meet ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ತಲೆದೋರಿದ್ದು, ಇನ್ನೊಂದೆಡೆ ಅನಾವೃಷ್ಟಿ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಬರ ಪರಿಹಾರಕ್ಕಾಗಿ ೪೭೦೨ ಕೋಟಿ ರೂ. ಹಾಗೂ ಅನಾವೃಷ್ಟಿಯ ಪರಿಹಾರಕ್ಕಾಗಿ ೩೭೬ ಕೋಟಿ ರೂ. ಗಳ ಅನುದಾನವನ್ನು ರಾಜ್ಯಕ್ಕೆ ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೆ ಮನವಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕೊಪ್ಪಳ ತಾಲೂಕು ಗಿಣಿಗೇರಾ ಬಳಿಯ ಎಂಎಸ್‌ಪಿಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಅವರು, ನಂತರ ಬಿಜಾಪುರ ಜಿಲ್ಲೆಗೆ ಹೆಲಿಕಾಪ್ಟರ್ ಮೂಲಕ ತೆರಳುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದೆಂದು ಕಂಡರಿಯದ ಭೀಕರ ಬರ ತಲೆದೋರಿದೆ. ಅದೇ ರೀತಿ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಅನಾವೃಷ್ಠಿಯಿಂದ ತೀವ್ರ ಹಾನಿ ಸಂಭವಿಸಿದೆ. ಬರ ಪರಿಹಾರಕ್ಕಾಗಿ ಇನ್‌ಪುಟ್ ಸಬ್ಸಿಡಿಯನ್ನು ರೈತರಿಗೆ ವಿತರಿಸಬೇಕಿದೆ. ಬರ ಪರಿಹಾರಕ್ಕಾಗಿ ೪೭೦೨ ಕೊಟಿ ರೂ. ಹಾಗೂ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಸಂಭವಿಸಿದ ಹಾನಿ ಪರಿಹಾರಕ್ಕೆ ೩೭೬ ಕೋಟಿ ರೂ. ಗಳ ಅನುದಾನವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಬಿಡುಗಡೆ ಮಾಡುವಂತೆ ಕಳೆದ ಅಕ್ಟೋಬರ್ ೨೭ ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಡೀ ದೇಶದಲ್ಲಿ ಪ್ರಸಕ್ತ ವರ್ಷ, ಬರ ಪರಿಹಾರಕ್ಕಾಗಿ ಅನುದಾನ ಒದಗಿಸುವಂತೆ ಕೋರಿ ಕರ್ನಾಟಕ ರಾಜ್ಯವೇ ಮೊದಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಕಾರಣವೆಂದರೆ, ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಭೀಕರ ಬರ ತಲೆದೋರಿದೆ. ತಾವೂ ಸಹ ದೆಹಲಿಗೆ ತೆರಳಿ, ಕೇಂದ್ರ ಗೃಹ ಸಚಿವರಾದ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೇವೆ. ಲೋಕಸಭೆ ಅಧಿವೇಶನ ನಂತರ ಈ ಕುರಿತು ಸಭೆ ಕೈಗೊಂಡು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಕುರಿತು ಯಾವುದೇ ಕ್ರಮ ಆಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ನವರು ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ. ಕೇಂದ್ರ ಸರ್ಕಾರದಿಂದ ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply