You are here
Home > Koppal News-1 > ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಅವಧಿ ವಿಸ್ತರಣೆ

ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಅವಧಿ ವಿಸ್ತರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕೊಡಮಾಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಆಪತ್ಕಾಲದಲ್ಲಿರುವ ವ್ಯಕ್ತಿಯ ಜೀವ ರಕ್ಷಿಸುವಲ್ಲಿ ಧೈರ್ಯ ಸಾಹಸ ಮೆರೆದ ಮಹಿಳೆಗೆ ನೀಡುವ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಡಿ. ೨೬ ರವರೆಗೆ ವಿಸ್ತರಿಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಟ ೦೫ ವರ್ಷಗಳ ಸೇವೆ ಸಲ್ಲಿಸಿರಬೇಕು. ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರೆ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟವನ್ನು ಆಧಾರವಾಗಿ ಪರಿಗಣಿಸಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುವ ವ್ಯಕ್ತಿಗಳು ಅರ್ಹರಲ್ಲ. ಪ್ರಶಸ್ತಿಯನ್ನು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಥವಾ ಸರ್ಕಾರ ನಿಗದಿಪಡಿಸುವ ದಿನದಂದು ಪ್ರದಾನ ಮಾಡಲಾಗುವುದು.
ವೀರ ಮಹಿಳೆ ಪ್ರಶಸ್ತಿ : ಈ ಪ್ರಶಸ್ತಿಯು ಒಬ್ಬ ಮಹಿಳೆಯು, ಆಪತ್ಕಾಲದಲ್ಲಿರುವ ಮತ್ತೋರ್ವ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು, ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿರುವ ೧೮ ರಿಂದ ೪೫ ವರ್ಷದೊಳಗಿನ ಮಹಿಳೆಯರು ಈ ಪ್ರಶಸ್ತಿಗೆ ಅರ್ಹರು. ಕಳೆದ ವರ್ಷದ ಜ. ೦೧ ರಿಂದ ಡಿ. ೩೧ ರವರೆಗಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಗೆ ಸಂಬಂಧಿಸಿದ ಮಹಿಳೆಯ ತಂದೆ/ತಾಯಿ/ ಪೋಷಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಮಹಿಳೆಗೆ ರಾಜ್ಯದ ವತಿಯಿಂದ ೨೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಅರ್ಜಿ ಸಲ್ಲಿಸಲು ಈ ಮೊದಲು ಡಿ. ೧೫ ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿತ್ತು. ಇದೀಗ ಅವಧಿಯನ್ನು ಡಿ. ೨೬ ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯಬಹುದು

Leave a Reply

Top