ಗಾಂಧಿ ಹತ್ಯೆಯಲ್ಲಿ RSS ಪಾತ್ರವಿರಲಿಲ್ಲವೇ?

ಸರ್ದಾರ್ ಪಟೇಲ್ ಆರೆಸ್ಸೆಸ್ಸನ್ನು ಮೆಚ್ಚಿಕೊಂಡಿದ್ದರೇ?

ಗಾಂಧಿ ಹತ್ಯೆಯಲ್ಲಿ RSS  ಪಾತ್ರವಿರಲಿಲ್ಲವೇ? ಸರ್ದಾರ್ ಪಟೇಲ್ ಆರೆಸ್ಸೆಸ್ಸನ್ನು ಮೆಚ್ಚಿಕೊಂಡಿದ್ದರೇ?
ಹೇಳಿಕೆ:  ಗಾಂಧಿ ಕೊಲೆಯಲ್ಲಿಗಾಂಧಿ ಹತ್ಯೆಯಲ್ಲಿ RSS  ಪಾತ್ರವಿರಲಿಲ್ಲವೇ? ಸರ್ದಾರ್ ಪಟೇಲ್ ಆರೆಸ್ಸೆಸ್ಸನ್ನು ಮೆಚ್ಚಿಕೊಂಡಿದ್ದರೇ? ಪಾತ್ರ ಏನೂ ಇರಲಿಲ್ಲ. ಹೀಗಂತ ಆಗ ದೇಶದ ಗೃಹಮಂತ್ರಿಗಳಾಗಿದ್ದ ಸರ್ದಾರ್ ಪಟೇಲರೂ ಸಹ ಹೇಳಿಕೆ ಇತ್ತಿದ್ದರು.
ಹೇಳಿದವರು: ಎಲ್.ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡರು.
ಸತ್ಯಾಸತ್ಯತೆ: ಗಾಂಧಿಯನ್ನು ಕೊಂದ ಬಂದೂಕು RSS ದಲ್ಲ. ಆದರೆ ಗುಂಡುಗಳು RSS ನದ್ದೇ.
         ಸರ್ದಾರ್ ಪಟೇಲರು ಗಾಂಧಿ ಹತ್ಯೆಯ ಬೇಕಾದ ಹಿನ್ನೆಲೆಯನ್ನು ಆರೆಸ್ಸೆಸ್ ಒದಗಿಸಿತೆಂದೂ ಹೇಳಿ ದ್ದರು. ಮತ್ತು ಆರೆಸ್ಸೆಸ್ ಪ್ರಣೀತ ರಾಷ್ಟ್ರೀಯತೆಯನ್ನು ಮೆಚ್ಚಿಕೊಳ್ಳುತ್ತಲೇ ಆರೆಸ್ಸೆಸ್ ಕಾಂಗ್ರೆಸ್‌ನ ಭಾಗವಾಗಿ ಕಾರ್ಯನಿರ್ವಹಿಸಬೇಕೆಂದು ಭಾವಿಸಿದ್ದರು.
ಕಾರಣಗಳು: 1.ಕಳೆದ ಮಾರ್ಚ್ 5ರಂದು ಮಹಾರಾಷ್ಟ್ರದ ಠಾಣೆಯಲ್ಲಿ ರಾಹುಲ್ ಗಾಂಧಿಯವರು ಮಾಡಿದ ಪ್ರಚಾರ ಭಾಷಣವೊಂದರಲ್ಲಿ ದೇಶದ ಪಿತಾಮಹ ಗಾಂಧಿಯನ್ನು ಕೊಂದದ್ದು ಆರೆಸ್ಸೆಸ್. ಆ ಸಂಘಟನೆಯವೇ ಆದ ಬಿಜೆಪಿಯವರು ಈಗ ಮಹಾತ್ಮ ಗಾಂಧಿಯ ಬಗ್ಗೆ, ಸರ್ದಾರ್ ಪಟೇಲರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕೂಡಲೇ ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಜೆಪಿಗಳು ರಾಹುಲ್‌ಗೆ ದೇಶದ ಇತಿಹಾಸವೇ ಗೊತ್ತಿಲ್ಲ. ಗಾಂಧಿಯನ್ನು ಕೊಂದಿದ್ದು ಆರೆಸ್ಸೆಸ್ ಅಲ್ಲವೆಂದು ನ್ಯಾಯಾಲಯವೂ ಹೇಳಿದೆ ಮತ್ತು ಆಗಿನ ಗೃಹಮಂತ್ರಿ ಸರ್ದಾರ್ ಪಟೇಲರೂ ಹೇಳಿದ್ದಾರೆ ಎಂದು ಪ್ರತಿವಾದ ಹೂಡಿದ್ದಾರೆ. ಹಾಗೂ ಕೆಲವು ಅತ್ಯುತ್ಸಾಹಿ ಬೆಜೆಪಿಗಳು ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಮೊಕದ್ದಮೆ ಯನ್ನೂ ದಾಖಲಿಸಿದ್ದಾರೆ.
2.ತಮ್ಮ ವಾದದ ಸಮರ್ಥನೆಗೆ ಬಿಜೆಪಿಗಳು ಮುಂದಿಡುತ್ತಿರುವ ಸಂಗತಿಯೆಂದರೆ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಪ್ರಾರಂಭದಲ್ಲಿ ಆರೆಸ್ಸೆಸ್ ಸದಸ್ಯನಾಗಿದ್ದರೂ 1940ರ ನಂತರ ಆತ ಆರೆಸ್ಸೆಸ್‌ನ ಸಖ್ಯ ತೊರೆದಿದ್ದ, ಮತ್ತು ಹಿಂದೂ ಮಹಾಸಭಾದ ಕಾರ್ಯಕರ್ತನಾಗಿದ್ದ. ಆದ್ದರಿಂದ ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಪಾತ್ರವಿದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದು.
