ಉದ್ಯೋಗಖಾತ್ರಿ ಯೋಜನೆ : ಕವಲೂರು ಗ್ರಾ.ಪಂ. ಸಾಧನೆಗೆ ಶ್ಲಾಘನೆ

nreg_work_koppal: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಿದ ಕೊಪ್ಪಳ ತಾಲೂಕು ಕವಲೂರು ಗ್ರಾಮ ಪಂಚಾಯತಿಯ ಸಾಧನೆಗೆ ರಾಜ್ಯ ಮಟ್ಟದ ಗುಣ ನಿಯಂತ್ರಣ ಅಧಿಕಾರಿ ಸುಲ್ತಾನ್ ಶರೀಫ್ ಅವರು ಶ್ಲಾಘಿಸಿದರು.
ಉದ್ಯೋಗಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯತಿಗಳ ದಾಖಲಾತಿ ಮತ್ತು ಕಾಮಗಾರಿಗಳನ್ನು ಪರಿಶೀಲಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ರಾಜ್ಯ ಮಟ್ಟದ ಗುಣ ನಿಯಂತ್ರಣ ಪರಿವೀಕ್ಷಕರನ್ನು ನಿಯೋಜಿಸಿದೆ. ಕೊಪ್ಪಳ ತಾಲೂಕು ಕವಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ೪೭೯೭೭ ಮಾನವ ದಿನಗಳನ್ನು ಸೃಜಿಸಿದ್ದು, ಪ್ರಸಕ್ತ ಸಾಲಿನಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ೯೦. ೪೫ ಲಕ್ಷ ರೂ. ವೆಚ್ಚವಾಗಿದ್ದು, ೭೫ ಕುಟುಂಬಗಳಿಗೆ ೧೦೦ ಮಾನವ ದಿನಗಳ ಕೂಲಿ ಕೆಲಸ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕವಲೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ರಾಜ್ಯ ಮಟ್ಟದ ಗುಣ ನಿಯಂತ್ರಣ ಅಧಿಕಾರಿ ಸುಲ್ತಾನ್ ಶರೀಫ್ ಅವರು, ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ನಮ್ಮ ಹೊಲ ನಮ್ಮ ದಾರಿ, ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು. ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೂಲಿಕಾರರೊಂದಿಗೆ ಮಾತನಾಡಿ, ಸಕಾಲದಲ್ಲಿ ಕೂಲಿ ಪಾವತಿಯಾಗುತ್ತಿರುವ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಅಲ್ಲದೆ ಕಾಮಗಾರಿಯ ಅಳತೆ ಕುರಿತಂತೆ ಪುಸ್ತಕದಲ್ಲಿ ದಾಖಲಿಸಿರುವ ಅಂಕಿ-ಅಂಶಗಳ ನಿಖರತೆಯನ್ನು ಪರಿಶೀಲಿಸಿದರು. ಕೂಲಿಕಾರರಿಗೆ ಹೆಚ್ಚು, ಹೆಚ್ಚು ಉದ್ಯೋಗ ನೀಡುತ್ತಿರುವ ಕವಲೂರು ಗ್ರಾಮ ಪಂಚಾಯತಿಯ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಕೂಲಿಕಾರರು, ಗುಳೇ ಹೋಗುವ ಬದಲು, ಸ್ಥಳೀಯವಾಗಿ ದೊರೆಯುವ ಕೂಲಿ ಕೆಲಸವನ್ನು ಪಡೆದು, ಆರ್ಥಿಕವಾಗಿ ಸಬಲರಾಗುವಂತೆ ಕೂಲಿಕಾರರಿಗೆ ಮನವಿ ಮಾಡಿದರು.
ಕವಲೂರು ಗ್ರಾಮ ಪಂಚಾಯತಿ ಪಿಡಿಓ ಬಸವರಾಜ ಕಿಳ್ಳಿಕ್ಯಾತರ, ಕೊಪ್ಪಳ ತಾಲೂಕಾ ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂತೋಷ್ ನಂದಾಪುರ, ತಾಂತ್ರಿಕ ಸಹಾಯಕ ಗುರುರಾಜ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply