ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಚಿತ್ರ : ಕೊಪ್ಪಳ ಜಿಲ್ಲೆಯಲ್ಲಿ ವಿಶಿಷ್ಟ ಪ್ರಯೋಗ

ಕೊಪ್ಪಳ-ಶಾಲಾ-ಮಕ್ಕಳುಚಿತ್ರದ ಮೂಲಕ ಯಾವುದೇ ವಿಷಯವನ್ನು ವಿವರಿಸಿದರೆ, ಅದು ಬಲು ಬೇಗ ತಲೆ ಒಳಗೆ ಹೋಗುತ್ತದೆ, ಎಂದು ತಜ್ಞರು ಹೇಳುವುದನ್ನು ನಾವು ಅವರಿವರ ಬಾಯಲ್ಲಿ ಕೇಳುತ್ತಿರುತ್ತೇವೆ. ಇದೀಗ, ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸಲು ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದ್ದು, ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದಿನಕ್ಕೊಂದು ಚಿತ್ರವನ್ನು ಕಪ್ಪುಹಲಗೆಯ ಮೇಲೆ ಬಿಡಿಸಿ, ಅದರ ವಿವರಣೆಯನ್ನು ಅವರೇ ನೀಡುವ ಚಟುವಟಿಕೆಯನ್ನು ಪ್ರಾರಂಭಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ದಿನಕ್ಕೊಂದು ವಿಶೇಷ ಚಟುವಟಿಕೆಯನ್ನು, ಆಯಾ ವಿದ್ಯಾರ್ಥಿಗಳಿಂದಲೇ ರಚಿಸಿ, ಅಭ್ಯಾಸ ಕರಗತ ಮಾಡಿಸುವ ಯೋಜನೆ ಇದಾಗಿದೆ. ಅಲ್ಲದೆ ಮಕ್ಕಳ ಕಲಿಕಾ ದೃಷ್ಟಿಯಿಂದಲೂ ಇದು ಅತ್ಯುಪಯುಕ್ತವಾಗಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನೂ ವೃದ್ಧಿಸಲು ಇದು ಸಹಕಾರಿಯಾಗಲಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕ್ರಮಗಳ ಅಂಗವಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ಹಲವು ವೈವಿಧ್ಯಮಯ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಹಮ್ಮಿಕೊಂಡು ಅನುಷ್ಠಾನಗೊಳಿಸುವ ದಿಸೆಯಲ್ಲಿ ಈಗಾಗಲೆ ಅನೇಕ ಪ್ರೌಢಶಾಲೆಗಳು ಕಾರ್ಯ ಪ್ರವೃತ್ತವಾಗಿವೆ. ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಶಿಕ್ಷಣದ ವಿಷಯಗಳಾಗಿರುವ ಭೂಗೋಳ ವಿಷಯಗಳಲ್ಲಿ ಭೂಪಟ ಬಿಡಿಸುವುದು, ನಕ್ಷೆ ಬಿಡಿಸಿ, ಸ್ಥಳ ಗುರುತು ಹಾಕುವುದಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಇದ್ದೇ ಇರುತ್ತವೆ. ಅದೇ ರೀತಿ ವಿಜ್ಞಾನ ವಿಷಯಗಳಲ್ಲಿಯೂ ಸಹ ಸಸ್ಯ ಸಂರಚನೆಗಳು, ದೇಹದ ಅಂಗಾಂಗ ರಚನೆಗಳು, ಹಲವು ಪ್ರಯೋಗಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸಹ ಇದ್ದೇ ಇರುತ್ತವೆ. ಅಲ್ಲದೆ ಇಂತಹ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಕ್ಕೊಂದು