3.ಹಾಗೆಯೇ ಆಗಿನ ಗೃಹಮಂತ್ರಿಯಾಗಿದ್ದ ಸರ್ದಾರ್ ಪಟೇಲರು ಆರೆಸ್ಸೆಸ್‌ನ ಅಭಿಮಾನಿ ಯಾಗಿದ್ದರು. ನೆಹರೂ ಅವರ ಒತ್ತಾಯದ ಕಾರಣಕ್ಕೆ ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತೇ ವಿನಃ ಸರ್ದಾರ್ ಅವರಿಗೆ ಆರೆಸ್ಸೆಸ್ ಅನ್ನು ನಿಷೇಧಿಸಬೇಕಂತಿರಲಿಲ್ಲ. ಏಕೆಂದರೆ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಕೈವಾಡ ವಿರಲಿಲ್ಲ ಎಂಬುದರ ಬಗ್ಗೆ ಅವರಿಗೆ ಖಾತರಿಯಿತ್ತು ಎಂಬುದು ಬಿಜೆಪಿ ಮತ್ತು ಆರೆಸ್ಸೆಸ್ಸಿಗರ ವಾದ.
4.ಹೀಗಾಗಿ ಈ ವಾದದಲ್ಲಿರುವ ಎರಡು ಅಂಶಗಳನ್ನು ಪ್ರತ್ಯೇಕವಾಗಿ ಗಮನಿಸಬೇಕಿದೆ. ಅ) ನಾಥೂರಾಮ್ ಗೋಡ್ಸೆಗೂ ಆರೆಸ್ಸೆಸ್ಸಿಗೂ ಸಂಬಂಧವಿರಲಿಲ್ಲವೇ? ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ಸಿನ ಪಾತ್ರವೇನಿತ್ತು? ಆ) ಮತ್ತು ಆರೆಸ್ಸೆಸ್ಸಿನ ಬಗ್ಗೆ ಪಟೇಲರಿಗೆ ಯಾವ ಅಭಿಪ್ರಾಯವಿತ್ತು?
 5. ನಾಥೂರಾಮ್ ಗೋಡ್ಸೆಯೇ ತನ್ನ ಹೇಳಿಕೆ ಯಲ್ಲಿ ಒಪ್ಪಿಕೊಂಡಿರುವಂತೆ ಆತನ ಬಾಲ್ಯದಲ್ಲಿ ಮತ್ತು ತಾರುಣ್ಯದಲ್ಲಿ ಆತ ಸದಾ ಆರೆಸ್ಸೆಸ್ಸಿನ ಸದಸ್ಯನಾಗಿದ್ದ. ಆತನ ವಿಚಾರಧಾರೆಯನ್ನೂ ತಿದ್ದಿ ತೀಡಿರುವುದೇ ಆರೆಸ್ಸೆಸ್ಸು. ( ಗಾಂಧಿಯವರ ಮರಿಮಗ ತುಷಾರ್ ಗಾಂಧಿ ಬರೆದಿರುವ “Let’s Kill Gandhi !”: A Chronicle of His Last Days, the Conspiracy, Murder, investigation and trial). 
. 6. ನಾಥೂರಾಮ ಗೋಡ್ಸೆ ಜೊತೆ ಈ ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡು 14 ವರ್ಷ ಜೈಲು ಶಿಕ್ಷೆ ಅನುಭವಿಸಿ 1964ರಲ್ಲಿ ಆತನ ಸಹೋದರ ಗೋಪಾಲ್ ಗೋಡ್ಸೆ ಜೈಲಿನಿಂದ ಹೊರಬಂದಾಗ ಆರೆಸ್ಸೆಸ್ಸು ಆತನಿಗೆ ಭವ್ಯ ಸ್ವಾಗತ ಕೋರಿತು. 7.1993ರಲ್ಲಿ ಆತ  Why I Assassinated Mahatma Gandhi 
ಎಂಬ ಪುಸ್ತಕ ಬರೆದಾಗ ಪತ್ರಿಕೆಗಳಿಗೆ ಸುದೀರ್ಘ ಸಂದರ್ಶನವಿತ್ತಿದ್ದ. 1994ರ ಜನವರಿ 28ರಂದು Frontline ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟವಾದ ಉತ್ತರವನ್ನಿತ್ತಿದ್ದಾನೆ. ಅದರ ಆಯ್ದ ಪಠ್ಯವಿದು:
ಪ್ರ: ನೀವು ಆರೆಸ್ಸೆಸ್‌ನ ಭಾಗವಾಗಿದ್ದಿರಾ?
     
ಗೋ: ನಾವು ಅಣ್ಣ ತಮ್ಮಂದಿರೆಲ್ಲಾ, ನಾಥೂರಾಮ್, ನಾನು ಮತ್ತು ಗೋವಿಂದ್ ಎಲ್ಲರೂ ಆರೆಸ್ಸೆಸ್ ನಲ್ಲಿದ್ದ್ದೆವು. ನಮ್ಮ ಮನೆಗಿಂತ ನಾವು ಆರೆಸ್ಸೆಸ್ ಶಾಖೆಗಳಲ್ಲೇ ಬೆಳೆದೆವೆಂದು ಬೇಕಾದರೂ ಹೇಳಬಹುದು. ಅದು ನಮ್ಮ ಕುಟುಂಬದಂತಿತ್ತು. ಪ್ರ:ನಾಥೂರಾಮ್ ಆರೆಸ್ಸೆಸ್‌ನಲ್ಲೇ ಉಳಿದು ಕೊಂಡಿದ್ದರಾ? ಅವರು ಆರೆಸ್ಸೆಸ್ಸನ್ನು ಎಂದೂ ಬಿಡಲಿಲ್ಲವೇ?
