ಕನ್ಹಯ್ಯ ಕುಮಾರ್ ಪ್ರತಿರೋಧ್ ~ 2 ವೇದಿಕೆಯಲ್ಲಿ ಮಾಡಿದ ಭಾಷಣದ ಮುಂದುವರಿದ ಭಾಗ .

ಭಾವಾನುವಾದ : ಚೇತನಾ ತೀರ್ಥಹಳ್ಳಿ

Kanhaiya_Kumar-azadi

 

ಇಲ್ಲಿರುವ ಹಿರಿಯರಲ್ಲಿ ನಮ್ಮದೊಂದು ಶಿಕಾಯತ್ ಇದೆ. ನೀವು ಅದೆಷ್ಟು ಮತಭೇದ ಹುಟ್ಟುಹಾಕಿದ್ದೀರೆಂದರೆ, ಇವತ್ತು ನಮಗೆ ಒಗ್ಗಟ್ಟಿನಿಂದ ಮುಂದುವರೆಯೋದು ಮಹಾಪ್ರಯಾಸವಾಗಿಬಿಟ್ಟಿದೆ. ನೀವು ಹಾಗೆ ಮಾಡಿಲ್ಲದಿದ್ದರೆ, ಇಂದು ನಾವು ಗಾಂಧಿ ಮತ್ತು ಅಂಬೇಡ್ಕರರನ್ನು ಒಗ್ಗೂಡಿಸಲು ಇಷ್ಟೆಲ್ಲ ಕಷ್ಟ ಪಡಬೇಕಾಗ್ತಿರಲಿಲ್ಲ.
ನಾವು ನಮ್ಮ ಆದರ್ಶಪುರುಷರನ್ನು ಕುಸ್ತಿಯ ಅಖಾಡಾಕ್ಕೆ ಇಳಿಸುವ ಅಗತ್ಯವಾದರೂ ಏನಿದೆ? ಇದರಲ್ಲಿ ಗೆದ್ದವರನ್ನು ಒಪ್ಪಿಕೊಳ್ಳೋದು, ಸೋತವರನ್ನ ಬಿಟ್ಟುಬಿಡಬೇಕೇನು? ಅವರು ತಮ್ಮ ಯುಗದಲ್ಲಿ ಜೀವಿಸಿದ್ದರು… ಅವತ್ತಿನ ಅಗತ್ಯಕ್ಕೆ ತಕ್ಕಂತೆ. ತಮ್ಮ ಕನ್ನಡಕದಿಂದಲೇ ಜಗತ್ತನ್ನು ನೋಡಿದರು ಮತ್ತು ಹೋರಾಡಿದರು. ತಮ್ಮದೇ ರೀತಿಯಲ್ಲಿ ಭವಿಷ್ಯವನ್ನು ರೂಪಿಸಿದರು. ನಾವೀಗ ನಮ್ಮದೇ ಯುಗದಲ್ಲಿ ಜೀವಿಸ್ತಾ ಇದ್ದೀವಿ. ನಮ್ಮ ಕನ್ನಡಕದಿಂದ ಜಗತ್ತನ್ನ ನೋಡ್ತಾ ಇದ್ದೀವಿ. ಅಗತ್ಯ ಬಿದ್ದರೆ ಕನ್ನಡಕ ಕಳಚಿಟ್ಟು ನೋಡ್ತೀವಿ. ಯಾವಾಗ ಯಾರ ಅಗತ್ಯ ಬೀಳ್ತದೋ ಅವರೊಂದಿಗೆ ಕೈಜೋಡಿಸ್ತೀವಿ.
