ಅಹಿಂಸೆಯೇ ಪರಮ ಧರ್ಮ- ಮಹಾವೀರರ ಸರ್ವಕಾಲಿಕ ಸತ್ಯ ಸಂದೇಶ – ಬಸವರಾಜ ರಾಯರೆಡ್ಡಿ.

ಕೊಪ್ಪಳ, ಏ.೧೯ ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸರ್ವಕಾಲಿಕ ಸತ್ಯವಾದ ದಿವ್ಯ ಸಂದೇಶವಾಗಿದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ DSC_0132ಅವರು ಹೇಳಿದರು. ನಗರದ ಮಹಾವೀರ ಜೈನ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಂಗಳವಾರದಂದು ಆಯೋಜಿಸಲಾಗಿದ್ದ ಭಗವಾನ್ ಮಹಾವೀರರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸರ್ವಕಾಲಿಕ ಸತ್ಯವಾದ ದಿವ್ಯ ಸಂದೇಶವಾಗಿದೆ. ಇದರಲ್ಲಿ ಜಗತ್ತಿನ ಎಲ್ಲ ಜೀವ ರಾಶಿಗಳಿಗೆ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಲಾಗಿದೆ. ಅಹಿಂಸಾ ತತ್ವವು ಮಾನವ ಸಮಾಜಕ್ಕೆ ನೀಡಿದ ಅನನ್ಯ ಸಂದೇಶವಾಗಿದೆ. ಹಿಂದೂ, ಜೈನ್, ಬೌದ್ಧ, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಮಾನವನ ಒಳಿತನ್ನೇ ಬಯಸಿ, ವಿಚಾರಗಳನ್ನು ಹೊಂದಿವೆ. ಆದರೆ ಅವುಗಳ ಅರ್ಥೈಸಿಕೊಳ್ಳುವಿಕೆಯ ವೈರುಧ್ಯಗಳಿಂದಾಗಿ ಜಗತ್ತಿನಲ್ಲಿ ಹಿಂಸೆ ನಡೆಯುತ್ತಿದೆ. ಧರ್ಮಗಳಲ್ಲಿನ ಮೌಢ್ಯತೆಗಳು, ಅಜ್ಞಾನ, ಮೂಢ ನಂಬಿಕೆಗಳು, ಪಟ್ಟಭದ್ರ ಹಿತಾಸಕ್ತಿಗಳಿಂದ ನಲುಗಿದ್ದ ಸಮಾಜಕ್ಕೆ ಮಹಾವೀರರು, ಅಹಿಂಸೆಯ ತತ್ವಗಳನ್ನು ಬೋಧಿಸಿ, ಸುಧಾರಣೆಗೆ ಶ್ರಮಿಸಿದರು. ೨೪ನೇ ತೀರ್ಥಂಕರರು ಹಾಗೂ ಕೊನೆಯ ತೀರ್ಥಂಕರರು ಆಗಿದ್ದ ಮಹಾವೀರರು, ವೈಶಾಲಿ ರಾಜಮನೆತನದಲ್ಲಿ ಹುಟ್ಟಿದರೂ, ಮನುಷ್ಯ-ಮನುಷ್ಯನಂತೆ ಬದುಕಲು, ವ್ಯಸನ ಮುಕ್ತ ಜೀವನ ನಡೆಸಲು, ಸಕಲ ಸುಖ ವೈಭೋಗಗಳನ್ನು ತ್ಯಜಿಸಿ ಅವರು ಸನ್ಯಾಸಿಯಾದರು. ತ್ಯಾಗಮೂರ್ತಿಗಳಾಗಿದ್ದ ಮಹಾವೀರರು, ಅಹಿಂಸಾ ತತ್ವಗಳ ಬಗ್ಗೆ ದಾಖಲೀಕರಣ ಮಾಡಿದ್ದರಿಂದ, ಅವರ ಸಂದೇಶಗಳನ್ನು ಇತರರು ಅರಿತುಕೊಳ್ಳಲು ಸಾಧ್ಯವಾಗಿದೆ. ಜೈನ ಧರ್ಮಕ್ಕೆ ೮ ರಿಂದ ೧೦ ಸಾವಿರ ವರ್ಷಗಳ ಇತಿಹಾಸವಿದೆ. ಕೊಪ್ಪಳ ಜಿಲ್ಲೆಯೂ ಕೂಡ ಬೌದ್ಧ ಧರ್ಮದ ವಿಕಾಸಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಜೈನ ಕಾಶಿ ಎಂದೇ ಖ್ಯಾತವಾಗಿರುವ ಈ ಜಿಲ್ಲೆಯಲ್ಲಿ ಭೌದ್ಧ ಧರ್ಮ ಸ್ವೀಕರಿಸಿದ್ದ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು ಇಲ್ಲಿ ಕಂಡುಬಂದಿರುವುದು, ಇದಕ್ಕೆ ಸಾಕ್ಷಿಯಾಗಿದೆ. ಸಮಾಜ ಸುಧಾರಣೆಗಾಗಿ, ಜಗತ್ತಿನ ಒಳಿತಿಗಾಗಿ ಶ್ರಮಿಸಿದಂತಹ ಮಹನೀಯರು, ಸಂತರನ್ನು ಪಟ್ಟಭದ್ರ ಹಿತಾಸಕ್ತಿಗಾಗಿ ಒಂದೇ ಜಾತಿಗೆ ಸೀಮಿತಗೊಳಿಸುವಂತಹ ವಾತಾವರಣ ಈ ನಾಡಿನಲ್ಲಿ ಸೃಷ್ಟಿಯಾಗುತ್ತಿರುವುದು ಸರಿಯಲ್ಲ. ಜೈನಧರ್ಮದ ತತ್ವ, ಸಂದೇಶಗಳು ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪೂರಕವಾಗಿವೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಅಹಿಂಸಾ ತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ನಾವು ಜೈನ ಸಮುದಾಯದಲ್ಲಿ ಹೆಚ್ಚು ಕಾಣಲು ಸಾಧ್ಯ. ಕರ್ನಾಟಕ ರಾಜ್ಯ, ಇಡೀ ದೇಶದಲ್ಲಿಯೇ ಭಗವಾನ್ ಮಹಾವೀರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವ ಮೊದಲ ರಾಜ್ಯವಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಹಾವೀರರ ಅಹಿಂಸಾ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ. ಕೊಪ್ಪಳ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮಹಾವೀರ ಜೈನ ಭವನಕ್ಕೆ ಈಗಾಗಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೦ ಲಕ್ಷ ರೂ. ಅನುದಾನವನ್ನು ನೀಡಿದ್ದು, ಇನ್ನೂ ೧೦ ಲಕ್ಷ ರೂ. ಗಳ ಅನುದಾನವನ್ನು ಒದಗಿಸಿ, ಉತ್ತಮ ಭವನ ನಿರ್ಮಿಸಲು ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜೈನ ಮುನಿಗಳಾದ ನರೇಶ್ ಮುನಿಜಿ ಮತ್ತು ಶಾಲಿಭದ್ರಜೀ ಮಹಾರಾಜ ಅವರು ಸಾನಿಧ್ಯ ವಹಿಸಿ, ಮಹಾವೀರರ ಸಂದೇಶಗಳ ಕುರಿತು ಪ್ರವಚನ ನೀಡಿದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಗಣ್ಯರಾದ ರಾಮಲಾಲ್ ಜಿ ಬಾಗಡೇಕರ್, ಅಭಯಕುಮಾರ್ ಮೆಹ್ತಾ, ದಿಸೆಲಾಲ್ ಮೆಹ್ತಾ, ಸುರೇಂದ್ರ ಜೈನ್ ಪಾಟೀಲ್, ಬಸವರಾಜ ಹಿಟ್ನಾಳ್ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದ ಬಳಿಯಿಂದ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು. ಜವಾಹರ ರಸ್ತೆ, ಗಡಿಯಾರ ಕಂಭ ಮೂಲಕ ಮಹಾವೀರ ಜೈನ ಭವದವರೆಗೆ ಮೆರವಣಿಗೆ ನೆರವೇರಿತು. ಮೆರವಣಿಗೆಯಲ್ಲಿ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Please follow and like us:
error