ಇಂಡಿಯಾ ಗೇಟ್ ಬಳಿ ದಲಿತರಿಂದ ಭಾರೀ ಪ್ರತಿಭಟನೆ :ಜನಲೋಕಪಾಲ್ v/s ಬಹುಜನಲೋಕಪಾಲ್

ಹೊಸದಿಲ್ಲಿ, ಆ. 25: ಇದೀಗ ಅಣ್ಣಾ ಹಝಾರೆಯವರ ‘ಜನಲೋಕಪಾಲ್’ ಮಸೂದೆಯ ವಿರುದ್ಧ ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ‘ಬಹುಜನಲೋಕಪಾಲ್’ ಮಸೂದೆಯು ಭಾರತಾದ್ಯಂತ ಧ್ವನಿ ಪಡೆದುಕೊಳ್ಳುತ್ತಿದ್ದು ಶೀಘ್ರದಲ್ಲೇ ಬಹುಜನಲೋಕಪಾಲ್ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಮಂಡನೆಯಾಗುವ ಸಾಧ್ಯತೆಯಿದೆ. ಲೋಕಪಾಲ ಸಮಿತಿಯಲ್ಲಿ ತಮ್ಮನ್ನು ಸೇರಿಸುವಂತೆ ದಲಿತರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ. ಅಖಿಲ ಭಾರತ ಪರಿಶಿಷ್ಟ ಜಾತಿ-ಪಂಗಡದ ಸಂಘ ಟನೆಗಳ ಒಕ್ಕೂಟದ ನೇತೃತ್ವದಲ್ಲಿ ದಿಲ್ಲಿಯ ಇಂಡಿಯಾ ಗೇಟ್ ಬಳಿ ನಡೆದ ‘ಭಾರತದ ಸಂವಿಧಾನವನ್ನು ರಕ್ಷಿಸಿ’ ರ್ಯಾಲಿಯಲ್ಲಿ ಅಣ್ಣಾ ಹಝಾರೆ ಬಳಗದ ಬೇಡಿಕೆಯನ್ನು ದಲಿತರು ವಿರೋಧಿಸಿದರು. ಅವರ ಬೇಡಿಕೆಗಳು ಅಪ್ರಜಾಸತ್ತಾತ್ಮಕ, ಅಸಾಂವಿಧಾನಿಕ ವೆಂದು ವ್ಯಾಖ್ಯಾನಿ ಸಿದ ಅವರು, ಜನಲೋಕಪಾಲವು ದೇಶವನ್ನು ಬಾಣಲೆ ಯಿಂದ ಬೆಂಕಿಗೆ ನೂಕಲಿದೆಯೆಂದು ಆರೋಪಿಸಿದರು.
ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ಸಮುದಾಯದ ಸಾವಿರಾರು ಸದಸ್ಯರು ಇಂಡಿ ಯಾಗೇಟ್ ಬಳಿ ನೆರೆದು ಪ್ರತಿಭಟನೆ ನಡೆಸಿದ್ದು, ಸಭೆ ಯಲ್ಲಿ ಹಝಾರೆಯವರ ಜನ ಲೋಕಪಾಲ್ ಮಸೂದೆಯ ವಿರುದ್ಧ ತಾವು ‘ಬಹುಜನ ಲೋಕಪಾಲ್ ಮಸೂದೆ’ ರಚಿಸಲಿರುವುದಾಗಿ ಪ್ರತಿಭಟನಕಾರರು ತಿಳಿಸಿದರು. ಹಝಾರೆ ತಂಡ ಪ್ರಸ್ತಾಪಿಸಿರುವ ಜನ ಲೋಕಪಾಲ್ ಮಸೂದೆ ‘‘ದಲಿತ ವಿರೋಧಿ’’ ಮತ್ತು ‘‘ಸಂವಿಧಾನ ವಿರೋಧಿ’’ ಎಂದು ಪ್ರತಿಪಾದಿಸಿರುವ ಪ್ರತಿಭಟನಕಾರರು ಇಂಡಿಯಾ ಗೇಟ್ ಬಳಿ ರಸ್ತೆ ತಡೆ ನಡೆಸಿ, ಹಝಾರೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಂಡಿಯಾ ಗೇಟ್ ಬಳಿ ‘ಸಂವಿಧಾನ ಬಚಾವೊ (ಸಂವಿಧಾನ ರಕ್ಷಿಸಿ)’ ಆಂದೋಲನಕ್ಕೆ ಚಾಲನೆ ನೀಡಿದ ಅಖಿಲ ಭಾರತ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಉದಿತ್‌ರಾಜ್, ಹಝಾರೆಯವರ ವಿಷಯದಿಂದಾಗಿ ದೇಶದ ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಕಳವಳಗೊಂಡಿದ್ದಾರೆ. ಹಝಾರೆ ತಂಡವು ಭಾರತದ ಶೋಷಿತ ಹಾಗೂ ಹಿಂದುಳಿದ ಜಾತಿಗಳನ್ನು ಪ್ರತಿನಿಧಿಸುವುದಿಲ್ಲ, ಹೀಗಾಗಿ ಅವರ ಚಳವಳಿಯೂ ದಲಿತ ವಿರೋಧಿಯಾದುದು ಎಂಬ ಆತಂಕ ತಮಗಿದೆ ಎಂದು ಆರೋಪಿಸಿದರು. ದಲಿತರು ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದು ಶೀಘ್ರದಲ್ಲೇ, ‘ಬಹುಜನ ಲೋಕಪಾಲ್ ಮಸೂದೆ’ಯನ್ನು ರಚಿಸಲಿದ್ದು, ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಕಳುಹಿಸಲಾಗುವುದು ಎಂದು ಉದಿತ್‌ರಾಜ್ ಹೇಳಿದ್ದಾರೆ. ದೇಶದಲ್ಲಿ ಅವ್ಯಾಹತ ಭ್ರಷ್ಟಾಚಾರವಿದೆಯೆಂಬುದರಲ್ಲಿ ಅನುಮಾನವೇ ಇಲ್ಲ