ಈ ದೇಶದಲ್ಲಿ ಫ್ರೀಲಾನ್ಸ್ ಗೋಡ್ಸೆಗಳಿಂದ ಬಚಾವಾಗಬೇಕು ಅಂದರೆ, ನಾವು ಅಂಬೇಡ್ಕರ್ ಮತ್ತು ಗಾಂಧಿಯ ಮಾತುಗಳನ್ನಾಡಬೇಕು. ಗಾಂಧಿಯ ಹಾಗೆ ಜೀವ ತೊರೆಯಲು ಸಿದ್ಧರಾಗಬೇಕು. ಆದರೆ ಇಂಥ ಒಗ್ಗಟ್ಟಿನ ಮಾತು ನಮಗೆಲ್ಲೂ ಕೆಳಿಸ್ತಲೇ ಇಲ್ಲ. ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರೂ ಹಿಂಸೆಯ ವಿರುದ್ಧ ಮಾತಾಡಿದವರು. ಬಾಬಾ ಸಾಹೇಬ್ ಅಂಬೇಡ್ಕರರು ಮತ್ತೆ ಮತ್ತೆ ಸಾಂವಿಧಾನಿಕ ನಡವಳಿಕೆ ಬಗ್ಗೆ ಹೇಳಿದರು. ಗಾಂಧಿಯೂ ಮತ್ತೆಮತ್ತೆ ಅಹಿಂಸೆಯ ಮಾತುಗಳನ್ನಾಡಿದರು. ಇಬ್ಬರೂ ಒಂದೇ ಪಕ್ಷದಲ್ಲಿದ್ದಾರೆ. ಮತ್ತೆ ನಾವ್ಯಾಕೆ ಒಟ್ಟಾಗಿ ಸಂಘಿಗಳ ವಿರುದ್ಧ ಮಾತಾಡೋದಿಲ್ಲ? ಸಂಘಿಗಳು ಪ್ರಜಾಪ್ರಭುತ್ವದ ಮೇಲೆ, ಜನತಂತ್ರದ ಮೇಲೆ ದಾಳಿ ನಡೆಸ್ತಲೇ ಇದ್ದಾರೆ, ನಾವ್ಯಾಕೆ ಒಟ್ಟಾಗಿ ಆ ಪಕ್ಷವನ್ನು ಎದುರಿಸ್ತಾ ಇಲ್ಲ?
ಮತ್ತೀಗ ನಾನು ನಮ್ಮ ಭಗತ್ ಸಿಂಗನ ಬಗ್ಗೆ ಹೇಳಬೇಕು. ಕ್ರಾಂತಿಕಾರಿಗಳೆಲ್ಲರೂ ಸಹಜವಾಗಿ ಭಗತ್ ಸಿಂಗನ ಆರಾಧಕರು. ಆದರೆ ಅದೇ ಭಗತ್ ಸಿಂಗ್ ಹೇಳ್ತಾನೆ, ಸ್ವಾತಂತ್ರ್ಯ ಬಾಂಬ್ ಮತ್ತು ಪಿಸ್ತೂಲುಗಳಿಂದ ದೊರೆಯುವಂಥದಲ್ಲ. ಅದು ವೈಚಾರಿಕ ಸಂಘರ್ಷದಿಂದ ದೊರೆಯುವಂಥದ್ದು. ವಿಚಾರಗಳ ಮೂಲಕ ದಕ್ಕಿಸಿಕೊಳ್ಳುವಂಥದ್ದು ಅಂತ. ಈ ವೈಚಾರಿಕ ಸಂಘರ್ಷವನ್ನು ನಾವು ಮುಂದುವರೆಸಬೇಕಿದೆ. ಇವತ್ತು ದೇಶದೆಲ್ಲೆಡೆ ಏನು ಸೆಮಿನಾರುಗಳಾಗ್ತಿವೆ, ಚರ್ಚೆಗಳೇರ್ಪಡುತ್ತಿವೆ, ನಾವು ಕ್ಯಾಂಪಸ್ಸಿನಲ್ಲೇನು ಹೋರಾಟ ಶುರು ಮಾಡಿದ್ದೇವೆ, ಅವೆಲ್ಲವೂ ಈ ಕೋಣೆಗಳಿಂದ ಹೊರಟು ಹಳ್ಳಿಗಳನ್ನ ತಲುಪಬೇಕು. ಅಲ್ಲಿ ನಾವು ಹೋರಾಟ ಮುಂದುವರೆಸಬೇಕು.