ಗೋ: ನಾಥೂರಾಮ್ ಆರೆಸ್ಸೆಸ್‌ನಲ್ಲಿ ಬೌದ್ಧಿಕ್ ಕಾರ್ಯವಾಹ್ ಆಗಿದ್ದರು. ಅವರು ತಮ್ಮ ಹೇಳಿಕೆಯಲ್ಲಿ ಆರೆಸ್ಸೆಸ್ ಬಿಟ್ಟನೆಂದು ಹೇಳಿದ್ದು ನಿಜ. ಆದರೆ ಆತ ಅದನ್ನು ಹೇಳಲು ನಿಜವಾದ ಕಾರಣವೇನೆಂದರೆ ಗಾಂಧಿ ಹತ್ಯೆಯ ನಂತರ ಗೋಳ್ವಾಲ್ಕರ್ ಮತ್ತು ಆರೆಸ್ಸೆಸ್ ಆ ವೇಳೆಗಾಗಲೇ ಸಾಕಷ್ಟು ತೊಂದರೆಗೊಳಗಾಗಿದ್ದರು. ಆದರೆ ಆತ ಆರೆಸ್ಸೆಸ್ ಅನ್ನು ಎಂದೂ ಬಿಟ್ಟಿರಲಿಲ್ಲ. ಹಾಗೆಯೇ ಆಡ್ವಾಣಿ ನಾಥೂರಾಮ್ 1933ರಲ್ಲೇ ಆರೆಸ್ಸೆಸ್ ಸಂಬಂಧ ತೊರೆದರು ಎಂದು ನೀಡುತ್ತಿರುವ ಹೇಳಿಕೆಯ ಬಗ್ಗೆ ಕೇಳಿದಾಗ:
   ಗೋ: ಈಗಾಗಲೇ ಅಡ್ವಾಣಿಯವರ ಈ ಹೇಳಿಕೆ ಅತ್ಯಂತ ಹೇಡಿತನದ್ದು ಅಂತ ಖಂಡಿಸಿದ್ದೇನೆ. ಬೇಕಿದ್ದರೆ ಆರೆಸ್ಸೆಸ್ಸು ಗಾಂಧಿಯನ್ನು ಗೋಡ್ಸೆ ಹೋಗಿ ಕೊಲ್ಲ ಬೇಕು ಎಂಬ ತೀರ್ಮಾನವನ್ನು ಹೊರಡಿಸಿರಲಿಲ್ಲ ಎಂದು ಬೇಕಾದರೆ ಹೇಳಬಹುದು. ಆದರೆ ಆತ ಆರೆಸ್ಸೆಸ್‌ಗೆ ಸೇರೇ ಇರಲಿಲ್ಲ ಎಂದು ಹೇಳಲಾಗುವುದಿಲ್ಲ. ಹೇಳಕೂಡದು. ಗಾಂಧಿ ಹತ್ಯೆಯಾದರೂ ಹಿಂದೂ ಮಹಾಸಭ ಆತನನ್ನು ತಮ್ಮವನಲ್ಲವೆಂದು ಬಿಟ್ಟುಕೊಡಲಿಲ್ಲ. ನಾಥೂರಾಮ್ ಆರೆಸ್ಸೆಸ್‌ನ ಬೌದ್ಧಿಕ ಕಾರ್ಯವಾಹ್ ಆಗಿದ್ದುಕೊಂಡೇ 1944ರಲ್ಲಿ ಹಿಂದೂ ಮಹಾಸಭಾವನ್ನು ಮಾಡಲು ಪ್ರಾರಂಭಿಸಿದ್ದ.
