ಅಧಿಕಾರಿಗಳು ವಾರಕ್ಕೆರಡು ಬಾರಿ ಗ್ರಾಮಗಳಿಗೆ ಭೇಟಿ ನೀಡುವುದು ಕಡ್ಡಾಯ- ಶಿವರಾಜ ತಂಗಡಗಿ

ಕೊಪ್ಪಳ ಬೇಸಿಗೆ ಮುಗಿಯುವವರೆಗೂ ತಹಸಿಲ್ದಾರ್, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಸೇರಿದಂತೆ ಮೂವರು ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕನಿಷ್ಟ ವಾರಕ್ಕೆರಡು ಬಾರಿ ಭೇಟಿ ನೀಡಿ, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ, ಉದ್ಯೋಗಖಾತ್ರಿಯಡಿ ಕೆಲಸದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾDSC_0067ಜ ಎಸ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಬರ ಪರಿಹಾರ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಗ್ರಾಮಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಮಾಲೋಚಿಸಿ, ವಾಸ್ತವತೆಯನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಸಮಸ್ಯೆಗಳನ್ನು ಅರಿಯಲು ಸಾಧ್ಯವಿಲ್ಲ. ಆದ್ದರಿಂದ ಬೇಸಿಗೆ ಮುಗಿಯುವವರೆಗೂ ತಹಸಿಲ್ದಾರ್, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಸೇರಿದಂತೆ ಮೂರೂ ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕನಿಷ್ಟ ವಾರಕ್ಕೆರಡು ಬಾರಿ ಭೇಟಿ ನೀಡಿ, ಆ ಗ್ರಾಮದಲ್ಲಿನ ಕುಡಿಯುವ ನೀರು ಪೂರೈಕೆಯ ಮೂಲಗಳ ಸ್ಥಿತಿ-ಗತಿ, ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ, ಉದ್ಯೋಗಖಾತ್ರಿಯಡಿ ಕಾರ್ಮಿಕರಿಗೆ ಕೆಲಸ ಒದಗಿಸುವುದು, ಅಲ್ಲದೆ ಸಕಾಲದಲ್ಲಿ ಹಣ ಪಾವತಿ ಮಾಡುವುದು, ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ತೀವ್ರ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಿಗೆ ಕೇವಲ ಬೋರ್‌ವೆಲ್ ಕೊರೆಯಿಸಿದ ಮಾತ್ರಕ್ಕೆ ಸಮಸ್ಯೆ ಪರಿಹರಿಸಿದಂತೆ ಆಗುವುದಿಲ್ಲ. ಆ ಬೋರ್‌ವೆಲ್ ನೀರು ಜನರಿಗೆ ತಲುಪುವಂತೆ ಮಾಡಿದಾಗ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ. ಗ್ರಾಮ ಪಂಚಾಯತಿ ಪಿಡಿಒ ಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತಾಗಬೇಕು ಎಂದು ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಸಂಖ್ಯೆ ಆಧಾರದಲ್ಲಿ ಟ್ಯಾಂಕರ್ ಪೂರೈಸಿ : ಜಿಲ್ಲೆಯ ತೀವ್ರ ಸಮಸ್ಯಾತ್ಮಕ ಗ್ರಾಮಗಳಿಗೆ ಸಮಸ್ಯೆ ಪರಿಹರಿಸುವವರೆಗೂ ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಸದ್ಯ ಜಿಲ್ಲೆಯಲ್ಲಿ ಯಲಬುರ್ಗಾ ತಾಲೂಕಿನ ಬಿನ್ನಾಳ, ಬೆಣಕಲ್, ಕುಷ್ಟಗಿ ತಾಲೂಕಿನ ರಂಗಾಪುರ, ಬೊಮ್ಮನಾಳ, ಗಂಗಾವತಿ ತಾಲೂಕಿನ ಹೊಸಗುಡ್ಡ, ಕೊಪ್ಪಳ ತಾಲೂಕಿನ ಇಂದಿರಾನಗರ ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆಯಾ ಗ್ರಾಮದ ಜನಸಂಖ್ಯೆ ಆಧಾರದ ಮೇಲೆ ಟ್ಯಾಂಕರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅಲ್ಲದೆ ಅಂತಹ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದ್ಯತೆ ಮೇರೆಗೆ ಪ್ರಾರಂಭಿಸಬೇಕು. ಶುದ್ಧ ಕುಡಿಯುವ ನೀರು ಘಟಕದಿಂದ ಪೂರೈಸಲಾಗುವ ನೀರನ್ನು ಕುಡಿದರೆ ಬಾಯಿ ಹುಣ್ಣು ಆಗುತ್ತದೆ ಎಂಬ ತಪ್ಪು ಕಲ್ಪನೆ ಗ್ರಾಮೀಣ ಜನರಲ್ಲಿ ಮನೆ ಮಾಡಿದೆ. ಆದರೆ ವಾಸ್ತವವಾಗಿ ಶುದ್ಧ ಕುಡಿಯುವ ನೀರು ಘಟಕದ ಮೂಲಕ ಒಳ್ಳೆಯ ಶುದ್ಧ ನೀರು ಪೂರೈಕೆ ಆಗುತ್ತದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋಶಾಲೆಗಳನ್ನು ಕೂಡಲೆ ಪ್ರಾರಂಭಿಸಿ : ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು, ಕೊಪ್ಪಳ ತಾಲೂಕು ಅಳವಂಡಿ, ಗಂಗಾವತಿ ತಾಲೂಕು ಕನಕಗಿರಿ, ಹುಲಿಹೈದರ್, ಕುಷ್ಟಗಿ ತಾಲೂಕಿನ ಕಲಕೇರಿಯಲ್ಲಿ ಗೋಶಾಲೆಗಳನ್ನು ಈಗಾಗಲೆ ಪ್ರಾರಂಭಿಸಿದ್ದು, ಗೋಶಾಲೆಗಳಲ್ಲಿ ಸದ್ಯ ೭೩೦ ಜಾನುವಾರುಗಳು ಇವೆ. ಅಲ್ಲದೆ ತಾವರಗೇರಾ, ತಲ್ಲೂರು, ಅಳವಂಡಿ, ಹುಲಿಹೈದರ್‌ನ ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರ ಪೂರೈಕೆ ಮಾಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಜಯರಾಂ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಲಬುರ್ಗಾ ತಾಲೂಕು ಚಿಕ್ಕೊಪ್ಪ, ಕೊಪ್ಪಳ ತಾಲೂಕು ಇರಕಲ್ಲಗಡ, ಕುಷ್ಟಗಿ ತಾಲೂಕು ತಾವರಗೇರಾ, ಹನುಮನಾಳದಲ್ಲಿ ಕೂಡಲೆ ಗೋಶಾಲೆ ಪ್ರಾರಂಭಿಸಬೇಕು. ಮುಖ್ಯಮಂತ್ರಿಗಳು ಏ. ೨೭ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ ಬರ ಪರಿಶೀಲನೆ ನಡೆಸಲಿದ್ದು, ಮುಖ್ಯಮಂತ್ರಿಗಳ ಓಲೈಕೆಗಾಗಿಯೇ ಜಾನುವಾರುಗಳನ್ನು ಕರೆತಂದು, ಮತ್ತೆ ಕರೆದುಕೊಂಡು ಹೋಗುವಂತಹ ಕ್ರಮವನ್ನು ಯಾವುದೇ ಅಧಿಕಾರಿಗಳು ಮಾಡಬಾರದು. ಮುಖ್ಯಮಂತ್ರಿಗಳಿಗೆ ಬರದ ತೀವ್ರತೆ ಮತ್ತು ಪರಿಹಾರ ಕಾರ್ಯಕ್ರಮಗಳ ಬಗ್ಗೆ ವಾಸ್ತವಿಕ ಸ್ಥಿತಿ-ಗತಿ ತಿಳಿದುಕೊಳ್ಳುವಂತಾಗಲು ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು : ಯಲಬುರ್ಗಾ ತಾಲೂಕಿನ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೂಡಲೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕೊಪ್ಪಳ ನಗರಕ್ಕೆ ನೀರು ಪೂರೈಸಲು ಕಾತರಕಿ ಬಳಿಯ ತುಂಗಭದ್ರಾ ಹಿನ್ನೀರಿನ ಬಳಿ ೧೧ ಬೋರ್‌ವೆಲ್‌ಗಳನ್ನು ಕೊರೆಯಿಸಿದ ಮಾದರಿಯಲ್ಲಿ, ಹಿರೇಹಳ್ಳ ಹಿನ್ನೀರಿನ ಬಳಿ, ಅಗತ್ಯ ಬೋರ್‌ವೆಲ್‌ಗಳನ್ನು ಕೊರೆಯಿಸಿ, ಈ ಭಾಗದ ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಪೂರೈಕೆ ಮಾಡಬೇಕು. ಜೂನ್ ಅಂತ್ಯದವರೆಗೂ ನೀರು ಪೂರೈಕೆ ಆಗುವ ರೀತಿ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಕುಷ್ಟಗಿ ತಾಲೂಕು ತಾವರಗೇರಾದ ಬಸವಣ್ಣ ಕ್ಯಾಂಪ್, ಹನುಮಸಾಗರ, ನಿಲೋಗಲ್, ಕೊಪ್ಪಳ ತಾಲೂಕು ಬಹದ್ದೂರಬಂಡಿ, ಕವಲೂರು, ಗಂಗಾವತಿ ತಾಲೂಕಿನ ಜಮಾಪುರ ನಲ್ಲಿ ನೀರಿನ ಸಮಸ್ಯೆ ಇರುವುದಾಗಿ ಗಮನಕ್ಕೆ ಬಂದಿದ್ದು, ಕೂಡಲೆ ಅಲ್ಲಿ ನೀರು ಪೂರೈಸಬೇಕು. ಕುಡಿಯುವ ನೀರು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯಿಂದ ಸರ್ಕಾರ ವಿನಾಯಿತಿ ನೀಡಿದ್ದು, ಟೆಂಡರ್ ಪ್ರಕ್ರಿಯೆಗೆ ಕಾಯದೆ, ಕೂಡಲೆ ಕಾಮಗಾರಿ ಪ್ರಾರಂಭಿಸಿ, ಜನರಿಗೆ ನೀರು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗಖಾತ್ರಿಯಡಿ ಕೆಲಸ ನೀಡಿ : ಸದ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕಾರ್ಮಿಕರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಾಗಿದೆ. ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿ ಕೆಲಸ ನೀಡಲಿಲ್ಲ ಎಂಬ ದೂರುಗಳು ಬಾರದಂತೆ, ಕೆರೆ ಹೂಳೆತ್ತುವುದು, ಕಾಲುವೆ ಹೂಳೆತ್ತುವುದು ಇಂತಹ ಸಾಮೂಹಿಕ ಉದ್ಯೋಗ ಒದಗುವ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ನೀಡಬೇಕು. ಮತ್ತು ಕಾರ್ಮಿಕರಿಗೆ ಸಕಾಲಕ್ಕೆ ಹಣ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಕಾರ್ಯನಿವಾಹಕ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.

Please follow and like us:
error