ಸೆಹ್ಲಾ ಹೇಳಿದಂತೆ, ಇವತ್ತು ರೈತನ ಮಕ್ಕಳನ್ನು ರೈತನ ವಿರುದ್ಧ ನಿಲ್ಲಿಸಲಾಗ್ತಿದೆ. ರೈತನ ಮಗನನ್ನು ಸೈನಿಕನ ವಿರುದ್ಧ ನಿಲ್ಲಿಸಲಾಗ್ತಿದೆ. ನಾವು ಈ ಹುನ್ನಾರವನ್ನು ಕೊನೆಗೊಳಿಸಬೇಕಿದೆ. ಈ ಅನ್ಯಾಯವನ್ನು ತೊಡೆಯಬೇಕಿದೆ. ನಮ್ಮ ಹಕ್ಕಿಗಾಗಿ ಒಗ್ಗಟ್ಟಿನ ಹೋರಾಟ ನಡೆಸ್ತೇವೆಂದು ಕೂಗಿ ಹೇಳಬೇಕಿದೆ. ಮತ್ತು, ನಾವು ಈ ಹೋರಾಟವನ್ನು ಒಗ್ಗಟ್ಟಿನಿಂದ ಮುನ್ನಡೆಸಲಿದ್ದೇವೆ. ನೀವು ನಮ್ಮನ್ನು ಬೇರ್ಪಡಿಸಲಾರಿರಿ. ನೀವು ನಮ್ಮನ್ನು ಗೊಂದಲಗೊಳಿಸಲಾರಿರಿ. ನಿಮ್ಮ ಪ್ರಯತ್ನಗಳು ಮುಗಿದಿವೆ.

ಈ ಸಂಘಿಗಳು ಓದಿಕೊಂಡಿರೋದು ಕಡಿಮೆ. ಅವರು ಹೇಳ್ತಾರೆ, 28 ವರ್ಷ ವಯಸಾಯ್ತು ಇನ್ನೂ ಓದ್ತಲೇ ಇದ್ದಾನೆ ಅಂತ. ನಾನು ಹೇಳ್ತೀನಿ, ನಮ್ಮ ದೇಶದ ದುರಂತ ಇದೇ ನೋಡಿ! ಎಷ್ಟೋ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ…. ಪಿಎಚ್ಡಿ ಮುಗಿಸುವಾಗ ಏನಿಲ್ಲವೆಂದರೂ 28 ವರ್ಷ ಆಗಿರುತ್ತದೆ ಅಂತ. ಎಲ್ಲರಿಗೂ ಪಿಎಚ್ಡಿ ಮಾಡುವ ಅವಕಾಶ ಸಿಕ್ಕಿದ್ದಿದ್ದರೆ ಬಹುಶಃ ಅವರಿಗೆ ತಿಳಿದಿರುತ್ತಿತ್ತು, ಅದನ್ನು ಮಾಡಿಮುಗಿಸುವಾಗ 28ವರ್ಷದವರೆಗೂ ಆಗುತ್ತದೆ ಅಂತ.
ಎಷ್ಟು ಅವಸರ ಮಾಡಿದರೂ ಅಷ್ಟೆ…. ತಮ್ಮ ಹೆಂಡತಿಯನ್ನ ಸಿಕ್ಕಾಪಟ್ಟೆ ಪ್ರೀತಿಸುತ್ತಾ, ಆದಷ್ಟು ಬೇಗ ಪರಿವಾರ ಬೆಳೆಯಬೇಕೆಂದು ಧಾವಂತಪಟ್ಟರೇನು ಬಂತು? ಮಗು ಹುಟ್ಟಲು ಒಂಭತ್ತು ತಿಂಗಳು ಕಾಯಲೇಬೇಕಾಗುತ್ತದೆ. ಪಿಎಚ್ಡಿ ಮಾಡಿ ಮುಗಿಸುವಾಗ 28 ವರ್ಷ ಆಗಿಯೇ ಆಗುತ್ತದೆ ಅಣ್ಣಂದಿರಾ, ನಾನು ಈ ದೇಶದಲ್ಲಿ ಅಂಥಾ ಮಹಾಪರಾಧವನ್ನೇನೂ ಮಾಡ್ತಿಲ್ಲ!