 7. ಹೀಗಾಗಿ ನಾಥೂರಾಮ್ ಗೋಡ್ಸೆ ಗಾಂಧಿ ಹತ್ಯೆ ಮಾಡುವಾಗಲೂ ಆರೆಸ್ಸೆಸ್ಸಿನ ಭಾಗವಾಗಿದ್ದ ಎಂಬುದು ಸಾಬೀತಾಗುತ್ತದೆ. ಇಷ್ಟಾದರೂ ಆತ ಅದೇ ಸಮಯದಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್‌ನ ನೆಚ್ಚಿನ ಭಂಟನಾಗಿದ್ದ ಎಂಬುದೂ ನಿಜವೇ. ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಭಾಗವಹಿಸದ ಈ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ದೇಶದಲ್ಲಿ ಹಿಂದೂ ಸಂಘಟನೆಯ ಹೆಸರಲ್ಲಿ ಮುಸ್ಲಿಮ್ ದ್ವೇಷವನ್ನು ಹಬ್ಬಿಸುವುದರಲ್ಲಿ ಮಾತ್ರ ಅವಳಿ ಸಹೋದರ ಪಾತ್ರವನ್ನೇ ನಿರ್ವಹಿಸುತ್ತಾ ಬಂದಿತ್ತು. ಒಂದು ಸಂಘಟನೆಯ ಸದಸ್ಯರು ಮತ್ತೊಂದು ಸಂಘಟನೆಯ ಪದಾಧಿಕಾರಿ ಆಗುವುದನ್ನು ಒಳಗೊಂಡಂತೆ ಎಲ್ಲ ಬಗೆಯ ಕೊಡುಕೊಳ್ಳೆಗಳು ಅವೆರಡು ಸಂಘಟನೆಗಳ ನಡುವೆ ನಡೆಯುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ವಿದೇಶಿ ಕಮ್ಯುನಿಸ್ಟ್ ಪ್ರಭಾವಕ್ಕೆ ಒಳಗಾಗದಂತೆ ತಡೆಯುವುದಕ್ಕಾದರೂ ಆರೆಸ್ಸೆಸ್ಸಿಗೆ ದೇಶ ರಕ್ಷಣೆಯಲ್ಲಿ ಅಧಿಕೃತ ಪಾತ್ರವನ್ನು ಕೊಡಬೇಕೆಂದು ಸ್ವತಂತ್ರ ಭಾರತದಲ್ಲಿ ಮಹಾಸಭಾದ ವತಿಯಿಂದ ಮಂತ್ರಿಯಾಗಿದ್ದ ಶಾಂ ಪ್ರಸಾದ್ ಮುಖರ್ಜಿ (ಇವರೇ ನಂತರ ಆರೆಸ್ಸೆಸ್ ಸಹಯೋಗದೊಂದಿಗೆ ಈಗಿನ ಬಿಜೆಪಿಯ ಹಿಂದಿನ ಅವತಾರವಾದ ಜನಸಂಘವನ್ನು 1951ರಲ್ಲಿ ಸ್ಥಾಪಿಸು ತ್ತಾರೆ) ಸರಕಾರವನ್ನು 1947-48ರಲ್ಲಿ ಒತ್ತಾಯಿಸಿದ್ದರು.
8. ಹಿಂದೂ ಮಹಾಸಭಾ ಮುಖ್ಯವಾಗಿ ದೇಶದ ಮಾಜಿ ರಾಜರುಗಳನ್ನು ಮತ್ತು ಊಳಿಗಮಾನ್ಯ ಭೂಮಾಲಕ ಶಕ್ತಿಗಳನ್ನು ಸಂಘಟಿಸುತ್ತಾ ಕಾಂಗ್ರೆಸ್‌ಗೆ ಬಲಪಂಥೀಯ ರಾಜಕೀಯ ಪರ್ಯಾಯ ಶಕ್ತಿಗಳನ್ನು ಧ್ರೂವೀಕರಿಸುವ ಗುರಿಯಿಟ್ಟುಕೊಂಡಿತ್ತು. ಆರೆಸ್ಸೆಸ್ ಅದಕ್ಕೆ ಪೂರಕವಾಗಿ ಸಮಾಜದಲ್ಲಿ ಸಾಂಸ್ಕೃತಿಕ್ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಿಂದೂತ್ವವನ್ನು ಪುನರುಜ್ಜೀವಿಸುವ ಮತ್ತು ಕಮ್ಯುನಿಸಂ ಅಥವಾ ಇನ್ಯಾವುದೇ ಪ್ರಗತಿಪರ ರಾಜಕಾರಣ ಮತ್ತು ಚಿಂತನೆ ಬೇರುಬಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿತ್ತು. ಆಗ ಬಹಳಷ್ಟು ಜನರು ಆರೆಸ್ಸೆಸ್ಸನ್ನು ಹಿಂದೂ ಮಹಾಸಭಾದ ಯುವ ಸಂಘಟನೆಯೆಂದೇ ಭಾವಿಸಿದ್ದರು. ಹಾಗೆ ನೋಡಿದರೆ ಆರೆಸ್ಸೆಸ್‌ನ ಸಿದ್ಧಾಂತದ ಆತ್ಮವಾದ ಹಿಂದೂತ್ವ ಪರಿಕಲ್ಪನೆಯನ್ನು ಕೊಟ್ಟಿದ್ದೇ ಹಿಂದೂ ಮಹಾಸಭಾದ ಸಾವರ್ಕರ್. ಮತ್ತು 1966ರಲ್ಲಿ ಸಾವರ್ಕರ್ ಸತ್ತಾಗ ಆತನ ಅಂತಿಮ ಮೆರವಣಿಗೆಯಲ್ಲಿ ಆರೆಸ್ಸೆಸ್‌ನ 2000 ಕಾರ್ಯಕರ್ತರು ಭಾಗವಹಿಸಿದ್ದರು. ಹೀಗಾಗಿ ನಾಥೂರಾಮ್ ಕೊನೆ ಗಳಿಗೆಯವರಿಗೂ ಏಕಕಾಲದಲ್ಲಿ ಹಿಂದೂ ಮಹಾಸಭಾದ ಮತ್ತು ಆರೆಸ್ಸೆಸ್‌ನ ಕಾರ್ಯಕರ್ತನಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.
