ಅಂಥ್ರಾಕ್ಸ್ ಭೀತಿ : ಜಾನುವಾರುಗಳಿಗೆ ಮುಂಜಾಗ್ರತೆಗಾಗಿ ಲಸಿಕೆ ಹಾಕಲು ಡಿ.ಸಿ. ಸೂಚನೆ

anthrox-in-koppalತಾಲೂಕಿನ ಕರ್ಕಿಹಳ್ಳಿ ಬಳಿ ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಹರಡುವ ಭೀತಿ ಕಂಡುಬಂದಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲ ಎಲ್ಲ ಜಾನುವಾರುಗಳಿಗೆ ಅಗತ್ಯ ಲಸಿಕೆ ಹಾಕಬೇಕು. ಹಾಗೂ ರೋಗ ಹರಡದಂತೆ ಇಲ್ಲಿನ ಸಾರ್ವಜನಿಕರಿಗೆ ಅಗತ್ಯ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪಶುಸಂಗೋಪನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನ ಕರ್ಕಿಹಳ್ಳಿ ಸುತ್ತಮುತ್ತ ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಕಂಡುಬಂದಿರುವ ಹಿನ್ನೆಲೆಯಲ್ಲಿ, ಪಶುಸಂಗೋಪನೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಲವು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಇತರೆ ಜಾನುವಾರುಗಳಿಗೆ ಹಾಗೂ ಜನರಿಗೆ ರೋಗ ಹರಡದಂತೆ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಗತ್ಯ ಔಷಧಿ ಹಾಗೂ ಲಸಿಕೆಯನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಕರ್ಕಿಹಳ್ಳಿ ಸುತ್ತಮುತ್ತಲಿನ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಸಾರ್ವಜನಿಕರಿಗಾಗಿ ಪಶುಸಂಗೋಪನೆ ಇಲಾಖೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಸಂಖ್ಯೆ : ೯೭೪೨೪೬೬೫೪೦ ಆಗಿದ್ದು, ಡಾ. ಅಂಗಡಿ ಅವರು ಸಹಾಯವಾಣಿ ನಿರ್ವಹಿಸಲಿದ್ದಾರೆ. ಜಾನುವಾರುಗಳು ಯಾವುದೇ ರೋಗದಿಂದ ಸತ್ತಲ್ಲಿ, ಕೂಡಲೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಅಲ್ಲದೆ ಸಂಬಂಧಿಸಿದ ಗ್ರಾ.ಪಂ. ಪಿಡಿಓ ಗೆ ಹಾಗೂ ಪಶು ವೈದ್ಯಾಧಿಕಾರಿಗಳಲ್ಲಿ ತಿಳಿಸಬೇಕು. ರೋಗವು ಜಾನುವಾರುಗಳಿಂದ ಜನರಿಗೂ ಸಹ ಹರಡುವ ಸಾಧ್ಯತೆ ಇರುವುದರಿಂದ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯನ್ನು ಸ್ಥಾಪಿಸಿ, ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪಶುಸಂಗೋಪನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕರ್ಕಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಸಹ ಸಾರ್ವಜನಿಕರು ಜಾನುವಾರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಬೇರೆ ಭಾಗದ ಜಾನುವಾರುಗಳು ಈ ಭಾಗಕ್ಕೆ ಬಾರದಂತೆ ಹಾಗೂ ಇಲ್ಲಿನ ಜಾನುವಾರುಗಳನ್ನು ಬೇರೆಡೆ ಅನಗತ್ಯವಾಗಿ ಸಾಗಿಸದಂತೆಯೂ ಸಹ ಎಚ್ಚರಿಕೆ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಹಾಗೂ ಪಿಡಿಓ ಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಅವರು, ಮಾತನಾಡಿ, ಅಂಥ್ರಾಕ್ಸ್ ರೋಗ ಕುರಿತಂತೆ ಮಾಹಿತಿ ದೊರೆತ ಕೂಡಲೆ, ಬೆಂಗಳೂರಿನಲ್ಲಿರುವ ಪ್ರಾಣಿಗಳ ಜೈವಿಕ ಸಂಸ್ಥೆಯ ವಿಜ್ಞಾನಿಗಳನ್ನು ಜಿಲ್ಲೆಗೆ ಕರೆಸಿ, ಪರಿಶೀಲನೆ ಕಾರ್ಯ ಕೈಗೊಳ್ಳಲಾಯಿತು. ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲೆಂದರಲ್ಲಿ, ಹೇಗೆ ಬೇಕೋ ಹಾಗೆ ಹೂಳಬಾರದು. ಅಥವಾ ಬಿಡಬಾರದು. ಇದರಿಂದ ಜನರಿಗೂ ಸಹ ಈ ರೋಗ ಹರಡುವ ಸಾಧ್ಯತೆಗಳಿರುತ್ತದೆ. ರೋಗದಿಂದ ಸತ್ತ ಜಾನುವಾರುಗಳನ್ನು ಕನಿಷ್ಟ ೦೬ ಅಡಿ ಆಳದಲ್ಲಿ ಹೂಳಬೇಕು. ಗುಂಡಿಗೆ ಸತ್ತ ಜಾನುವಾರು ಹಾಕುವುದಕ್ಕೂ ಮುನ್ನ ಹಾಗೂ ನಂತರವೂ ಕೂಡ ಸುಣ್ಣವನ್ನು ಗುಂಡಿಯಲ್ಲಿ ಹಾಕಿ ನಂತರವೇ ಮುಚ್ಚಬೇಕು. ಈಗಾಗಲೆ ಈ ಭಾಗದಲ್ಲಿ ಸುಮಾರು ೩೮೦೦ ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಹಾಕಲಾಗಿದೆ. ಇನ್ನೂ ೧೨೦೦ ಜಾನುವಾರುಗಳಿಗೆ ಎರಡು ದಿನಗಳ ಒಳಗಾಗಿ ಲಸಿಕೆ ಹಾಕಲಾಗುವುದು. ಜಾನುವಾರುಗಳಿಗೆ ರೋಗ ಕಂಡುಬಂದಲ್ಲಿ ಅಗತ್ಯ ಚಿಕಿತ್ಸೆಯ ಜೊತೆಗೆ ರೋಗ ಲಕ್ಷಣ ಕಡಿಮೆಯಾಗುವವರೆಗೂ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಜಾನುವಾರುಗಳಿಂದ ಜನರಿಗೂ ಸಹ ಈ ರೋಗ ಹರಡುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರೂ ಸಹ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಎಸ್. ಜಂಬಗಿ, ಬೆಂಗಳೂರಿನ ಪ್ರಾಣಿಗಳ ಜೈವಿಕ ಸಂಸ್ಥೆಯ ವಿಜ್ಞಾನಿಗಳಾದ ಡಾ. ಗಿರೀಶ್ ಹಾಗೂ ವೆಂಕಟೇಶ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಜಾನುವಾರುಗಳಿಗೆ ಯಾವುದೇ ರೋಗ ಕುರಿತಂತೆ ಮಾಹಿತಿಗಾಗಿ ಪಶುಸಂಗೋಪನೆ ಇಲಾಖೆ ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳಾದ ಕೊಪ್ಪಳ- ಡಾ. ಯಮುನಪ್ಪ- ೯೮೪೫೮೯೨೦೫೬, ಯಲಬುರ್ಗಾ ಡಾ. ತಿಪ್ಪಣ್ಣ- ೯೪೪೮೫೭೧೩೫೮. ಗಂಗಾವತಿ ಡಾ. ಸೋಮಪ್ಪ- ೯೮೪೫೬೩೫೬೫೬. ಕುಷ್ಟಗಿ ಡಾ. ಜಯರಾಂ ಚವ್ಹಾಣ್- ೯೭೪೦೩೩೫೭೬೫ ಕ್ಕೆ ಸಂಪರ್ಕಿಸಬಹುದು.

Please follow and like us:
error