ಇನ್ನು ಕೆಲವರು ಸಬ್ಸಿಡಿಯ ಬಗ್ಗೆ ಮಾತಾಡ್ತಾರೆ. ಅದಕ್ಕೂ ನನ್ನ ಉತ್ತರವಿದೆ ಕೇಳಿ. ಅದೇನು ಬಳಕೆಯಾಗ್ತಿದೆ, ಸರಿಯಾದ ಕಡೆಯಲ್ಲೇ ಖರ್ಚಾಗ್ತಿದೆ. ಅದು ವ್ಯರ್ಥವಾಗೋದು ಎಲ್ಲಿ ಗೊತ್ತಾ? 5 ಲಕ್ಷ ರುಪಾಯಿಯ ಸೂಟ್ ಧರಿಸಿ ಯಾವಾಗಲೂ ಫ್ಲೈಟ್ ಮೋಡಿನಲ್ಲಿರ್ತಾರಲ್ಲ, ಅಲ್ಲಿ! ಆರ್ಥಿಕವಾಗಿ ಹಿಂದುಳಿದ ನಾನು, ನನ್ನಂಥವರು ಜೆ ಎನ್ ಯುನಲ್ಲಿ ಓದಲು ಸಾಧ್ಯವಾಗ್ತಿದೆಯೆಂದರೆ, ಸಬ್ಸಿಡಿಯ ಸಾರ್ಥಕ ಉಪಯೋಗ ಇದಕ್ಕಿಂತ ಹೆಚ್ಚೇನಿರಲು ಸಾಧ್ಯ? ಈ ದೇಶದಲ್ಲಿ, ಉನ್ನತ ಮಟ್ಟದ ಇಂಗ್ಲಿಷ್ ಮಾತಾಡುವ ಜೆ ಎನ್ ಯುದಲ್ಲಿ ಪಿ ಎಚ್ ಡಿ ಓದ್ತಿರುವ ವ್ಯಕ್ತಿಯೊಬ್ಬ ಹಿಂದಿಯಲ್ಲಿ ರೈತರ ಬಗ್ಗೆ ಮಾತಾಡುತ್ತಾನೆ ಅಂದರೆ ಸಬ್ಸಿಡಿಯ ಸಾರ್ಥಕ ಉಪಯೋಗ ಇದಕ್ಕಿಂತ ಹೆಚ್ಚೇನಿರಲು ಸಾಧ್ಯ?
ಈ ದೇಶದಲ್ಲಿ ಸರ್ಕಾರಗಳನ್ನು ನೋಡಿ ಜನರು ದಾರಿ ಬದಲಾಯಿಸ್ತಾರೆ. ಇನ್ನು ಮೋದಿಯವರದ್ದು 56 ಇಂಚಿನ ಎದೆ. ಈ 56 ಇಂಚಿನ ಎದೆಯವರಿಗೆ 12 ಇಂಚಿನ ಎದೆಯವನೊಬ್ಬ ಢಿಕ್ಕಿ ಹೊಡೆಯಬಲ್ಲ ಅಂದರೆ ಸಬ್ಸಿಡಿಯ ಸಾರ್ಥಕ ಉಪಯೋಗ ಇದಕ್ಕಿಂತ ಹೆಚ್ಚೇನಿರಲು ಸಾಧ್ಯ?

ಮತ್ತೊಮ್ಮೆ ಹೇಳ್ತೀನಿ ಗೆಳೆಯರೇ, ನಮ್ಮ ಹೋರಾಟ, ಈ ದೇಶದ ಉಳಿವಿಗಾಗಿ ನಡೆಸ್ತಿರುವ ಹೋರಾಟ. ಮತ್ತು ಈ ಹೋರಾಟದಲ್ಲಿ, ತಮ್ಮ ಜೀವವನ್ನರ್ಪಸಿದ ಆ ಎಲ್ಲ ಜನರನ್ನು ನಾವು ಸ್ಮರಿಸ್ತೀವಿ. ಅದು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಇರಬಹುದು, ಮಹಾತ್ಮ ಗಾಂಧಿ ಇರಬಹುದು, ನೆಹರೂ, ಭಗತ್ ಸಿಂಗ್ , ಸಾವಿತ್ರಿ ಬಾಯಿ ಫುಲೆ, ಜ್ಯೋತಿಬಾ ಫುಲೆ, ಪೆರಿಯಾರ್ – ಯಾರೇ ಇರಬಹುದು… ನಾವು ಅವರೆಲ್ಲರನ್ನೂ ಸ್ಮರಿಸುತ್ತೀವಿ. ಅವರು ನಡೆದ ದಾರಿಯಲ್ಲಿ ನಡೆಯುತ್ತ ಈ ದೇಶವನ್ನು ಸಮತಾವಾದದ ಬುನಾದಿಯ ಮೇಲೆ ಸ್ಥಾಪನೆಗೊಳಿಸಲು ಬಯಸ್ತೀವಿ. ಏಕೆಂದರೆ ರಾಜನೀತಿಯ ಪ್ರಜಾಸತ್ತೆಯನ್ನು ಸಾಮಾಜಿಕ ಪ್ರಜಾಸತ್ತೆಯಾಗಿ ಬದಲಿಸದ ಹೊರತು ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ.

ಕೆಲವರು ಬಂದು ಹೇಳಿದ್ರು, ‘ನೀನು ಯಾವಾಗ್ಲೂ ಬಹುಜನರದ್ದೇ ಮಾತಾಡ್ತೀಯ’ ಅಂತ. ನಾನಂದೆ, ‘ಅದು ಹಾಗಲ್ಲ… ನಾನಾಡುವ ಮಾತುಗಳು ಸರ್ವಜನರದ್ದು’.
‘ಹೇಗೆ?’ ನಾನಂದೆ, ‘ಹೊಟ್ಟೆ ಎಲ್ಲರಿಗೂ ಇದೆ. ಜನರಲ್ ಇರಲಿ, ಒಬಿಸಿ… ಹೊಟ್ಟೆಯ ಪ್ರಶ್ನೆ ಎಲ್ಲರದೂ ಆಗಿದೆ. ಅಣ್ಣಾ, ನಾವು ಹಸಿವನ್ನ ಹೋಗಲಾಡಿಸಲು ಸಂಘರ್ಷ ನಡೆಸ್ತಿದ್ದೀವಿ. ಆತ್ಮಸಮ್ಮಾನಕ್ಕಾಗಿ ಹೋರಾಡ್ತಾ ಇದ್ದೀವಿ. ಬಡವರಿಗೆಲ್ಲಿಯ ಗುರುತು, ಜಾತಿ? ಇಷ್ಟಕ್ಕೂ ನೀವು ಜಾತಿಭೇದ ಮಾಡಿ ನೋಡಲು ಬಯಸೋದೇ ಆದರೆ, ರೈಲ್ವೇಯ ಜನರಲ್ ಬೋಗಿಗೆ ಹೋಗಿ ನೋಡಿ. ಅಲ್ಲಿ ಎಲ್ಲ ಜಾತಿಯ ಬಡವರೂ ತುಂಬಿಕೊಂಡಿರ್ತಾರೆ. ಅಲ್ಲಿ ದಲಿತರು, ತಳಸಮುದಾಯಗಳು, ಅಲ್ಪಸಂಖ್ಯಾತರು, ಮಹಿಳೆಯರು ಎಲ್ಲರೂ ಇರ್ತಾರೆ. ಇದು ನಮ್ಮ ಸಮಾಜದ ಅಸಲು ಮುಖ. ನಮ್ಮನ್ನು ಒಡೆಯಲು ನೋಡಬೇಡಿರಣ್ಣ…’
