ಕಾರ್ಪೊರೇಟ್ ವಂಚನೆ: ಬ್ಯಾಂಕುಗಳು ದಿವಾಳಿ- ಸನತ್ ಕುಮಾರ್ ಬೆಳಗಲಿ

An employee counts Indian currency notes at a cash counter inside a bank in Kolkata June 18, 2012. The Indian rupee gained in early trade on Monday as risk assets rallied after Greece elections gave a slim majority to pro-bailout parties, with the focus shifting to the central bank policy decision later in the day. REUTERS/Rupak De Chowdhuri (INDIA - Tags: BUSINESS)

ಅಂಬಾನಿ, ಅದಾನಿಯಂಥ ಭಾರೀ ಬಂಡವಾಳಗಾರರ ಸೇವೆಗೆಂದೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅಡುಗೆ ಅನಿಲ ಸಂಪರ್ಕದ ಸಬ್ಸಿಡಿ ಬಿಟ್ಟು ಕೊಡಲು ಒಂದು ಕೋಟಿ ಜನರನ್ನು ಒಪ್ಪಿಸಿದ್ದಾಗಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಅಡುಗೆ ಅನಿಲದ ಸಬ್ಸಿಡಿ ನಂತರ ಈಗ ಹಿರಿಯ ನಾಗರಿಕರ ರೈಲು ಪ್ರಯಾಣದ ರಿಯಾಯಿತಿಗೆ ಕತ್ತರಿ ಹಾಕಲು ಮಸಲತ್ತು ನಡೆದಿದೆ. ಹಿರಿಯ ನಾಗರಿಕರ ರೈಲು ಪ್ರಯಾಣದ ರಿಯಾಯಿತಿಗೆ ಕತ್ತರಿ ಪ್ರಯೋಗ ಮಾಡಲು ಹೊರಟ ಈ ಪ್ರಧಾನಿ ಕಾರ್ಪೊರೇಟ್ ಬಂಡವಾಳಶಾಹಿಗೆ ರಿಯಾಯಿತಿ ಮೇಲೆ ರಿಯಾಯಿತಿ ನೀಡುತ್ತಿದ್ದಾರೆ. ತಮ್ಮ ಲಾಭದ ಒಂದಂಶವನ್ನು ಬಿಟ್ಟುಕೊಡುವಂತೆ ಅಂಬಾನಿ, ಅದಾನಿ, ಮಿತ್ತಲ್‌ಗಳಿಗೆ ಈ ಮೋದಿ ಎಂದೂ ಒತ್ತಾಯಿಸುವುದಿಲ್ಲ. ಈ ದೇಶದ ಭಾರೀ ಕಾರ್ಪೊರೇಟ್ ಕಂಪೆನಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 8.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆದು ಈ ಸಾಲವನ್ನು ತೀರಿಸಲಾಗದೆ ತಿರುಪತಿ ನಾಮ ಬಳಿದಿವೆ. ಇದರಲ್ಲಿ ಹತ್ತು ಬಂಡವಾಳಶಾಹಿ ಕಂಪೆನಿಗಳು ಬ್ಯಾಂಕುಗಳಿಗೆ 7 ಲಕ್ಷ ಕೋಟಿ ರೂಪಾಯಿ ಟೋಪಿ ಹಾಕಿವೆ. ಈ ಸಾಲ ವಸೂಲಿ ಮಾಡುವಂತೆ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

An employee counts Indian currency notes at a cash counter inside a bank in Kolkata June 18, 2012. The Indian rupee gained in early trade on Monday as risk assets rallied after Greece elections gave a slim majority to pro-bailout parties, with the focus shifting to the central bank policy decision later in the day. REUTERS/Rupak De Chowdhuri (INDIA - Tags: BUSINESS)

ಮೋದಿಯನ್ನು ಅಭಿವೃದ್ಧಿಯ ಹರಿಕಾರ ಎಂದು ವರ್ಣಿಸುವ ನಮ್ಮ ಮಧ್ಯಮ ವರ್ಗದ ಜನ ಹಾಗೂ ಕಾರ್ಪೊರೇಟ್ ಮಾಧ್ಯಮಗಳು ಕಾರ್ಪೊರೇಟ್ ಕಂಪೆನಿಗಳು ಬ್ಯಾಂಕುಗಳಿಗೆ ಹಾಕಿದ ಟೋಪಿಯ ಬಗ್ಗೆ ಮಾತಾಡುವುದಿಲ್ಲ. ಅವರು ಮಾತಾಡಬೇಕೆನ್ನುವಷ್ಟರಲ್ಲಿ ಆಳುವ ಪಕ್ಷ ಕೋಮುವಾದಿ ಅಜೆಂಡಾ ಜಾರಿಗೆ ತಂದು ಚರ್ಚೆಯ ಮತ್ತು ಜನಾಕ್ರೋಶದ ದಿಕ್ಕನ್ನು ಬದಲಿಸುತ್ತ ಬಂದಿದೆ. ಬಡವರು, ರೈತರು ಬ್ಯಾಂಕುಗಳಿಂದ ಹತ್ತಾರು ಸಾವಿರ ರೂಪಾಯಿ ಸಾಲ ಪಡೆದು ಕಟ್ಟದಿದ್ದರೆ ವಸೂಲಿಗೆ ಬರುವ ಬ್ಯಾಂಕ್ ಅಧಿಕಾರಿಗಳು ರೈತರ ಮನೆಯಲ್ಲಿನ ಪಾತ್ರೆ, ಪಗಡ ಬಕೆಟುಗಳನ್ನು ಜಪ್ತಿ ಮಾಡಿಕೊಂಡು ಹೋಗುತ್ತಾರೆ. ಭಾರೀ ಬಂಡವಾಳಶಾಹಿ ಕಂಪೆನಿಗಳು ಮೂರು ನಾಮ ಬಳಿದರೆ ಈ ಬ್ಯಾಂಕುಗಳು ಅಂಥವರ ಉಸಾಬರಿಗೆ ಹೋಗುವುದಿಲ್ಲ. ಕಾರ್ಪೊರೇಟ್ ಬಂಡವಾಳ ಶಾಹಿ ದೈತ್ಯ ಕಂಪೆನಿಗಳಿಂದಾಗಿ ಭಾರತದ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿವೆ. ಬಡವರು ಬದುಕಿಗಾಗಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ತೀರಿಸುತ್ತ ಬಂದಿದ್ದಾರೆ. ಆದರೆ ಐದು ಕೋಟಿ ರೂಪಾಯಿ ಹಾಗೂ ಹೆಚ್ಚಿನ ಮೊತ್ತದ ಸಾಲವನ್ನು ಹೊಂದಿರುವ ಸುಸ್ತಿದಾರರೆ ಬ್ಯಾಂಕುಗಳ ದುಸ್ಥಿತಿಗೆ ಕಾರಣವಾಗಿದ್ದಾರೆ.sanath-kumar-belagali

