ಸೂರ್ಯಗ್ರಹಣ ವೀಕ್ಷಣೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಪ್ರಕೃತಿಯ ಸಹಜ ವಿಸ್ಮಯ ತಪ್ಪಿಸಿಕೊಳ‍್ಳಬೇಡಿ

ಬೆಂಗಳೂರು, ಡಿ. 25: ಸೂರ್ಯಗ್ರಹಣ ವೀಕ್ಷಣೆ ಒಂದು ಅಸ್ಮರಣೀಯ ಅನುಭವವಾಗಿದೆ ಮತ್ತು ಈ ದಶಕದ ಕೊನೆಯ ಸೂರ್ಯಗ್ರಹಣ ಡಿ.26ರಂದು ಸಂಭವಿಸಲಿದ್ದು, ಇದು ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ ಎಂದು ನೇತ್ರ ತಜ್ಞ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ.

ಈ ಖಗೋಳ ಸೂರ್ಯಗ್ರಹಣ ವಾರ್ಷಿಕ ಸೂರ್ಯಗ್ರಹಣಕ್ಕಿಂತ ವಿಶೇಷವಾಗಿದ್ದು ಇಲ್ಲಿ ಚಂದ್ರನು ಸೂರ್ಯ ಹಾಗೂ ಭೂಮಿಯ ಮಾರ್ಗದ ನಡುವೆ ಬರುವ ಮೂಲಕ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತಾನೆ. ಇದರಿಂದ ಆಕಾಶದಲ್ಲಿ ಬೆಂಕಿಯ ಉಂಗುರ ನಿರ್ಮಾಣವಾಗುತ್ತದೆ.

ಪಾರ್ಶ್ವ ಸೂರ್ಯಗ್ರಹಣ ಮೊದಲ ತಾಣದಲ್ಲಿ ಬೆಳಗ್ಗೆ 7:59ಕ್ಕೆ ಸಂಭವಿಸುತ್ತದೆ. ಪೂರ್ಣ ಸೂರ್ಯಗ್ರಹಣ ಬೆಳಗ್ಗೆ 9:04ಕ್ಕೆ ಕಾಣುತ್ತದೆ ಮತ್ತು ನಂತರ ಗರಿಷ್ಠ ಸೂರ್ಯಗ್ರಹಣದ ಸ್ಥಾನಕ್ಕೆ ಬೆಳಗ್ಗೆ 10:47ಕ್ಕೆ ಚಲಿಸುತ್ತದೆ. ಈ ಮಹತ್ತರ ಘಟನೆಯನ್ನು ಬರಿಗಣ್ಣಿನಲ್ಲಿ ಸೂಕ್ತವಾದ ನೇತ್ರರಕ್ಷಣೆಯ ಸಾಧನಗಳಿಲ್ಲದೆ ಕೊಂಚಕಾಲವೂ ವೀಕ್ಷಿಸಬಾರದು ಎಂದು ಡಾ.ಭುಜಂಗ ಶೆಟ್ಟಿ ಸಲಹೆ ಮಾಡಿದ್ದಾರೆ.

ರಕ್ಷಣೆಯಿಲ್ಲದೆ ವೀಕ್ಷಣೆ ಕಣ್ಣುಗಳಿಗೆ ಹಾನಿ: ಸೂರ್ಯಗ್ರಹಣದ ಸಮಯದಲ್ಲಿ ಅಥವಾ ಸಾಮಾನ್ಯ ಬಿಸಿಲಿನಲ್ಲೂ ಸೂರ್ಯನನ್ನು ದಿಟ್ಟಿಸುವುದು ಶಾಶ್ವತವಾಗಿ ಅಕ್ಷಿಪಟಲವನ್ನು ಸುಟ್ಟು ಹಾಕುತ್ತದೆ. ಇದರಿಂದ ಶಾಶ್ವತ ಅಂಧತ್ವ ಉಂಟಾಗುತ್ತದೆ. ಸೋಲಾರ್ ರೆಟಿನೋಪತಿ ಎನ್ನುವ ಈ ಸಮಸ್ಯೆ ಅಕ್ಷಿಪಟಲದ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ. ಅದಕ್ಕೆ ಸೌರಕಿರಣ ಮೆದುಳಿಗೆ ಚಿತ್ರಗಳನ್ನು ಕಳುಹಿಸುವ ವಿಧಾನಕ್ಕೆ ಹಾನಿಯುಂಟು ಮಾಡಬಲ್ಲದು ಎಂದು ಅವರು ಎಚ್ಚರಿಸಿದ್ದಾರೆ.

ಸೋಲಾರ್ ರೆಟಿನೋಪತಿಯಿಂದ ಬಾಧಿತರಾದವರು ದೃಷ್ಟಿ ಮಂದವಾಗುವುದು, ದೃಷ್ಟಿಯಲ್ಲಿ ತಡೆ, ಕಪ್ಪುರಂಧ್ರಗಳು(ಸೆಂಟ್ರಲ್ ಸ್ಕೊಟೊಮಸ್), ಬೆಳಕಿನ ಸಂವೇದನೆ (ಫೋಟೋ ಫೋಬಿಯಾ), ದೃಷ್ಟಿ ಗ್ರಹಿಕೆಯಲ್ಲಿ ತೊಂದರೆ(ಕ್ರೊಮಟೊಪ್ಸಿಯಾ) ಮತ್ತು ತಲೆನೋವುಗಳಿಗೆ ಒಳಗಾಗುತ್ತಾರೆ. ಆದುದರಿಂದ ಬರಿಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಿಸುವುದು ಒಳ್ಳೆಯದಲ್ಲ ಎಂದು ಅವರು ಸಲಹೆ ನೀಡಿದ್ದಾರೆ.

