ಏ. ೧೯ ರಂದು ಮಹಾವೀರರ ಜಯಂತಿ : ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ

mahaveer-jayanti
ಕೊಪ್ಪಳ ಏ. : ಅಹಿಂಸಾ ತತ್ವಗಳ ಪ್ರತಿಪಾದಕ ಮಹಾವೀರರ ಜಯಂತಿಯನ್ನು ಸರ್ಕಾರಿ ಆದೇಶದನ್ವಯ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಏ. ೧೯ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಮಹಾವೀರ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾವೀರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ, ಇದೀಗ ಮಹಾವೀರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಇದೇ ಏ. ೧೯ ರಂದು ಆಚರಿಸಲಾಗುವುದು. ಮಹಾವೀರರು ಅಹಿಂಸಾ ಪ್ರತಿಪಾದಕರಾಗಿದ್ದು, ಅವರ ಅಹಿಂಸಾ ತತ್ವ, ಸಂದೇಶಗಳ ಕುರಿತು ಅರಿವು ಮೂಡಿಸುವ ರೀತಿಯಲ್ಲಿ ಆಚರಿಸಲು ಆದ್ಯತೆ ನೀಡಲಾಗುವುದು. ಕಾರ್ಯಕ್ರಮದ ಅಂಗವಾಗಿ ಮಹಾವೀರರ ಭಾವಚಿತ್ರದ ಮೆರವಣಿಗೆ ಅಂದು ಬೆಳಿಗ್ಗೆ ೭-೪೫ ಗಂಟೆಗೆ ನಗರದ ಅಶೋಕ ವೃತ್ತದ ಬಳಿಯಿಂದ ಪ್ರಾರಂಭಿಸಲಾಗುವುದು. ಮೆರವಣಿಗೆಯು ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ಗೋಶಾಲೆ ಬಳಿಯ ಮಹಾವೀರ ಜೈನಭವನದವರೆಗೆ ನೆರವೇರಲಿದೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳ ಬದಲಿಗೆ ಅಹಿಂಸಾ ತತ್ವಗಳನ್ನು ಬಿಂಬಿಸುವ ಸಂದೇಶಗಳು ಹಾಗೂ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಬೆಳಿಗ್ಗೆ ೧೦ ಗಂಟೆಗೆ ಗೋಶಾಲೆ ಪಕ್ಕದಲ್ಲಿನ ಮಹಾವೀರ ಜೈನಭವನದಲ್ಲಿ ವೇದಿಕೆ ಸಮಾರಂಭ ಜರುಗಲಿದೆ. ಮಹಾವೀರರ ತತ್ವ ಸಂದೇಶಗಳ ಬಗ್ಗೆ ಜೈನಮುನಿಗಳು ವಿಶೇಷ ಉಪನ್ಯಾಸ ನೀಡುವರು. ಮಹಾವೀರ ಜಯಂತಿ ದಿನವಾದ ಏ. ೧೯ ರಂದು ಎಲ್ಲ ವಧಾಗಾರಗಳು ಕಾರ್ಯವನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಅವರು ತಿಳಿಸಿದರು.
ಮೆರವಣಿಗೆ ಸಾಗಿ ಬರುವ ರಸ್ತೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಯಿತು. ಅಲ್ಲದೆ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರಿಗೆ ಮಾಲಾರ್ಪಣೆಯ ಬದಲಿಗೆ ಮಹಾವೀರರ ಸಂದೇಶವನ್ನು ಬಿಂಬಿಸುವ ಪುಸ್ತಕಗಳನ್ನು ವಿತರಿಸಲು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಅವರು, ಎಲ್ಲ ಜೈನ ಸಮುದಾಯದವರು ಮಹಾವೀರ ಜಯಂತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಲಾಗುವುದು. ಕಾರ್ಯಕ್ರಮಕ್ಕೆ ಎಲ್ಲ ಸಮಾಜದವರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ನೇಮಿರಾಜ್, ಪದ್ಮರಾಜ್, ಸುರೇಂದ್ರಪಾಟೀಲ್, ಗವಿಸಿದ್ದಪ್ಪ, ಶಿವಾನಂದ ಹೊದ್ಲೂರ್ ಮುಂತಾದವರು ಭಾಗವಹಿಸಿದ್ದರು.

Please follow and like us:
error