ವಿಜ್ಞಾನದ ಪ್ರಯೋಗದ ಚಿತ್ರ ಬಿಡಿಸುವುದು, ಗಣಿತದಲ್ಲಿ ಕ್ಲಿಷ್ಟಕರ ಸಮಸ್ಯೆಗಳನ್ನು ಬಿಡಿಸುವುದು, ಸಮಾಜ ವಿಜ್ಞಾನದಲ್ಲಿ ನಕ್ಷೆ ಬಿಡಿಸಿ ಸ್ಥಳ ಗುರುತಿಸುವುದು, ಇತ್ಯಾದಿ ಅಂಶಗಳನ್ನು ವಿದ್ಯಾರ್ಥಿಗಳಿಂದಲೇ ಶಾಲೆಯಲ್ಲಿ ಮಾಡಿಸುವ ಚಟುವಟಿಕೆಗಳನ್ನು ಈಗಾಗಲೆ ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇವಿಷ್ಟೇ ಅಲ್ಲದೆ, ಭಾಷಾ ವಿಷಯಗಳಲ್ಲಿ ವ್ಯಾಕರಣಾಂಶಗಳು, ಶುದ್ಧ ಬರಹ ಮತ್ತು ಸ್ಪಷ್ಟ ಓದು ಕುರಿತಂತೆ ದಿನಕ್ಕೊಂದು ಚಟುವಟಿಕೆಯನ್ನು ವಿದ್ಯಾರ್ಥಿಗಳ ಮೂಲಕ ಆಯೋಜಿಸುವುದು, ಗಣಿತ ವಿಷಯದಲ್ಲಿ ಕ್ಲಿಷ್ಟಕರ ಸಮಸ್ಯೆಗಳನ್ನು ಕಾರ್ಡ್ ಮೂಲಕ, ಡ್ರಿಲ್ ವರ್ಕ್‌ಗಳಂತಹ ಚಟುವಟಿಕೆಗಳ ಮೂಲಕ ಬಿಡಿಸುವಂತೆ ರೂಢಿಸುವುದು, ವಿಜ್ಞಾನ ವಿಷಯದಲ್ಲಿ ಕಡ್ಡಾಯವಾಗಿ ದಿನಕ್ಕೊಂದು ಚಿತ್ರ, ಪ್ರಯೋಗ, ಸಮೀಕರಣಗಲು, ರಚನಾ ಸೂತ್ರಗಳು, ಇತ್ಯಾದಿ ಸಂಗತಿಗಳನ್ನು ರೂಢಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ವಿಷಯದಲ್ಲಿಯೂ ಕೂಡ ದಿನಕ್ಕೊಂದರಂತೆ ನಾವೀನ್ಯತೆಯುಳ್ಳ ವಿವಿಧ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಲು ಈಗಾಗಲೆ ಎಲ್ಲ ಪ್ರೌಢಶಾಲೆಗಳಿಗೆ ಸೂಚನೆ ನೀಡಲಾಗಿದ್ದು, ಈ ಪೈಕಿ ಕೆಲವು ಶಾಲೆಗಳು ಇದನ್ನು ತುಂಬಾ ಅಚ್ಚುಕಟ್ಟಾಗಿ ಪಾಲಿಸಿ, ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ವ್ಯಾಟ್ಸಪ್ ಗ್ರೂಪ್‌ನ ಸಂದೇಶಲ್ಲಿ ಫೋಟೋ ಸಹಿತ ವರದಿ ನೀಡುತ್ತಿದ್ದು, ಶಿಕ್ಷಕರ ಈ ಪೂರಕ ಚಟುವಟಿಕೆಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿವಿಧ ಶಾಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಇದರ ಅನುಷ್ಠಾನದ ಬಗ್ಗೆಯೂ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಾರೆ, ಎಲ್ಲ ಪ್ರೌಢಶಾಲೆಗಳೂ ಈ ವಿಧಾನವನ್ನು ಅನುಸರಿಸಬೇಕು. ಅನುಷ್ಠಾನಗೊಳಿಸಿದ ಬಗೆಗಿನ ವರದಿಯನ್ನು ಫೋಟೋ ಸಹಿತ, ನಿಯಮಿತವಾಗಿ ಸಲ್ಲಿಸಬೇಕು. ಜಿಲ್ಲೆಯಲ್ಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೊಳಿಸಲು ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು.

Please follow and like us:
error