9.ಇನ್ನು ಆಗಿನ ಗೃಹಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಸರ್ದಾರ್ ಪಟೇಲರು ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರವಿರಲಿಲ್ಲ ಎಂದು ಭಾವಿಸಿದ್ದರೇ ಎಂಬ ವಿಷಯ. ಗಾಂಧಿ ಹತ್ಯೆಯಾದ ಕೂಡಲೇ ಆರೆಸ್ಸೆಸ್ಸನ್ನು ನಿಷೇಧಿಸಿ ಮಹಾಸಭಾದ ಕಾರ್ಯಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಿದ್ದು ಆಗಿನ ಗೃಹಮಂತ್ರಿ ಪಟೇಲರೇ. ಸ್ವಾತಂತ್ರ ಮತ್ತು ದೇಶ ವಿಭಜನೆ ಏಕಕಾಲದಲ್ಲಿ ನಡೆದ ಆ ಹೊತ್ತಿನಲ್ಲಿ ಇಡೀ ದೇಶ ದೊಡ್ಡ ಕೋಮುವಾದಿ ನರಮೇದದ ಭೀಭತ್ಸ ಕಾಲಘಟ್ಟದಲ್ಲಿ ಹಾದುಹೋಗುತ್ತಿತ್ತು. ಪಾಕಿಸ್ತಾನದ ಮುಸ್ಲಿಮ್ ಮೂಲಭೂತವಾದಿಗಳು, ಭಾರತದ ಆರೆಸ್ಸೆಸ್ ಮತ್ತು ಮಹಾಸಭಾದಂಥ ಹಿಂದೂ ಕೋಮುವಾದಿಗಳು ಆಯಾ ದೇಶಗಳಲ್ಲಿ ಹಿಂದೂ ವಿರೋಧಿ ಮತ್ತು ಮುಸ್ಲಿಮ್ ವಿರೋಧಿ ಹತ್ಯಾಕಾಂಡ ಗಳಿಗೆ ಬೇಕಾದ ಮನಸ್ಸತ್ವ, ಆಯುಧ ಮತ್ತು ಸಂಘಟನೆಗಳನ್ನು ಪೂರೈಸುತ್ತಿದ್ದರಿಂದ ಲಕ್ಷಾಂತರ ಅಮಾಯಕ ಹಿಂದೂ ಮುಸ್ಲಿಮರ ಮಾರಣಹೋಮ ವಾಯಿತು. ಭಾರತದಿಂದ ಪಾಕಿಸ್ತಾನಕ್ಕೆ ಹೊರಗಟ್ಟಲಾಗು ತ್ತಿದ್ದ ಮುಸ್ಲಿಮ್ ನಿರಾಶ್ರೀತರು ಹೇಗೆ ದಾರುಣ ಕಥೆಗಳನ್ನು ತಮ್ಮಿಂದಿಗೆ ಕೊಂಡೊಯುತ್ತಿದ್ದರೋ ಅದೇ ರೀತಿ ಪಾಕಿಸ್ತಾನದಿಂದ ನಿರಾಶ್ರೀತರಾಗಿ, ಅಲ್ಲಿನ ಮುಸ್ಲಿಮ್ ಮೂಲಭೂತವಾದಿಗಳ ಕೊಲೆ-ಸುಲಿಗೆ- ಅತ್ಯಾಚಾರಗಳಿಗೆ ಬಲಿಯಾಗಿ ಭಾರತಕ್ಕೆ ಕಂಗೆಟ್ಟು ಬರುತ್ತಿದ್ದ ಹಿಂದೂಗಳು ಸಾವಿರಾರು ದಾರುಣ ಕಥೆಗಳನ್ನು ಹೊತ್ತು ತರುತ್ತಿದ್ದರು. ಇದು ಆರೆಸ್ಸೆಸ್ ಮತ್ತು ಹಿಂದು ಮಹಾಸಭಾಗಳಿಗೆ ದೇಶ ವಿಭಜನೆ ವಿರೋಧಿ ಮನೋಭಾವವನ್ನು ಮುಸ್ಲಿಂ ವಿರೋಧಿ ಮನೋಭಾವ ವಾಗಿ ಪರಿವರ್ತಿಸಲು ಪೂರಕವಾದ ವಾತಾವರಣ ಒದಗಿಸಿತ್ತು. ಇದನ್ನು ಬಳಸಿಕೊಂಡು ದೇಶದ ಎಲ್ಲ ಮುಸ್ಲಿಮರನ್ನೂ ಪಾಕಿಸ್ತಾನಕ್ಕೆ ಅಟ್ಟಬೇಕೆಂಬ ಇವರ ಕೋಮುದ್ವೇಷಿ ಹಿಂದೂತ್ವವಾದಿ ಅಜೆಂಡಾಗೆ ಪಾಕಿಸ್ತಾನದಿಂದ ಅವಮಾನಿತರಾಗಿ ಜರ್ಝರಿತರಾಗಿ ಬಂದಿದ್ದ ಹಿಂದೂ ನಿರಾಶ್ರೀತರಲ್ಲಿ ಒಳ್ಳೆಯ ಬೆಂಬಲ ಸಿಗಲು ಪ್ರಾರಂಭವಾಯಿತು. ಅದನ್ನು ಬಳಸಿಕೊಂಡು ಸ್ವಾತಂತ್ರ್ಯಾನಂತರದ ಭಾರತವನ್ನು ಹಿಂದೂ ರಾಷ್ಟ್ರದ ರೀತಿಯಲ್ಲಿ ಕಟ್ಟುವ ಹುನ್ನಾರವನ್ನು ಮಾಡಿದ್ದರು. ಮತ್ತು ಅದಕ್ಕೆ ಅಡ್ಡಿಯಾಗಿದ್ದ ಎಲ್ಲವನ್ನು ನಿವಾರಿಸಿಕೊಳ್ಳಬೇಕೆಂಬ ಅಜೆಂಡಾವನ್ನು ಹೊಂದಿದ್ದರು. ಇದನ್ನೇ ಪರೋಕ್ಷವಾಗಿ ಗಾಂಧಿ ಹತ್ಯೆ ವಿಚಾರನೆಗೆ ನೇಮಿಸಲಾಗಿದ್ದ ಕಪೂರ್ ಅಯೋಗವು ಹೇಳುತ್ತದೆ.
