ಇಂಜಿನಿಯರಿಂಗ್ ಕಾಲೇಜಿಗೆ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ- ಬಸವರಾಜ ರಾಯರಡ್ಡಿ

basavaraj-rayareddy-minister-yelburga ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ ನಲ್ಲಿ ಹೊಸದಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕಾಗಿ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಉನ್ನತ ಶಿಕ್ಷಣ ಸಚಿವರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡ ಮೊದಲ ಅಭಿವೃದ್ಧಿ ಕಾರ್ಯ ಇದಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಭಾನುವಾರದಂದು ಯಲಬುರ್ಗಾದ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

basavaraj-rayareddy-minister-yelburga-1 basavaraj-rayareddy-minister-yelburga-2
ಉನ್ನತ ಶಿಕ್ಷಣ ಸಚಿವರಾಗಿ ತಾವು ಅಧಿಕಾರ ಸ್ವೀಕರಿಸಿದ ನಂತರ, ಕೊಪ್ಪಳ ಜಿಲ್ಲೆಯದೇ ಆಗಿರುವ ತಳಕಲ್ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡುವ ಕಡತಕ್ಕೆ ಸಹಿ ಮಾಡಿದ್ದೇನೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಜೂ. 30 ರಂದು ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಸಮಗ್ರ ವಿಷಯಗಳ ಕುರಿತು ಅಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಅದೇ ದಿನದಂದು ಇತರೆ ತಾಲೂಕಿನಲ್ಲಿಯೂ ಸಭೆ ಕೈಗೊಂಡು ಪ್ರಾಥಮಿಕ ಹಂತದ ಮಾಹಿತಿ ಪಡೆಯಲಾಗುವುದು. ನಾನು ಸಮಾಜ ಸೇವಕ, ಜನತೆಯ ಸೇವೆಯನ್ನೇ ದೇವರ ಸೇವೆ ಎಂಬುದಾಗಿ ಭಾವಿಸಿರುವವನು ನಾನು. ಶಾಸಕನಾಗಿಯೂ ಅಭಿವೃದ್ಧಿಪರ ಕಾರ್ಯ ನಿರ್ವಹಿಸಿದ್ದು, ಸಚಿವರಾಗಿಯೂ ತಾವು ಅಭಿವೃದ್ಧಿ ಕಾರ್ಯಗಳತ್ತ ಇನ್ನೂ ಹೆಚ್ಚಿನ ಗಮನ ಹರಿಸುತ್ತೇನೆ. ಸಚಿವ ಸ್ಥಾನ ಪಡೆದ ನಂತರ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಚಿವ ಸ್ಥಾನವನ್ನು, ಸಾರ್ವಜನಿಕ ಸೇವೆಗಾಗಿ ದೊರೆತ ಉತ್ತಮ ಅವಕಾಶ ಎಂಬುದಾಗಿ ಭಾವಿಸುತ್ತೇನೆ. ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು, ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಕೊಪ್ಪಳದಲ್ಲಿ ಎರಡು ವಾರದೊಳಗೆ ಪಿ.ಜಿ. ಸೆಂಟರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಗಂಗಾವತಿಯಲ್ಲಿಯೂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

Leave a Reply