ಮದ್ಯದ ಉದ್ಯಮಿ ವಿಜಯ ಮಲ್ಯ, ಮಾಯಾಂಕ್ ಜೈನ್ ಅವರಂಥ ಬಂಡವಾಳಗಾರರು ಬ್ಯಾಂಕುಗಳಿಗೆ ತೊಂಬತ್ತು ಸಾವಿರ ಕೋಟಿ ರೂಪಾಯಿ ಟೋಪಿ ಹಾಕಿ ದೇಶದಿಂದ ನಾಪತ್ತೆಯಾಗಿದ್ದಾರೆ. ಇಂಥವರಿಗೆ ಸರಕಾರವೂ ರಿಯಾಯಿತಿ ತೋರಿಸುತ್ತ ಬಂದಿದೆ. 2013ರಿಂದ 2015ರ ವರೆಗಿನ ಕಾಲಾವಧಿಯಲ್ಲಿ ಇಂಥ ಬಂಡವಾಳಿಗರ 1.14 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿವೆ. ಸರಕಾರ ಮನ್ನಾ ಮಾಡಿದ 1.14 ಲಕ್ಷ ಕೋಟಿಯನ್ನು ಬಿಟ್ಟರೆ 3.6 ಲಕ್ಷ ಕೋಟಿ ರೂಪಾಯಿ ಸಾಲ ಅನುತ್ಪಾದಕ ಆಸ್ತಿಯಾಗಿ ಬ್ಯಾಂಕ್ ದಾಖಲೆಯಲ್ಲಿ ಕೊಳೆಯುತ್ತಿದೆ. ಈ ಅನುತ್ಪಾದಕ ಆಸ್ತಿ ಪ್ರಮಾಣ ಇನ್ನಷ್ಟು ಹೆಚ್ಚುವ ಎಲ್ಲ ಸೂಚನೆಗಳು ಕಾಣುತ್ತಿವೆ. ಇದಕ್ಕೆ ದೊಡ್ಡ ಮೊತ್ತದ ಸಾಲ ಪಡೆದ ಸಣ್ಣ ಸಣ್ಣ ಸಂಖ್ಯೆಯ ಸದಸ್ಯರೇ ಕಾರಣ. ಇಂಡಿಯಾ ರೇಟಿಂಗ್ ಆ್ಯಂಡ್ ರಿಸರ್ಚ್ ಎಂಬ ರೇಟಿಂಗ್ ಏಜೆನ್ಸಿ ನಡೆಸಿದ ಅಧ್ಯಯನದ ಪ್ರಕಾರ 6.7 ಲಕ್ಷ ಕೋಟಿ ರೂ. ಮೊತ್ತ ಹೊಂದಿರುವ ಕಾರ್ಪೊರೇಟ್ ಸಾಲ ಸುಸ್ತಿಯಾಗುವ ಎಲ್ಲ ಲಕ್ಷಣಗಳು ಇವೆ. ಬ್ಯಾಂಕುಗಳಿಂದ ಸಾಲ ಪಡೆದ 500 ಕಂಪೆನಿಗಳ ಪೈಕಿ 240 ಸಾಲಗಾರ ಸಂಸ್ಥೆಗಳು ತಮ್ಮ ಸಾಲದ ಹೊಣೆಗಾರಿಕೆ ಪೂರೈಸಲು ಅಗತ್ಯ ಹಣಕಾಸು ಸಂಪನ್ಮೂಲ ಹೊಂದಿಲ್ಲ. ಈ ಅಧ್ಯಯನದ ಪ್ರಕಾರ 240 ಸಾಲಗಾರ ಸಂಸ್ಥೆಗಳು ತಮ್ಮ ಸಾಲದ ಹೊಣೆಗಾರಿಕೆಯನ್ನು ನಿಭಾಯಿಸಲು ಅಗತ್ಯವಾದ ಹಣಕಾಸು ಸಂಪನ್ಮೂಲವನ್ನು ಹೊಂದಿಲ್ಲ. ಅಂದರೆ, ಹಾಲಿ ಸಾಲವನ್ನು ತೀರಿಸಲು ಮತ್ತೆ ಹೊಸ ಸಾಲವನ್ನು ಪಡೆಯ ಬೇಕಾದ ಪರಿಸ್ಥಿತಿ ಇದೆ. ಈ ಸಾಲದ ಪೈಕಿ 4.7 ಲಕ್ಷ ಕೋಟಿ ರೂಪಾಯಿ ಅವಧಿ ಮೀರಿದ ಸಾಲವಾಗಿದೆ. ಬ್ಯಾಂಕುಗಳಿಗೆ ಇರುವ ದೊಡ್ಡ ಸವಾಲೆಂದರೆ ಸುಸ್ತಿ ಬಾಕಿಯ ಪೈಕಿ ಮೂರನೆ ಒಂದರಷ್ಟು ಸಾಲವನ್ನು ಈ 500 ಕಂಪೆನಿಗಳಿಗೆ ನೀಡಿವೆ. ಈ ಕಂಪೆನಿಗಳು ಮರು ಪಾವತಿ ಮಾಡಲು ವಿಫಲವಾದರೆ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಬ್ಯಾಂಕುಗಳಿಗೆ ಟೋಪಿ ಹಾಕಿದ ಪ್ರಮುಖ ಸಾಲಗಾರ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾಸ್ಟೀಲ್, ವೇದಾಂತ, ಜೈಪ್ರಕಾಶ್ ಅಸೋಸಿಯೇಟ್ ಮತ್ತು ಭಾರ್ತಿ ಏರ್‌ಟೆಲ್ ಕಂಪೆನಿಗಳು ಪ್ರಮುಖವಾಗಿವೆ. ಈ ಸಾಲ ವಸೂಲಾತಿ ಬಗ್ಗೆ ಕೇಂದ್ರ ಸರಕಾರ ಬಾಗಿಬಡಿದುಕೊಂಡು ಕೂತಿದೆ.

