ಬಿಜೆಪಿ V/S ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಕೈಕೊಟ್ಟ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು

ಬಳ್ಳಾರಿ, ನ.11: ಕಾಂಗ್ರೆಸ್‌ನ ಕೈ ಜಾರಿ ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಶುಕ್ರವಾರ ಕಂಡುಬಂದ ದ್ರಶ್ಯ ಮಾತ್ರ ಸಂಪೂರ್ಣ ಭಿನ್ನ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗಾದಿ ಲಿಂಗಪ್ಪ ನಾಮಪತ್ರ ಸಲ್ಲಿಸುವಾಗ ಅವರ ಅಕ್ಕಪಕ್ಕದಲ್ಲಿ ನಿಲ್ಲಲು ಬಿಜೆಪಿಗೆ ಬೆಂಗಳೂರಿನಿಂದ ನಾಯಕರು ಬರಬೇಕಾಯಿತು. ಬಳ್ಳಾರಿಯ ಬಿಜೆಪಿ ನಾಯಕರ ಅನುಪಸ್ಥಿತಿ ಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಜಗದೀಶ್ ಶೆಟ್ಟರ್, ಬಾಲಚಂದ್ರ ಜಾರಕಿಹೊಳಿ ಹಾಗೂ ಗೋವಿಂದ ಕಾರಜೋಳರ ಸಮ್ಮುಖ ದಲ್ಲಿಂದು ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ತನ್ನ ಉಮೇದುದಾರಿಕೆಯನ್ನು ಸಲ್ಲಿಸಿದರು.
ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಗಲಿಬಿಲಿಗೊಂಡು, ನಿನ್ನೆ ದಿನವಿಡೀ ತನ್ನ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಸೂಚಿಸುವಲ್ಲಿ ವಿಫಲರಾದರು. ಬಳಿಕ ತಡ ರಾತ್ರಿಯವರೆಗೆ ಮತ್ತೆ ಸಭೆ ನಡೆಸಿ, ತರಾತುರಿಯಲ್ಲಿ ಗಾದಿ ಲಿಂಗಪ್ಪನವರನ್ನು ತನ್ನ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತ್ತು.
ಇಂದು ಅವರು ನಾಮಪತ್ರ ಸಲ್ಲಿಸಲು ಮುಂದಾದ ವೇಳೆ ಶ್ರೀರಾಮುಲು ಅವರ ಆಪ್ತ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಹಿಷ್ಕರಿಸಿದ್ದುದರಿಂದ, ತಮ್ಮ ಅಭ್ಯರ್ಥಿಗೆ ಮುಜುಗರವಾಗಬಾರದೆಂಬ ಕಾರಣಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಈಶ್ವರಪ್ಪ ತಮ್ಮ ಅನ್ಯ ಕಾರ್ಯಗಳನ್ನು ಬದಿಗೊತ್ತಿ ನೇರ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ತೆರಳಿ, ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೊಂದಿಗೆ ಹಾಜರಿದ್ದರು. ಇದಕ್ಕೂ ಮುನ್ನ ಬೆಂಗಳೂರಿನ ಚಾಮರಾಜಪೇಟೆಯ ಆರೆಸ್ಸೆಸ್ ಕೇಂದ್ರ ಕಚೇರಿ ‘ಕೇಶವ ಕೃಪಾ’ಕ್ಕೆ ಭೇಟಿ ನೀಡಿ, ಆರೆಸ್ಸೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ ಡಿವಿ, ಅವರ ಸಲಹೆಯಂತೆ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬಳ್ಳಾರಿಗೆ ತೆರಳಿದರು.
ಬಳ್ಳಾರಿಯ ಬಿಜೆಪಿ ಜನಪ್ರತಿನಿಧಿಗಳು ಗೈರಾದುದರಿಂದ ಆಕ್ರೋಶಗೊಂಡಿದ್ದರೂ ಡಿವಿ ಹಾಗೂ ಈಶ್ವರಪ್ಪ ಏನೂ ಆಗದವರಂತೆ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ, ತಮ್ಮ ಅಭ್ಯರ್ಥಿಯ ಗೆಲುವು ಖಚಿತ, ಬಳ್ಳಾರಿಯ ಶಾಸಕರು, ಸಂಸದರು ತಮ್ಮಾಂದಿಗಿದ್ದಾರೆ. ಮುಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದರು.
ಶ್ರೀರಾಮುಲುರೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಸಂಸದೆ ಜೆ.ಶಾಂತಾ, ಶಾಸಕರಾದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ನಾಗೇಂದ್ರ, ಸುರೇಶ್ ಬಾಬು, ಆನಂದ್ ಸಿಂಗ್, ನೇಮಿರಾಜ್ ನಾಯ್ಕಿ, ಚಂದ್ರ ನಾಯ್ಕಿ, ಮೃತ್ಯುಂಜಯ ಹಾಗೂ ಜಿಪಂ, ತಾಪಂಗಳ ಬಹುತೇಕ ಎಲ್ಲ ಜನಪ್ರತಿನಿಧಿಗಳು ಗಾದಿ ಲಿಂಗಪ್ಪ ನಾಮಪತ್ರ ಸಲ್ಲಿಸುವ ವೇಳೆ ಗೈರಾಗಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ಇಂದು ನಾಮಪತ್ರದ ವೇಳೆ ಬಳ್ಳಾರಿಗೆ ಆಗಮಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಸೆ ಕಾದಿತ್ತು. ಅವರು ಬಳ್ಳಾರಿಗೆ ಹೋಗದೆ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದರು.
ಶ್ರೀರಾಮುಲುಗೆ ಸೆಡ್ಡು ಹೊಡೆಯುವ ಹಿನ್ನೆಲೆಯಲ್ಲಿ ನಿನ್ನೆ ಬಿಜೆಪಿಯಿಂದ ಅಶೋಕ್ ಹಾಗೂ ನಾಗೇಂದ್ರ ನಾಮಪತ್ರ ಸಲ್ಲಿಸುವಂತೆ ಆದೇಶ ನೀಡಿದ್ದ ವರಿಷ್ಠರು, ರಾತ್ರಿ ತಮ್ಮ ನಿಷ್ಠೆ ಬದಲಿಸಿದ್ದು, ಸ್ಥಳೀಯರಿಗೆ ಸ್ಥಾನ ನೀಡಿ ಶ್ರೀರಾಮುಲುಗೆ ಮುಖಭಂಗ ಉಂಟು ಮಾಡುವ ಹಿನ್ನೆಲೆಯಲ್ಲಿ ಗಾದಿಲಿಂಗಪ್ಪರನ್ನು ಕಣಕ್ಕಿಳಿಸಿದೆ. ಗಾದಿಲಿಂಗಪ್ಪ ಇಂದು ಸಿಎಂ, ಈಶ್ವರಪ್ಪ, ಶೆಟ್ಟರ್, ಕಾರಜೋಳರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ, ತಮ್ಮ ಅಭ್ಯರ್ಥಿ ವಿರುದ್ಧ ಪ್ರಚಾರ ಕೈಗೊಳ್ಳುವ ಶಾಸಕ, ಸಂಸದರ ವಿರುದ್ಧ ಆತುರದ ನಿರ್ಧಾರ ಪಕ್ಷ ಕೈಗೊಳ್ಳುವುದಿಲ್ಲ ಎಂದರು.
ಸಂಬಂಧಗಳನ್ನು ಒಂದೇ ದಿನದಲ್ಲಿ ಕಡಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಆತುರದ ನಿರ್ಧಾರಕ್ಕೆ ಪಕ್ಷ ಹೋಗುವುದಿಲ್ಲ ಎಂದರು. ಈ ವೇಳೆ ಮಾತನಾಡಿದ ಈಶ್ವರಪ್ಪ, ಪಕ್ಷ ವ್ಯಕ್ತಿಯ ಮೇಲೆ ನಿಂತಿಲ್ಲ. ಕಾರ್ಯಕರ್ತರಿಂದ ಪಕ್ಷ ನಿಂತಿದೆ. ಬಿಜೆಪಿ ಪಕ್ಷದ ಶಾಸಕ, ಸಂಸದರೆಲ್ಲರೂ ನಮ್ಮಿಂದಿಗೆ ಬರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು. ಕೆಲವರು ಈಗ ನಮ್ಮಾಂದಿಗಿಲ್ಲ. ಮುಂದೆ ಅವರೆಲ್ಲರೂ ನಮ್ಮಾಂದಿಗೆ ಸೇರುತ್ತಾರೆ. ಈಗಾಗಲೇ ಕೆಲವು ಮಂದಿ ನಮ್ಮಾಂದಿಗೆ ಸಂಪರ್ಕದಲ್ಲಿದ್ದಾರೆ. ಸರಕಾರದ ಸಾಧನೆಯಿಂದ ಈ ಬಾರಿಯ ಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎಂದರು. ಈ ವೇಳೆ ಸಿಎಂ ಸೇರಿದಂತೆ ಹೊರಗಿನಿಂದ ಬಂದವರೇ ನಾಮಪತ್ರದ ವೇಳೆ ನಾಯಕರಿದ್ದರಿಂದ ಸ್ಥಳೀಯ ಬಹುತೇಕ ಬಿಜೆಪಿ ಕಾರ್ಯಕರ್ತರೂ ದೂರ ಉಳಿದಿದ್ದರು.
ಇನ್ನೊಂದೆಡೆ ಇಂದು ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್ ತಮ್ಮ ಬೆಂಬಲಿಗ ಕಾರ್ಯಕರ್ತರು, ನಾಯಕರೊಂದಿಗೆ ಸೇರಿ ನಾಮಪತ್ರ ಸಲ್ಲಿಸಿದರು. ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಮ್‌ಪ್ರಸಾದ್ ಮೆರವಣಿಗೆ ಮೂಲಕ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಸಲ್ಲಿಸುವ ವೇಳೆ ಕಾಂಗ್ರೆಸ್ ಮುಖಂಡರಾದ ಅಲ್ಲಂವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಅನಿಲ್ ಲಾಡ್, ಆಂಜನೇಯುಲು, ತುಕಾರಾಂ ಸೇರಿದಂತೆ ಹಲವಾರು ನಾಯಕರು ಹಾಜರಿದ್ದರು.
ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಗಾದಿ ಲಿಂಗಪ್ಪ ಶುಕ್ರವಾರ ಮೆರವಣಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮುಂತಾದವರು ಜೊತೆಯಲ್ಲಿದ್ದರು
Please follow and like us:

Related posts

Leave a Comment