ಕೃಷಿ ಅಭಿಯಾನ : ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಆರ್ಥಿಕ ಲಾಭಗಳಿಸಲು ರೈತರಿಗೆ ಕರೆ

krushi-abhiyana-koppal-mla-dc ಆಧುನಿಕ ಹಾಗೂ ಸುಧಾರಿತ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ರೈತರು ಆರ್ಥಿಕವಾಗಿ ಹೆಚ್ಚಿನ ಲಾಭಗಳಿಸಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಇಪ್ಪತ್ತು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಅಭಿಯಾನ ಕಾರ್ಯಕ್ರಮದ ವಿಶೇಷ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೃಷಿ ಚಟುವಟಿಕೆಗಳಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆಗಳಾಗಿದ್ದು, ಆಧುನಿಕ ಹಾಗೂ ಸುಧಾರಿತ ಕೃಷಿ ಪದ್ಧತಿಗಳನ್ನು ಇದೀಗ ರೈತರಿಗೆ ಕೃಷಿ ಇಲಾಖೆ ಪರಿಚಯಿಸಿದೆ. ಅಲ್ಲದೆ ಕೃಷಿ ಇಲಾಖೆಯ ವತಿಯಿಂದ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುತ್ತಿದೆ. ಕೃಷಿ ಯಂತ್ರೋಪಕರಣಗಳನ್ನು ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ಒದಗಿಸಲು ಬಾಡಿಗೆ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಈ ವರ್ಷ ಹೊಸದಾಗಿ ೧೨ ಕೇಂದ್ರಗಳು ಜಿಲ್ಲೆಗೆ ಮಂಜೂರಾಗಿವೆ. ರೈತರು ಇದರ ಸದುಪಯೋಗ ಪಡಿಸಿಕೊಂಡಲ್ಲಿ, ಸಮಯದ ಉಳಿತಾಯ ಹಾಗೂ ಕೂಲಿ ಸಮಸ್ಯೆ ನಿವಾರಿಸಬಹುದು. ಕೃಷಿಭಾಗ್ಯ, ಕೃಷಿ ಯಂತ್ರಧಾರೆ ಯೋಜನೆ ರೈತರಿಗೆ ವರದಾನವಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು, ಕೃಷಿ ಹೊಂಡಗಳನ್ನು ನಿರ್ಮಿಸಿರುವ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೃಷಿ ಹೊಂಡಗಳಿಗೆ ಅಲ್ಲದೆ ನೆರಳು ಪರದೆ ಯೋಜನೆಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಕೃಷಿ ಸಾಧಿಸಿದ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಸರ್ಕಾರ ಮಾಡುತ್ತಿದೆ. ಕೃಷಿ ಇಲಾಖೆಯ ಯೋಜನೆಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಇಲಾಖೆಗಳ ನಡಿಗೆ- ರೈತರ ಮನೆ ಬಾಗಿಲಿಗೆ ಎನ್ನುವ ಘೋಷಣೆಯೊಂದಿಗೆ ವಾರ್ತಾ ಇಲಾಖೆ ಕೃಷಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ಬಿ. ನಾಗರಾಳ ಅವರು, ರೈತರ ಹಿತಕ್ಕಾಗಿ ಕೃಷಿ ಇಲಾಖೆ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಆದರೆ ರೈತರಿಗೆ ಯೋಜನೆಗಳ ಬಗ್ಗೆ ಅರಿವಿನ ಕೊರತೆ ಇದೆ. ರೈತರು ಕೃಷಿಗೆ ಸಂಬಂಧಿತ ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಪ್ರಗತಿ ಪರ ರೈತರೊಂದಿಗೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆಗಳನ್ನು ನಡೆಸುವ ಮೂಲಕ ಕೃಷಿ ಚಟುವಟಿಕೆಗಳ ಹೊಸ ವಿಚಾರಗಳು, ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯ. ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಾಗ ಮಾತ್ರ ರೈತರು ಯೋಜನೆಯ ಲಾಭ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕೃಷಿ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error