ಕುಡಿಯುವ ನೀರಿನ ದೂರುಗಳಿಗೆ ತಕ್ಷಣ ಸ್ಪಂದಿಸಲು- ಸಚಿವ ಎಚ್.ಕೆ. ಪಾಟೀಲ್ ತಾಕೀತು

cabinet_subcommittee_meeting_drought_hit_areas cabinet_subcommittee_meeting_drought_hit_areas_of_koppal ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಕುಡಿಯುವ ನೀರಿನ ಸಹಾಯವಾಣಿಗೆ ಬರುವಂತಹ ದೂರುಗಳಿಗೆ, ದೂರು ಸ್ವೀಕೃತಿಯಾದ ೦೮ ಗಂಟೆಗಳ ಒಳಗಾಗಿ, ಸಮಸ್ಯೆ ಪರಿಹರಿಸಬೇಕು. ಸಮಸ್ಯೆ ತೀವ್ರವಾಗಿದ್ದಲ್ಲಿ, ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಪ್ರಾರಂಭಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಲಬುರಗಿ ವಿಭಾಗಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿ, ಶುಕ್ರವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಜನರು ತೀವ್ರ ಆತಂಕಗೊಂಡಿದ್ದು, ನೀರಿನ ಸಮಸ್ಯೆಯನ್ನು ಎದುರಿಸುವ ಸ್ಥಿತಿ ತಲೆದೋರಿದೆ. ಮಳೆಗಾಲ ಪ್ರಾರಂಭ ಆಗುವವರೆಗೂ, ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವುದು, ಜಿಲ್ಲಾ ಆಡಳಿತದ ಬದ್ಧತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗುವಂತೆ ಈಗಾಗಲೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಬರುವ ದೂರುಗಳಿಗೆ, ದೂರು ಸ್ವೀಕೃತಿಯಾದ ೦೮ ಗಂಟೆಯ ಒಳಗಾಗಿ, ಸ್ಪಂದಿಸುವ ಕಾರ್ಯ ಆಗಬೇಕು. ಅಲ್ಲದೆ ಸಮಸ್ಯೆ ಪರಿಹರಿಸಬೇಕು. ಯಾವುದೇ ಜಲಮೂಲದಿಂದ ನೀರು ಪೂರೈಕೆ ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ, ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗಲೇಬೇಕು. ಎಲ್ಲ ಗ್ರಾಮಗಳಿಗೂ ೨೦೧೭ ರ ಮಾರ್ಚ್ ಒಳಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಅನುದಾನವನ್ನು ಒದಗಿಸಲು ಜಿಲ್ಲೆಯ ಎಲ್ಲ ಶಾಸಕರೂ ಸಹ ಉತ್ಸುಕವಾಗಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶಾಸಕರುಗಳೊಂದಿಗೆ ಸಮಾಲೋಚಿಸಿ, ಯೋಜನೆ ಅನುಷ್ಠಾನಗೊಳಿಸಿದಲ್ಲಿ, ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದಂತಾಗುತ್ತದೆ ಎಂದು ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನಲ್ಲಿ ಸದ್ಯ ೧೦೫ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅಗತ್ಯವಿರುವ ಶೇ. ೫೦ ರಷ್ಟು ಅನುದಾನವನ್ನು ತಾವು ಒದಗಿಸಲು ಸಿದ್ಧರಿದ್ದು, ತಕ್ಷಣದಿಂದಲೇ, ಉಳಿದ ಅನುದಾನವನ್ನು ಒದಗಿಸಿದಲ್ಲಿ ಜನರಿಗೆ ನೀರು ಪೂರೈಕೆಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಚಿವರು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಉದ್ಯೋಗಖಾತ್ರಿ ಯೋಜನೆಯಡಿ ಬರೀ ಕೆರೆಗಳ ಹೂಳೆತ್ತುವುದು, ಸಾಮೂಹಿಕ ಕಾಮಗಾರಿಗಳಿಗೆ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವುದು ಅಷ್ಟೇ ಅಲ್ಲ. ಈ ಯೋಜನೆಯಡಿ ದನದ ದೊಡ್ಡಿ ನಿರ್ಮಿಸಿಕೊಳ್ಳುವುದು, ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ವಯಕ್ತಿಕ ಕಾಮಗಾರಿಗಳಿಗೂ ಅವಕಾಶವಿದೆ. ಇದರ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ನೀಡಿ, ಹೆಚ್ಚು, ಜನರಿಗೆ ಉದ್ಯೋಗ ಕಲ್ಪಿಸಬೇಕು. ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ವಿಶ್ವಾಸಾರ್ಹತೆ ಮೂಡುವಂತೆ ಮಾಡಿ ಎಂದು ಸಚಿವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಜಿಲ್ಲೆಯಲ್ಲಿ ಈ ವರ್ಷ ಈಗಾಗಲೆ ೧. ೪ ಲಕ್ಷ ಮಾನವ ದಿನಗಳನ್ನು ಸೃಜಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದ್ದು, ನಿಗದಿತ ಅವಧಿಯೊಳಗೆ ಕೂಲಿ ಹಣ ಪಾವತಿಗೂ ಕ್ರಮ ಕೈಗೊಳ್ಳಲಾಗಿದೆ. ಯೋಜನೆಯಡಿ ಈ ವರ್ಷ ೧೧. ೬೩ ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಮೇವು ಸಾಗಾಣಿಕೆ ವೆಚ್ಚ ಭರಿಸುವ ಬಗ್ಗೆ ಪರಿಶೀಲಿಸಿ : ಜಿಲ್ಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಈಗಾಗಲೆ ೦೬ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ. ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ೦೪ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ, ಈವರೆಗೆ ೭೫ ಟನ್ ಮೇವು ದಾಸ್ತಾನು ಮಾಡಿ, ಅಗತ್ಯಕ್ಕನುಗುಣವಾಗಿ ಗೋಶಾಲೆಗಳಿಗೆ ಮೇವು ಪೂರೈಸಲಾಗುತ್ತಿದೆ. ಮೇವು ಬ್ಯಾಂಕ್‌ನಿಂದ ಕಡಿಮೆ ದರದಲ್ಲಿ ರೈತರಿಗೆ ಮೇವು ವಿತರಣೆಗೆ ಸಿದ್ಧವಿದ್ದರೂ, ಯಾವುದೇ ರೈತರು ಖರೀದಿಗೆ ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಿತಿಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು, ರೈತರು ಸಮೀಪದ ತಮ್ಮ ಸಂಬಂಧಿಕರಿಂದ, ಅಥವಾ ಇತರೆ ಬಂಧುಗಳಿಂದ ಮೇವು ಪಡೆದುಕೊಂಡು ಹೋಗಲು ಬಯಸಿದಲ್ಲಿ, ಅಂತಹ ರೈತರಿಗೆ ಎಪಿಎಂಸಿ ಗಳ ಮೂಲಕ ಸಾಗಾಣಿಕೆಯ ವಾಹನದ ಡೀಸೆಲ್ ವೆಚ್ಚ ಭರಿಸಬಹುದಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರುಗಳೂ ಆಗಿರುವ ರಾಜ್ಯ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Please follow and like us:
error