ನಮ್ಮನ್ನು ಒಡೆಯಬೇಡಿ, ಗೊಂದಲಗೊಳಿಸಬೇಡಿ. ನಮ್ಮ ದಾರಿ ಸ್ಪಷ್ಟವಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಯಾವ ಮಾತನ್ನು ಹೇಳಲಾಗಿದೆಯೋ ಆ ಒಂದೊಂದೂ ಮಾತನ್ನು ಸಾಕಾರಗೊಳಿಸ್ತೀವಿ. ಸಮಾಜದಲ್ಲಿ ಜಾರಿಗೊಳಿಸ್ತೀವಿ. ನಮ್ಮ ತಲೆಮಾರು ಇದನ್ನು ಸಾಧಿಸಬಲ್ಲದೋ ಇಲ್ಲವೋ ಗೊತ್ತಿಲ್ಲ. ಆದರೆ ನಾವೇನು ಹೋರಾಟವನ್ನ ಹುಟ್ಟುಹಾಕಿದ್ದೀವೋ ಅದು ಇಲ್ಲಿಯೇ ನಿಲ್ಲುವಂಥದ್ದಲ್ಲ. ಅದು ಬಹಳ ದೂರದವರಗೆ ಸಾಗಲಿದೆ. ನಮ್ಮ ಮಾತಿನ ಸ್ವಾತಂತ್ರ್ಯವನ್ನ ಉಳಿಸಿಕೊಳ್ಳುವ ಮೂಲಕ ಜನರ ಬದುಕಿನ ಸ್ವಾತಂತ್ರ್ಯವನ್ನ ಉಳಿಸಿಕೊಡ್ತೀವಿ. ಸಾವು ಸ್ವಾತಂತ್ರ್ಯವನ್ನ ಕೇಳ್ತಿದ್ದೀವಿ, ಪಡೆದೇ ತೀರುತ್ತೀವಿ.
ಸ್ವತಃ ಅಂಬೇಡ್ಕರರೇ ಹೇಳಿದ್ದಾರೆ, ನಮಗೆ ಯಾವುದೋ ದೇಶದಿಂದಷ್ಟೆ ಸ್ವಾತಂತ್ರ್ಯ ಬೇಕಿರುವುದಲ್ಲ, ದೇಶದೊಳಗೂ ಸ್ವಾತಂತ್ರ್ಯ ಬೇಕಿದೆ ಅಂತ. ಬೇಕಿದ್ದರೆ ಪುಟ ತಿರುವಿ ನೋಡಿ.
ಬಾಬಾ ಸಾಹೇಬರಂಥವರು ಹೋರಾಟ ನಡೆಸಿ ಈ ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಅವರ ಅನುಯಾಯಿಗಳಾದ ನಾವು ದೇಶದೊಳಗಿನ ಹಸಿವು ಬಡತನ ಅತ್ಯಾಚಾರಗಳ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಬೇಕಿದೆ. ಸಮಸಮಾಜದ ನಿರ್ಮಾಣ ಮಾಡಿ ಅವರ ಕನಸುಗಳನ್ನು ಸಾಕಾರಗೊಳಿಸಬೇಕಿದೆ. ನಾವೆಲ್ಲರೂ ಸೇರಿ ರೋಹಿತ್ ಆಕ್ಟ್ ಜಾರಿಗೊಳಿಸುವಂತೆ ಒತ್ತಾಯ ಹೇರಬೇಕಿದೆ. ಪ್ರತಿಯೊಬ್ಬರಿಗೂ ಅವರವರ ಹಕ್ಕನ್ನು ದಕ್ಕಿಸಿಕೊಡುವ ಹೋರಾಟ ನಡೆಸಬೇಕಿದೆ.

ನೀವು ಹಿರಿಯರು, ಲೇಖಕರು ನಮ್ಮ ಗೊಂದಲಗಳನ್ನು ನಿವಾರಿಸಿ, ನಮ್ಮೊಂದಿಗಿರಿ. ನೀವೂ ಒಗ್ಗೂಡಿ ಹೋರಾಟದಲ್ಲಿ ಜೊತೆಯಾಗಿರೆಂದು ಕೇಳಿಕೊಳ್ತೀನಿ.
.
#Kanhayya_Pratirodh2

Please follow and like us:
error