10. ಕಾಂಗ್ರೆಸ್ ಒಳಗೂ ಆರೆಸ್ಸೆಸ್‌ನ ಹಿತೈಷಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ಹಿಂದೂ ಮಹಾಸಭಾದ ಶಾಂ ಪ್ರಸಾದ್ ಮುಖರ್ಜಿಯೇ ಮಂತ್ರಿಯೂ ಆಗಿದ್ದರು. ದೇಶದ ಪೊಲೀಸ್ ಮತ್ತು ಅಧಿಕಾರಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಆರೆಸ್ಸೆಸ್‌ನ ಸದಸ್ಯರೂ ಇದ್ದರು. ಇವರೆಲ್ಲರೂ ಭಾರತವನ್ನು ಧರ್ಮ ನಿರಪೇಕ್ಷ ಮತ್ತು ಪ್ರಜಾತಂತ್ರ ರಾಷ್ಟ್ರವನ್ನಾಗಿ ಮಾಡುವ ಕ್ರಮದ ವಿರುದ್ಧವಿದ್ದರು. (The Rashtriya Swayamsevak Sangh-Walter Andersen)
11.ಸರ್ದಾರ್ ಪಟೇಲರು ಇಂಥ ಬಲಪಂಥೀಯ ಶಕ್ತಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮೇಲೆ ಕಮ್ಯುನಿಷ್ಟರ ಪ್ರಭಾವ ಹೆಚ್ಚಾಗದಂತೆ, ಊಳಿಗಮಾನ್ಯ ಶಕ್ತಿಗಳು ಇನ್ನೂ ಹೆಚ್ಚು ಅಧಿಕಾರ ಕಳೆದುಕೊಳ್ಳದಂತೆ ಮಾಡಬೇಕೆಂದರೆ ಆರೆಸ್ಸೆಸ್ ಬೆಂಬಲ ಬೇಕೆಂದೇ ಅವರೇ ಭಾವಿಸಿದ್ದರು. ನೆಹರೂ ಮತ್ತು ಅಂಬೇಡ್ಕರ್ ಅಂಥವರನ್ನು ಮಟ್ಟ ಹಾಕಲು ಆರೆಸ್ಸೆಸ್ ಕಾಂಗ್ರೆಸ್ ಒಳಗೇ ಬಂದು ತನ್ನ ಕೈಬಲಪಡಿಸಬೇಕೆ ಹೊರತು ಹೊರಗೆ ವಿದ್ವಂಸಕ ಕಾರ್ಯಗಳಲ್ಲಿ ತೊಡಗಬಾರದೆಂಬುದು ಅವರ ಸಲಹೆಯಾಗಿತ್ತು.
12. ಹೀಗಾಗಿ ಆರೆಸ್ಸೆಸ್ಸನ್ನು ವಿರೋಧಿಸುವ ಭರದಲ್ಲಿ ಪಟೇಲರು ನೆಹರೂ, ಗಾಂಧಿ ಅಥವಾ ಈ ದೇಶದ ಪ್ರಗತಿಪರ ಧಾರೆಯ ಜೊತೆಗಿದ್ದರು ಎಂದು ಭಾವಿಸು ವುದು ತಪ್ಪು. ಸರ್ದಾರ್ ಪಟೇಲರು ಕಾಂಗ್ರೆಸ್‌ನೊಳಗೇ ಇದ್ದ ಬಲಪಂಥೀಯ ಧಾರೆಯ ನಾಯಕರಾಗಿದ್ದರು.
13.ಆದರೂ ಗಾಂಧಿ ಹತ್ಯೆಯನ್ನು ಅವರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಗಾಂಧಿ ಹತ್ಯೆಯಾದ ನಂತರ ಆರೆಸ್ಸೆಸ್ ಮೇಲೆ ನಿಷೇಧ ಹೇರುವುದರಲ್ಲಿ ಅವರೇ ಮುಂದಾಗಿದ್ದೂ ಸತ್ಯ. 1948ರ ಫೆಬ್ರವರಿಯಲ್ಲಿ ಗಾಂಧಿ ಕೊಲೆಯ ಆರೋಪದ ಮೇಲೆ ಆರೆಸ್ಸೆಸ್ಸನ್ನು ನಿಷೇಧಿಸ ಲಾಯಿತು. ಆ ನಿಷೇಧದ ಆದೇಶ ಕೊಟ್ಟವರು ಗೃಹಮಂತ್ರಿ ಪಟೇಲರೇ. 1948ರ ಫೆಬ್ರವರಿ 2ರಂದು ಭಾರತದ ಗೃಹ ಸಚಿವಾಲಯದ ಹೊರಡಿಸಿದ ನಿಷೇಧದ ಆದೇಶದಲ್ಲಿ: ನಾಡಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಭಾರತದ ಸ್ವಾತಂತ್ರಕ್ಕೆ ಧಕ್ಕೆ ತರುತ್ತಿರುವ ಮತ್ತು ಅದರ ಹೆಸರಿಗೆ ಕಳಂಕ ಹಚ್ಚುತ್ತಿರುವ ಶಕ್ತಿಗಳನ್ನು ಬುಡ ಸಮೇತ ಕಿತ್ತೊಗೆಯುವ ಸರಕಾರದ ದೃಢ ನಿರ್ಧಾರದ ಭಾಗವಾಗಿ ಆರೆಸ್ಸೆಸನ್ನು ನಿಷೇಧಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
14. ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಪಾತ್ರವಿದ್ದ ಬಗ್ಗೆ ಪಟೇಲರಿಗೆ ಕಿಂಚಿತ್ತು ಸಂದೇಹವಿರಲಿಲ್ಲ. 1948ರ ಫೆಬ್ರವರಿ 27ರಂದು ನೆಹರೂಗೆ ಬರೆದ ಪತ್ರದಲ್ಲಿ ಪಟೇಲರು:
ಸಾವರ್ಕರ್ ಅವರ ನೇರ ಮಾರ್ಗದರ್ಶನದಲ್ಲಿ ಮಹಾಸಭಾದ ಹಿಂದೂ ಮತೋನ್ಮತ್ತ ಗುಂಪೊಂದು ಈ ಹತ್ಯೆಯ ಸಂಚು ಮಾಡಿ ಹತ್ಯೆ ಮಾಡಿದೆ….ಗಾಂಧಿ ಹತ್ಯೆಯನ್ನು ಆರೆಸ್ಸೆಸ್ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂಭ್ರಮಪಟ್ಟಿದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
15.1948ರ ಜುಲೈ 18ರಂದು ಹಿಂದೂ ಮಹಾಸಭಾದ ಮುಖಂಡ ಶಾಂ ಪ್ರಸಾದ್ ಮುಖರ್ಜಿಗೆ ಬರೆದ ಪತ್ರದಲ್ಲಿ ಮತ್ತೊಮ್ಮೆ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್‌ಗೆ ಹೇಗೆ ಮಹತ್ತರ ಪಾತ್ರವಿತ್ತೆಂಬುದನ್ನು ವಿವರಿಸುತ್ತಾರೆ:
 ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳ ಬಗ್ಗೆ ನಮ್ಮ ಸರಕಾರದ ಪಡೆದುಕೊಂಡಿರುವ ವರದಿಗಳು ಸ್ಪಷ್ಟವಾಗಿವೆ. ಈ ಎರಡು ಸಂಘಟನೆಗಳು ಅದರಲ್ಲೂ ಆರೆಸ್ಸೆಸ್ ಸಮಾಜದಲ್ಲಿ ಬಿತ್ತರಿಸಿದ ಮತೋನ್ಮತ್ತ ಮತ್ತು ವಿಷಕಾರಿ ಚಿಂತನೆಗಳ ಫಲವಾಗಿಯೇ ದೇಶದಲ್ಲಿ ಇಂಥಾ ಆಘಾತಕಾರಿ ಹತ್ಯೆಯಾಗುವಂಥ ವಾತಾವರಣ ಸೃಷ್ಟಿಯಾಯಿತು
16.1948ರ ಸೆಪ್ಟೆಂಬರ್ 11ರಂದು ಆಗಿನ ಆರೆಸ್ಸೆಸ್‌ನ ಸರಸಂಘಚಾಲಕ ಗೋಳ್ವಾಲ್ಕರ್‌ಗೆ ಬರೆದ ಪತ್ರದಲ್ಲಿ ಮತ್ತೊಮ್ಮೆ ಇದನ್ನು ಸ್ಪಷ್ಟಪಡಿಸುತ್ತಾರೆ:
ಆರೆಸ್ಸೆಸ್ ನಾಯಕರ ಎಲ್ಲ ಭಾಷಣಗಳು ಅತ್ಯಂತ ಅಪಾಯಕಾರಿ ಕೋಮುವಿಷದಿಂದ ಜಿನುಗುತ್ತಿರುತ್ತದೆ. ಹಿಂದೂಗಳನ್ನು ತಮ್ಮ ಸ್ವರಕ್ಷಣೆಗೆ ಸಂಘಟಿಸಬೇಕೆಂದರೆ ಕೋಮುವಿಷವನ್ನೇನೂ ಹರಡಬೇಕಿಲ್ಲ. ಈ ವಿಷದ ಹರಡುವಿಕೆಯಿಂದಾಗಿಯೇ ದೇಶ ಗಾಂಧಿಯಂಥ ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಕಾಯಿತು. (The Rashtriya Swayamsevak Sangh- Walter Andersen)
17. ಹಾಗೆ ನೋಡಿದರೆ 1948ರ ಜನವರಿ 30ರಂದು ನಡೆದ ಗಾಂಧಿ ಹತ್ಯೆ ನಡೆಯುವ ಮುಂಚೆ ಕನಿಷ್ಠ ಆರು ಬಾರಿ ಗಾಂಧಿ ಹತ್ಯಾ ಪ್ರಯತ್ನಗಳು ನಡೆದಿವೆ. ಗಾಂಧಿ ಹತ್ಯೆ ನಡೆದ ಜನವರಿ 30 , 1948ಕ್ಕೆ 10 ದಿನ ಮುಂಚೆ ಜನವರಿ 20 ರಂದು ಕೂಡಾ ಬಾಂಬ್ ಎಸೆದು ಕೊಲ್ಲುವ ಪ್ರಯತ್ನ ನಡೆದಿತ್ತು. ಮದನ್‌ಲಾಲ್ ಕಾಶ್ಮೀರಿಲಾಲ್ ಪಾವಾ ಎಂಬ ನಿರಾಶ್ರೀತನಿಂದ. ಆತನಿಗೆ ಯೋಜನೆ ರೂಪಿಸಿಕೊಟ್ಟಿದ್ದು ಗೋಡ್ಸೆ. ವಾಸ್ತವವಾಗಿ ಪಾವಾ ಅಂದೇ ಸೆರೆ ಸಿಕ್ಕಿ ಇವರೆಲ್ಲರ ಬಗ್ಗೆ ಮಾಹಿತಿ ಕೊಟ್ಟಿದ್ದರೂ ಸರಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ.
