You are here
Home > Koppal News-1 > ಅಪಘಾತ ಸಂದರ್ಭದಲ್ಲಿ ಪ್ರತಿ ನಿಮಿಷವೂ ಅಮೂಲ್ಯ : ಜೀವ ಮುಖ್ಯವೇ ಹೊರತು ವಿಡಿಯೋ ಅಲ್ಲ

ಅಪಘಾತ ಸಂದರ್ಭದಲ್ಲಿ ಪ್ರತಿ ನಿಮಿಷವೂ ಅಮೂಲ್ಯ : ಜೀವ ಮುಖ್ಯವೇ ಹೊರತು ವಿಡಿಯೋ ಅಲ್ಲ

karnataka-koppal-accident-boy-water_harish_scheeme
ಕೊಪ್ಪಳ ಫೆ. ೦೨ : ಅಪಘಾತಕ್ಕೆ ತುತ್ತಾದ ವ್ಯಕ್ತಿಯನ್ನು ಆಘಾತದಿಂದ ಹೊರತರಲು ಹಾಗೂ ಪ್ರಾಣ ರಕ್ಷಣೆಗಾಗಿ ಅಪಘಾತದ ನಂತರದ ಸೂಕ್ಷ್ಮ ಅವಧಿಯಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಆ ವ್ಯಕ್ತಿಯ ಜೀವ ಉಳಿಸಲು ಮುಂದಾಗಬೇಕು ಎನ್ನುವುದು ಸರ್ಕಾರದ ಕಳಕಳಿಯ ಮನವಿಯಾಗಿದೆ.
ಕೆಲ ವರ್ಷದ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತ ಸಂದರ್ಭದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ, ಹರೀಶ್ ಎಂಬ ಯುವಕ ಸಾವನ್ನಪ್ಪಿದ್ದ. ಯಾವುದೇ ವ್ಯಕ್ತಿ ಅಪಘಾತ ಸಂದರ್ಭದಲ್ಲಿ ತುರ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬೇಕು, ಅಪಘಾತಕ್ಕೀಡಾದ ವ್ಯಕ್ತಿಗೆ ಸರ್ಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎನ್ನುವ ಆಶಯದೊಂದಿಗೆ ಸರ್ಕಾರ ಮುಖ್ಯಮಂತ್ರಿ ಸಾಂತ್ವನ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದೆ. ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಅಥವಾ ಉಳಿಸಲು ಮೊದಲ ೪೮ ಗಂಟೆಗಳ ಅವಧಿಗೆ ೨೫ ಸಾವಿರ ರೂ. ಗಳವರೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಅಪಘಾತದ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿದ್ದು, ಸಾರ್ವಜನಿಕರು ಇಂತಹ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವುದು. ಆಂಬುಲೆನ್ಸ್ ಸೇವೆ ಬಳಸಲು ನೆರವಾಗುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ.
ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಜೀವ ರಕ್ಷಕ ಪ್ರಶಸ್ತಿಯ ಗೌರವ : ಮಾನವೀಯ ಹಾಗೂ ನಿಸ್ವಾರ್ಥ ಸೇವೆಯೊಂದಿಗೆ ಅಪಘಾತದ ಗಾಯಾಳುಗಳ ಅಮೂಲ್ಯ ಜೀವವನ್ನು ಉಳಿಸಿದ ಮಹನೀಯರಿಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಪ್ರಕರಣ-೦೧ : ಕಳೆದ ೨೦೧೬ ರ ನವೆಂಬರ್ ೨೭ ರಂದು ಗಂಗಾವತಿ ತಾಲೂಕು ಹೇಮಗುಡ್ಡ ಬಳಿ ಬೈಕ್ ಮತ್ತು ಲಾರಿ ಡಿಕ್ಕಿ ಸಂಭವಿಸಿ, ಇಬ್ಬರು ವ್ಯಕ್ತಿಗಳು ಸಾವು ನೋವಿನ ಮಧ್ಯೆ ಹೋರಾಡುತ್ತಿರುವಾಗ ನೆರವಿಗೆ ಬಂದವರು ಅದೇ ತಾಲೂಕು ಸಾವಳ ಹರವಿ ಕ್ಯಾಂಪಿನ ಅಮರೇಶ್ ವಾಲ್ಮೀಕಿ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಬಿದ್ದು, ತೀವ್ರ ಗಾಯ ಸಂಭವಿಸಿತ್ತು. ಇಂತಹ ಸಂದರ್ಭದಲ್ಲಿ ಅಮರೇಶ್ ವಾಲ್ಮೀಕಿ ಅವರು, ಕೂಡಲೆ ೧೦೮ ಟೋಲ್ ಫ್ರೀ ಸಂಖ್ಯೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಆಂಬ್ಯುಲೆನ್ಸ್ ಸ್ಥಳಕ್ಕೆ ಬರುವವರೆಗೂ ಗಾಯಾಳುಗಳಿಗೆ ನೈತಿಕ ಸ್ಥೈರ್ಯ ತುಂಬಿದ್ದಲ್ಲದೆ, ಗಂಗಾವತಿಯ ತಾಲೂಕು ಆಸ್ಪತ್ರೆಗೆ ಸಾಗಿಸುವವರೆಗೂ ಜೊತೆಯಲ್ಲಿದ್ದರು. ನಂತರ ಗಾಯಾಳುಗಳಿಗೆ ಇಲ್ಲಿ ಚಿಕಿತ್ಸೆ ನೀಡಿ, ಇನ್ನೂ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲಾಯಿತು. ಸಕಾಲದಲ್ಲಿ ಚಿಕಿತ್ಸೆ ದೊರೆತ ಪರಿಣಾಮವಾಗಿ ಅಪಘಾತಕ್ಕೀಡಾಗಿ ಸಾವಿನ ದವಡೆಯಲ್ಲಿದ್ದ ಇಬ್ಬರು ವ್ಯಕ್ತಿಗಳ ಜೀವ ಉಳಿಯಿತು. ಮಾನವೀಯತೆಯಿಂದ ಇಬ್ಬರು ವ್ಯಕ್ತಿಗಳ ಜೀವ ಉಳಿಸಿದ್ದಕ್ಕಾಗಿ ಸರ್ಕಾರ ಕಳೆದ ಜ. ೨೬ ರಂದು ಕೊಪ್ಪಳದಲ್ಲಿ ಜರುಗಿದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಮರೇಶ್ ವಾಲ್ಮೀಕಿ ಅವರಿಗೆ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಪ್ರಕರಣ-೨ : ಕಳೆದ ೨೦೧೬ ರ ಡಿಸೆಂಬರ್ ೨೯ ರಂದು ಗಂಗಾವತಿ ತಾಲೂಕು ಬುಕ್ಕಸಾಗರ ಬಳಿ ಕಾರೊಂದು ರಸ್ತೆ ಬದಿಯಲ್ಲಿನ ಬಂಡೆಗೆ ಡಿಕ್ಕಿ ಹೊಡೆದು, ಕಾರ್‌ನಲ್ಲಿದ ಓರ್ವ ವ್ಯಕ್ತಿ ತೀವ್ರ ಗಾಯಗೊಂಡರು. ಈ ಸಂದರ್ಭದಲ್ಲಿ ಇವರ ಜೀವವನ್ನು ರಕ್ಷಿಸಲು ನೆರವಾದವರು ಗಂಗಾವತಿ ತಾಲುಕು ಶಿರವಾರದ ಕನಕಪ್ಪ ತಂದೆ ಹನುಮಂತಪ್ಪ ಮಳಗಾವಿ ಎನ್ನುವವರು. ಗಂಗಾವತಿ ತಾಲೂಕಿನ ಆಸ್ಪತ್ರೆಗೆ ಸಾಗಿಸಲು ನೆರವಾದ ಇವರು, ಪ್ರಜ್ಞಾಹೀನ ಗಾಯಾಳು ಜೇಬಿನಲ್ಲಿದ್ದ ಕೆಲ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಆತನ ಗುರುತು ಪತ್ತೆಗಾಗಿ ತನ್ನ ಸ್ನೇಹಿತರ ನೆರವು ಪಡೆದರು. ನಂತರ ಸಂಬಂಧಿಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಅಪಘಾತದ ಮಾಹಿತಿ ನೀಡುವುದರ ಜೊತೆಗೆ, ಗಾಯಾಳು ಬಳಿ ಇದ್ದ ಹಣ, ಮೊಬೈಲ್ ಮತ್ತಿತರೆ ಬೆಲೆಬಾಳುವ ಸಾಮಗ್ರಿಗಳನ್ನು ಆತನ ಸಂಬಂಧಿಕರಿಗೆ ಒಪ್ಪಿಸಿದರು. ಮಾನವೀಯ ಹಾಗೂ ನಿಸ್ವಾರ್ಥ ಸೇವೆಯೊಂದಿಗೆ ಗಾಯಾಳುವಿನ ಜೀವ ರಕ್ಷಿಸಲು ನೆರವಾದ ಕನಕಪ್ಪ ಮಳಗಾವಿ ಅವರಿಗೆ ಸರ್ಕಾರ ಕಳೆದ ಜ. ೨೬ ರಂದು ಕೊಪ್ಪಳದಲ್ಲಿ ಜರುಗಿದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಮರೇಶ್ ವಾಲ್ಮೀಕಿ ಅವರಿಗೆ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸುವುದೇ ಮೊದಲ ಆದ್ಯತೆಯಾಗಿರಬೇಕು ಎಂದು ಕಾನೂನು ಹೇಳುತ್ತದೆಯೇ ಹೊರತು, ನೆರವಾದವರಿಗೆ ತೊಂದರೆ ಕೊಡುವಂತಹ ಪರಿಸ್ಥಿತಿ ಇಲ್ಲ. ಅಪಘಾತದ ಗಾಯಾಳುಗಳಿಗೆ ನೆರವಾದವರನ್ನು ಸರ್ಕಾರ ಜೀವ ರಕ್ಷಕ ಪ್ರಶಸ್ತಿಯನ್ನು ನೀಡುವ ಮೂಲಕ ಇಂತಹ ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡುತ್ತಿದೆ. ಇನ್ನಾದರೂ ಯಾವುದೇ ಅಪಘಾತದ ಗಾಯಾಳುಗಳನ್ನು ಕೂಡಲೆ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎನ್ನುವುದೇ ಸರ್ಕಾರದ ಆಶಯವಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು.

Leave a Reply

Top