ಆದರೆ, ಅದರ ವಿರುದ್ಧದ ಹೋರಾಟವು ಸಂವಿಧಾನವನ್ನು ಕಡೆಗಣಿಸಬಾರದು. ಚುನಾಯಿತ ಸರಕಾರವೊಂದರ ಮೇಲೆ ಮಹಾ ಸರಕಾರವೊಂದನ್ನು ಹೇರುವ ಪ್ರಯತ್ನ ಮಾಡಬಾರದು. ಭ್ರಷ್ಟಾಚಾರವು ರಾಜಕೀಯ ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದೆಯೆಂದು ಅಭಿಪ್ರಾಯಿಸಿದರು. ಜನಲೋಕಪಾಲವನ್ನು ಟೀಕಿಸಿದ ಅವರು, ಅದರಲ್ಲಿ ಸರಕಾರೇತರ ಸಂಘಟನೆಗಳು, ಕಾರ್ಪೊರೇಟ್‌ಗಳು ಹಾಗೂ ಮಾಧ್ಯಮ ಸಂಸ್ಥೆಗಳು ಒಳಗೊಂಡಿಲ್ಲ. ಕಾರ್ಪೊರೇಟ್ ಸಂಸ್ಥೆಗಳೇ ರಾಜಕಾರಣಿಗಳಿಗೆ ಕಪ್ಪು ಹಣದ ಮುಖ್ಯ ಮೂಲವಾಗಿರುತ್ತವೆ ಎಂದರು. ದಲಿತರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಲೋಕಪಾಲ ಮಸೂದೆಗಿಂತಲೂ ಹೆಚ್ಚು ಚಿಂತೆ ಅವರಿಗೆ ರೊಟ್ಟಿ, ಬಟ್ಟೆ, ವಸತಿಯದಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸೋನಿಪತ್‌ನಿಂದ ಆಗಮಿಸಿದ್ದ ಶರದ್ ಯಾದವ್ ಹೇಳಿದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಪೀಸ್ ಪಾರ್ಟಿಯ ಎಂಜೆ ಖಾನ್, ಎಐಪಿಎಂಎಂನ ಅಲಿ ಅನ್ವರ್ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಜನ ಲೋಕಪಾಲ್ ಮಸೂದೆ ರಚನೆಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತ ಪ್ರತಿನಿಧಿಗಳಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ತಾವು ಬಹುಜನ ಲೋಕಪಾಲ್ ಮಸೂದೆಯನ್ನು ರಚಿಸುತ್ತಿದ್ದೇವೆ ಎಂದು ಅಲಿ ಅನ್ವರ್ ಸ್ಪಷ್ಟ ಪಡಿಸಿದರು.
ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ದಲಿತರು ಮತ್ತು ಅಲ್ಪ ಸಂಖ್ಯಾತರಿಗೆ ಸಂವಿಧಾನವು ರಕ್ಷಣೆಯನ್ನು ಒದಗಿಸಿದೆ. ಕೆಲವೊಂದು ಮಂದಿಯ ಗುಂಪು ಸಂವಿಧಾನಕ್ಕೆ ಸವಾಲೆಸೆಯುವ ಮೂಲಕ, ಸಾಂವಿಧಾನಿಕ ಪ್ರಕ್ರಿಯೆ ಮತ್ತು ಸಂಸತ್ತಿನಂತಹ ಸಂಸ್ಥೆಗಳಿಗೆ ಬೆದರಿಕೆಯಂತೆ ವರ್ತಿಸುತ್ತಿವೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ‘‘ಅಣ್ಣಾ ಹಝಾರೆ ಭ್ರಷ್ಟಾಚಾರದ ವಿರುದ್ಧ ಹೋರಾಡಲಿ, ಆದರೆ ಅವರು ಸಂವಿಧಾನಕ್ಕೆ ಸವಾಲೆಸೆಯುವುದು ಬೇಡ. ಹಝಾರೆ ತಂಡದಲ್ಲಿ ಒಬ್ಬನೇ ಒಬ್ಬ ದಲಿತ ಅಥವಾ ಮುಸ್ಲಿಮ್ ಪ್ರತಿನಿಧಿಯಿರಲಿಲ್ಲ. ಹೀಗಾಗಿ ಹಝಾರೆಯ ಚಳವಳಿಯು ಮೇಲ್ಜಾತಿ ಜನರಿಂದ ನಡೆಸಲ್ಪಡುತ್ತಿದೆ ಎಂದು ನನಗನಿಸುತ್ತಿದೆ’’ ಎಂದು ನಿಖರ್ ಖಾತೂನ್ ಹೇಳಿದ್ದಾರೆ. ಖತೂಶಾರ ಹೇಳಿಕೆಯನ್ನು ರ್ಯಾಲಿಯಲ್ಲಿ ಭಾಗವಹಿಸಿದ ಹಲವಾರು ನಾಯಕರು ಪ್ರತಿಧ್ವನಿಸಿದರು.
Please follow and like us:
error

Related posts

Leave a Comment