ಗ್ರಹಣ ವೀಕ್ಷಿಸುವಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ: ಈ ಮಹತ್ತರ ಖಗೋಳ ಘಟನೆಯನ್ನು ಆನಂದಿಸಲು ಗ್ರಹಣದ ಕನ್ನಡಕ ಅಥವಾ ಸೋಲಾರ್ ಫಿಲ್ಟರ್‌ಗಳ ಮೂಲಕ ವೀಕ್ಷಿಸಬಹುದು. ಈ ಕನ್ನಡಕಗಳು/ಫಿಲ್ಟರ್‌ಗಳು ಕೆಲವು ಕನಿಷ್ಠ ಸುರಕ್ಷತೆಯ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

ಗ್ರಹಣ ವೀಕ್ಷಣೆ ಕನ್ನಡಕಗಳು ಐಎಸ್‌ಒ ಮಾನ್ಯತೆ ಪಡೆದಿರಬೇಕು. ಅವು ಯಾವುದೇ ದೋಷಗಳು, ಗೀರುಗಳಿಂದ ಹೊರತಾಗಿರಬೇಕು. ಕೈಗಳಲ್ಲಿ ಹಿಡಿದು ವೀಕ್ಷಿಸುವವರು ಎರಡೂ ಕಣ್ಣುಗಳು ಮುಚ್ಚುವಷ್ಟು ದೊಡ್ಡದಾಗಿರಬೇಕು. ಸೋಲಾರ್ ಫಿಲ್ಟರ್‌ಗಳನ್ನು ಇರಿಸಿಕೊಳ್ಳುವಾಗ ಮತ್ತು ತೆಗೆಯುವಾಗ ನೀವು ಸೂರ್ಯನನ್ನು ವೀಕ್ಷಿಸದಂತೆ ಎಚ್ಚರ ವಹಿಸಬೇಕು.

ನೀವು ಫಿಲ್ಟರ್ ಅನ್ನು ಯಾರೊಂದಿಗೆ ಬೇಕಿದ್ದರೂ ಹಂಚಿಕೊಳ್ಳಬಹುದು. ಮಕ್ಕಳು ಕೈಗಳಲ್ಲಿ ಹಿಡಿದು ವೀಕ್ಷಿಸುವ ಸಾಧನ ಅಥವಾ ಗ್ರಹಣ ವೀಕ್ಷಿಸುವ ಕನ್ನಡಕಗಳನ್ನು ಸರಿಯಾಗಿ ಬಳಸುತ್ತಾರೆಂದು ದೃಢೀಕರಿಸಿಕೊಳ್ಳಿ ಎಂದು ಭುಜಂಗಶೆಟ್ಟಿ ಇದೇ ವೇಳೆ ಸೂಚಿಸಿದ್ದಾರೆ.

ಈ ಸಾಧನಗಳು ಬೇಡ: ಸನ್‌ಗ್ಲಾಸ್‌ಗಳು, ಮನೆಯಲ್ಲಿ ನಿರ್ಮಿಸಲಾದ ಅಥವಾ ಪೊಲರೈಸ್ಡ್ ಫಿಲ್ಟರ್‌ಗಳು, ಎಕ್ಸ್-ರೇ ಫಿಲ್ಮ್, ಡೆವಲಪ್ ಆಗದ ಫಿಲ್ಮ್ ಅಥವಾ ಸ್ಮೋಕ್ಡ್ ಗ್ಲಾಸ್ ಮೂಲಕ ಸೂರ್ಯಗ್ರಹಣ ವೀಕ್ಷಣೆ ಸುರಕ್ಷಿತವಲ್ಲ. ಏಕೆಂದರೆ ಇವು ನಿಮ್ಮ ಕಣ್ಣುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲಾರವು. ಫಿಲ್ಟರ್‌ಗಳನ್ನು ಹೊಂದಿಲ್ಲದ ಟೆಲಿಸ್ಕೋಪ್‌ಗಳು ಅಥವಾ ಬೈನಾಕ್ಯುಲರ್‌ಗಳು ಬಳಕೆಗೆ ಸುರಕ್ಷಿತವಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಸೂರ್ಯಗ್ರಹಣ ವೀಕ್ಷಣೆಯ ಅತ್ಯಂತ ಸುರಕ್ಷಿತ ವಿಧಾನ:

‘ಅತ್ಯಂತ ಸುರಕ್ಷಿತವಾಗಿ ಅಪರೂಪದ ಸೂರ್ಯಗ್ರಹಣ ವೀಕ್ಷಣೆಯೆಂದರೆ ನೇರ ಪ್ರಸಾರ ವೀಕ್ಷಿಸುವುದು. ಇದರ ಮೂಲಕ ನೀವು ನಿಮ್ಮ ಪ್ರದೇಶದಲ್ಲಿ ಕಾಣದ 2019ರ ವಿಶೇಷ ಸೂರ್ಯಗ್ರಹಣವನ್ನೂ ನೇರವಾಗಿ ವೀಕ್ಷಿಸಬಹುದು. ಸಂತೋಷದ ಹಾಗೂ ಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆ ನಿಮ್ಮದಾಗಲಿ’

Please follow and like us:
error