18. ಆರೆಸ್ಸೆಸ್ ನಿಷೇಧವಾದ 18 ತಿಂಗಳ ನಂತರ 1949ರಲ್ಲಿ ಅದರ ಮೇಲಿನ ನಿಷೇಧವನ್ನು ವಾಪಸ್ ತೆಗೆದುಕೊಳ್ಳಲಾಯಿತು. ಹಾಗೆಯೇ ಸಾವರ್ಕರ್ ಅವರನ್ನೂ ನಿರ್ದೋಷಿಯೆಂದು ಘೋಷಿಸಲಾಯಿತು. ಆರೆಸ್ಸೆಸ್ ತನ್ನ ಕಾರ್ಯಕರ್ತರ ಯಾದಿಯನ್ನು ಹೇಗಿದ್ದರೂ ಇಟ್ಟುಕೊಳ್ಳುವುದಿಲ್ಲವಾದ್ದರಿಂದ ಮಾಲೆಗಾಂವ್ ಸ್ಫೋಟದ ನಂತರ ಹೇಗೆ ಸಾದ್ವಿ ಪ್ರಜ್ಞಾಸಿಂಗ್ ತನ್ನ ಸದಸ್ಯರೇ ಅಲ್ಲವೆಂದು ಹೇಳಿತ್ತೋ ಹಾಗೆಯೇ ಈ ಪ್ರಕರಣದಲ್ಲೂ ಸುಳ್ಳುಹೇಳಿ ಬಚಾವಾಯಿತು. ಸಾವರ್ಕರ್ ಮೇಲಿದ್ದ ಆರೋಪವನ್ನು ಸಾಬೀತು ಮಾಡಲು ಬೇಕಿದ್ದ ಪುರಾವೆಯನ್ನು ಒದಗಿಸಿಕೊಳ್ಳಲು ಪ್ರಾಸಿಕ್ಯೂಷನ್ ವಿಫಲವಾಯಿತು. ಕೇವಲ ಹತ್ಯೆಕೋರರ ಜೊತೆ ಗೊತ್ತಿಲ್ಲದೆ ಫೋನ್ ಸಂಭಾಷಣೆ ಮಾಡಿದರೂ ಅಪ್ಝಲ್ ಗುರುವನ್ನು ಗಲ್ಲಿಗೇರಿಸಿದಂಥ ಕಾನೂನುಗಳು ಆಗ ಇರಲಿಲ್ಲ. ಇದ್ದರೂ ಸರಕಾರದಲ್ಲಿ ಮತ್ತು ಮಂತ್ರಿಮಂಡಲದಲ್ಲಿ ಇದ್ದ ಹಿಂದೂತ್ವವಾದಿ ಶಕ್ತಿಗಳು ಸಾವರ್ಕರ್ ಅನ್ನು ಗಲ್ಲಿಗೇರಲು ಬಿಡುತ್ತಿರಲಿಲ್ಲ ಎನ್ನುವುದು ಬೇರೆ ವಿಷಯ. 19.ಆದರೂ ಆರೆಸ್ಸೆಸ್ ಮೇಲೆ ನಿಷೇಧ ತೆಗೆಯುವ ಮುನ್ನ ಆರೆಸ್ಸೆಸ್ ತನ್ನ ರಾಜಕೀಯ ಚಟುವಟಿಕೆ ಬಿಟ್ಟು ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವ, ದೇಶದ ಸಂವಿಧಾನವನ್ನು ಗೌರವಿಸುವ ಮುಚ್ಚಳಿಕೆ ಪಡೆದು ಕೊಳ್ಳಲಾಯಿತು.()
20. ಆದ್ದರಿಂದಾಗಿಯೇ, ಅ) ಗಾಂಧಿ ಹತ್ಯೆಯಲ್ಲಿ ಮತ್ತು ಆ ಹಿಂದಿನ ಬಹುಪಾಲು ಕೋಮು ಗಲಭೆಗಳಲ್ಲಿ ಮತ್ತು ದೇಶದಲ್ಲಿ ಮತೋನ್ಮತ್ತ ವಾತಾವರಣ ಉಂಟುಮಾಡುವುದರಲ್ಲಿ ಆರೆಸ್ಸೆಸ್‌ನ ಪಾತ್ರ ಅಗಾಧವಾಗಿತ್ತು. ಆ) ಸರ್ದಾರ್ ಪಟೇಲರು ಕಾಂಗ್ರೆಸ್ ಒಳಗೆ ಬಲಪಂಥೀಯ ರಾಜಕಾರಣದ ಹಿತೈಷಿಯಾಗಿದ್ದರೂ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ಸನ್ನು ದೋಷಿಯೆಂದು ಸ್ಪಷ್ಟವಾಗಿ ಭಾವಿಸಿದ್ದರು. ಆಕರಗಳು: 1.“Let’s Kill Gandhi !”: A Chronicle of His Last Days, the Conspiracy, Murder, investigation and trial- Tushar Gandhi
2.The Rashtriya Swayamsevak Sangh-Walter Andersen
3.Religious Dimensions of Indian Nationalism: A Study of RSS – Shamsul Islam
4.                                                                        photos by : internet
                                                                                                                           Varthabharati 
Please follow and like us:
error