ಸದಾ ಇನ್ನೊಬ್ಬರ ರಾಷ್ಟ್ರ ನಿಷ್ಠೆಯನ್ನು ಪ್ರಶ್ನಿಸುವ ನಕಲಿ ದೇಶಭಕ್ತರು ದೇಶಕ್ಕೆ ಟೋಪಿ ಹಾಕಿದ ಈ ಬಂಡವಾಳಶಾಹಿ ಕಂಪೆನಿಗಳ ಬಗ್ಗೆ ದನಿಯೆತ್ತುವುದಿಲ್ಲ. ಎಲ್ಲೋ ದನ ಸಾಗಾಟವಾದರೆ ಹಣೆಗೆ ಕುಂಕುಮ ಬಳಿದುಕೊಂಡು ಪರಾಕ್ರಮ ತೋರಿಸುವ ಇವರು ವಂಚಕ ಉದ್ಯಮ ಪತಿಗಳ ಬಗ್ಗೆ ಮಾತಾಡುವುದಿಲ್ಲ. ಈ ವಂಚಕರ ಬಗ್ಗೆ ಇವರೇಕೆ ಮಾತಾಡುವುದಿಲ್ಲ ಗೊತ್ತೆ, ಸಂಘಪರಿವಾರದ ಕೋಮುವಾದಿ ಸಂಘಟನೆಗಳಿಗೆ ದೇಶ ವಿದೇಶದ ಕಾರ್ಪೊರೇಟ್ ಕಂಪೆನಿಗಳಿಂದ ಕೋಟ್ಯಂತರ ರೂಪಾಯಿ ನೆರವಿನ ರೂಪದಲ್ಲಿ ಹರಿದು ಬರುತ್ತದೆ. ಅಂತಲೆ ಜನರ ಹೋರಾಟದ ದಿಕ್ಕನ್ನು ಬದಲಿಸಲು ಈ ಸಂಘಟನೆಗಳು ಸದಾ ಹುನ್ನಾರ ನಡೆಸುತ್ತಿರುತ್ತವೆ. ಇತ್ತೀಚೆಗೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಂಧಶ್ರದ್ಧೆ ನಿರ್ಮೂಲನಾ ಶಾಸನ ತರಲು ಹೊರಟಾಗ ಪ್ರಮೋದ್ ಮುತಾಲಿಕ್ ಸೇರಿದಂತೆ ಈ ಕೋಮುವಾದಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದವು. ಆದರೆ ದೇಶಕ್ಕೆ ವಂಚನೆ ಮಾಡಿದ ಕಾರ್ಪೊರೇಟ್ ಕಂಪೆನಿಗಳ ಬಗ್ಗೆ ಇವರು ಉಸಿರೆತ್ತುವುದಿಲ್ಲ. ಈ ದೇಶದ ಮಾಧ್ಯಮಗಳು ಹೇಗಿವೆ ಅಂದರೆ ವಿಜಯ ಮಲ್ಯ ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿ ಹೋದಾಗ ಟೈಮ್ಸ್‌ನೌನ ಅರ್ನಾಬ್ ಸೇರಿದಂತೆ ಕೆಲ ಮಾಧ್ಯಮಗಳು ಕನ್ಹಯ್ಯ್ ಕುಮಾರ್‌ನ ನಕಲಿ ವೀಡಿಯೊ ತೋರಿಸಿ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದವು.
ಈಗ ಅದಾನಿ ಮೋದಿಗಳ ಸಿಎಜಿ 45,000ಕೋಟಿ ಹಗರಣ ಬಯಲಿಗೆ ಬಂದಾಗ ಝಾಕಿರ್ ನಾಯ್ಕ ಬೆನ್ನಹಿಂದೆ ಬಿದ್ದ ಮೀಡಿಯಾಗಳು ಕೇಂದ್ರದ ಹಗರಣ ಮುಚ್ಚಿಹಾಕಲು ಯತ್ನಿಸುತ್ತಿವೆ.

ಇದು ದೇಶದ ಇಂದಿನ ಸ್ಥಿತಿ. ನರೇಂದ್ರ ಮೋದಿ ಯಾರ ಹಿತಾಸಕ್ತಿ ರಕ್ಷಿಸುತ್ತಾರೆ, ಸಂಘ ಪರಿವಾರ ಯಾರ ರಕ್ಷಣೆಗೆ ನಿಲ್ಲುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿವೆ.

ಕೃಪೆ : ವಾರ್ತಾಭಾರತಿ

Please follow and like us:
error