ಕಪ್ಪು ಹಣ ಬಿಳಿ ಮಾಡಲು ಇಲ್ಲಿದೆ ಸರ್ಕಾರ ತೋರಿಸುವ ಸುರಕ್ಷಿತ ದಾರಿ

ಹೊಸದಿಲ್ಲಿ, ನ.26: ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರದ ಬಳಿಕ ಇದೀಗ ಕಪ್ಪುಹಣ ಕೂಡಿಟ್ಟವರಿಗೆindia-economy-bank-forex ಶುಭ ಸುದ್ದಿ ಕೇಂದ್ರ ಸರ್ಕಾರದಿಂದ ಬಂದಿದೆ. ನಾಗರಿಕರು 2.5 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹೊಂದಿದ್ದರೆ, ಶೇ.60ರಷ್ಟು ದಂಡ ಪಾವತಿಸಿ, ಅದನ್ನು ಬಿಳಿ ಹಣವಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಸ್ವಯಂಪ್ರೇರಿತರಾಗಿ ಈ ಕ್ರಮಕ್ಕೆ ಮುಂದಾಗದೇ ತೆರಿಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಅಂಥವರನ್ನು ಪತ್ತೆ ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ವಯಂಪ್ರೇರಿತರಾಗಿ 2.5 ಲಕ್ಷಕ್ಕಿಂತ ಅಧಿಕ ನಗದು ದಾಸ್ತಾನು ಇರುವುದನ್ನು ಒಪ್ಪಿಕೊಳ್ಳುವ ಜನರು ಶೇಕಡ 60ರಷ್ಟು ದಂಡ ತೆರಬೇಕಾಗುತ್ತದೆ. ಆಗ ಅವರ ಇತರ ಹಣ ಬಿಳಿಯಾಗುತ್ತದೆ. ಚಿನ್ನ, ಭೂ ವ್ಯವಹಾರ ಅಥವಾ ವಿದೇಶಿ ಖಾತೆಗಳಲ್ಲಿ ಹಾಕುವ ವಾಮಮಾರ್ಗದ ಬದಲು ಪರ್ಯಾಯವಾದ ಕಾನೂನುಬದ್ಧ ಮಾರ್ಗವನ್ನು ಈ ಮೂಲಕ ಕೇಂದ್ರ ತೋರಿಸಿಕೊಟ್ಟಿದೆ.
ಈಗ ಅಧಿಕ ಆದಾಯದವರಿಗೆ ವಿಧಿಸಲಾಗುವ ಶೇಕಡ 33.9ಕ್ಕಿಂತ ಅಧಿಕ ದರದ ತೆರಿಗೆಯನ್ನು ದಂಡ ರೂಪದಲ್ಲಿ ವಿಧಿಸಲು ನಿರ್ಧರಿಸಲಾಗಿದೆ. ಆದರೆ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ತೆರಿಗೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಪತ್ತೆ ಮಾಡಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ಎಚ್ಚರಿಕೆ ನೀಡಿವೆ.
2016ರ ಸೆಪ್ಟೆಂಬರ್ ಅಂತ್ಯದವರೆಗೂ ಅಘೋಷಿತ ಆದಾಯವನ್ನು ಘೋಷಿಸಿಕೊಂಡಲ್ಲಿ ಶೇಕಡ 45ರಷ್ಟು ತೆರಿಗೆ ವಿಧಿಸಲು ಕೇಂದ್ರ ನಿರ್ಧರಿಸಿತ್ತು. ಇದೀಗ ಎರಡನೆ ಹಂತದ ಅಂಥ ಘೋಷಣೆಗೆ ಶೇಕಡ 15ರಷ್ಟು ಅಧಿಕ ತೆರಿಗೆ ವಿಧಿಸಿ ಮತ್ತೊಂದು ಅವಕಾಶ ನೀಡಲಾಗಿದೆ. ಹೀಗೆ ಬಂದ ಆದಾಯವನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಕೋಶಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಇಂಥ ಕಾಳಧನಿಕರಿಗೆ ಶೇಕಡ 200ರಷ್ಟು ತೆರಿಗೆ ವಿಧಿಸುವ ಕ್ರಮದ ಬದಲು, ಸ್ವಯಂಪ್ರೇರಿತರಾಗಿ ನಗದು ಘೋಷಿಸಿಕೊಳ್ಳಲು ಮುಂದಾದರೆ ಶೇಕಡ 60ರಷ್ಟು ಮಾತ್ರ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

Leave a Reply