ರಮಾಬಾಯಿ ಅಂಬೇಡ್ಕರ್ ಮಹಿಳೆಯರಿಗೆ ಆದರ್ಶ

 ಡಾ. ಅಂಬೇಡ್ಕರ್ ಯಶಸ್ವಿ ಹೋರಾಟದಲ್ಲಿ ಪತ್ನಿರಮಾಬಾಯಿ ಅವರ ಪಾತ್ರ ಅನನ್ಯ 
ಬಳ್ಳಾರಿ, ಜ. ೨೨:  ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಯಶಸ್ವಿ ಹೋರಾಟದ ಹಿಂದೆ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಪಾತ್ರ ಅನನ್ಯ.  ಪತಿಯನ್ನು ಸೂರ್ಯನಾಗಿಸುವ ಭರದಲ್ಲಿ ತನ್ನನ್ನೇ ಸುಟ್ಟುಕೊಳ್ಳುತ್ತಾ ಬದುಕಿದ ಮಹಾ ಮಾತೆ ಎಂದು ಹೋರಾಟಗಾರ ಧಾರವಾಡ ಜಿಲ್ಲಾ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯ ಲಕ್ಷ್ಮಣ ಬಕ್ಕಾಯಿ ಅವರು ಕೊಂಡಾಡಿದರು.
ನಗರದ ಸಂಸ್ಕೃತಿ ಪ್ರಕಾಶನ, ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಿಸೆಸ್ ಅಂಬೇಡ್ಕರ್ ರಂಗ ಕೃತಿ ಲೋಕಾರ್ಪಣೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಬಾ ಸಾಹೇಬರ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡಿದ ಧೀಮಂತ ಮಹಿಳೆ ರಮಾಬಾಯಿ. ಪ್ರತಿಯೊಬ್ಬ ಭಾರತೀಯ ಮಹಿಳೆ ಆಯಿ ಸಾಹೇಬ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 ಕೃತಿ ಪರಿಚಯಿಸಿದ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು,  ಡಾ. ಅಂಬೇಡ್ಕರ್ ಅವರು ಪ್ರಖರ ವಿಚಾರವಾದಿ. ಬದುಕು ಕಳೆದುಕೊಂಡವರ ಮರು ಬದುಕಿಗಾಗಿ ನಿರಂತರ ಸಂಘರ್ಷ ಮಾಡಿದವರು. ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಬದುಕಿನ ಎಲ್ಲ ಸಾಧನೆಗಳಿಗೆ ಮಹಾತಾಯಿ ರಮಾಯಿ ಅವರು ಬಹುದೊಡ್ಡ ಶಕ್ತಿಯಾಗಿ ಬೆಂಬಲಕ್ಕೆ ನಿಂತಿದ್ದರು.  ತಮ್ಮ ಬದುಕಿನಲ್ಲಿ ಯಾವತ್ತೂ ಸುಖವನ್ನು ಬಯಸದೆ ಪರರ ಏಳ್ಗೆ, ಸುಖದಲ್ಲಿ ಸಂತೋಷ ಕಾಣುತ್ತಿದ್ದ ರಮಾಯಿ  ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆ ಅಧ್ಯಕ್ಷ, ಪ್ರಕಾಶಕ ಸಿ.ಮಂಜುನಾಥ ಮಾತನಾಡಿ, ಧೀಮಂತ ಮಹಿಳೆ ರಮಾಬಾಯಿಯವರ ಜೀವನ ಕುರಿತ ರಂಗ ಕೃತಿ ಪ್ರಕಟಿಸುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಪತಿಯ ಮಹತ್ವಾಕಾಂಕ್ಷಿ ಹೋರಾಟಕ್ಕೆ ಕಿಂಚಿತ್ತು ಅಡ್ಡಿಯಾಗದೇ ನಿರಂತರ ಬೆಂಬಲ ನೀಡಿ  ಪ್ರೋತ್ಸಾಹಿಸದ ಮಹಾಮಾತೆ ರಮಾಯಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗ ಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರು ಕೃತಿ ಲೋಕಾರ್ಪಣೆಗೊಳಿಸಿದರು. 
ಕೃತಿಕಾರ ಡಾ. ಸಿದ್ರಾಮ ಕಾರಣಿಕ, ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಬಳ್ಳಾರಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಹೆಚ್. ತಿಪ್ಪೆಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ)ಯ ಉತ್ತರ ಕರ್ನಾಟಕದ ಅಧ್ಯಕ್ಷ ಕುರುಗೋಡು ಚನ್ನಬಸವರಾಜ್, ನಾಟ್ಯ ಕಲಾ ಸಂಘದ ಅಧ್ಯಕ್ಷೆ ಡಿ. ಇಂದ್ರಾಣಿ, ಹಿರಿಯ ಪತ್ರಕರ್ತ ವಿಜಯ ಕುಮಾರ್, ಜಾನಪದ ಗಾಯಕ ಎಸ್ ಎಂ ಹುಲುಗಪ್ಪ, ಸಂಘಟಕ ಡಾ. ಲಕ್ಕಿ ಪೃಥ್ವಿರಾಜ್ ಮತ್ತಿತರರು ಉಪಸಿತ್ಥರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕೃತಿಕಾರ ಡಾ.ಸಿದ್ರಾಮ ಕಾರಣಿಕ, ನಾಟಕ ನಿರ್ದೇಶಿಸಿದ ರಂಗ ಕರ್ಮಿ ಹಿಪ್ಪರಗಿ ಸಿದ್ಧರಾಮ, ರಮಾಬಾಯಿ ಪಾತ್ರಧಾರಿ  ಗಾಯತ್ರಿ ಸಲಾಪುರ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಪಿ. ಗಾದೆಪ್ಪ,  ಬಳ್ಳಾರಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಹೆಚ್. ತಿಪ್ಪೆಸ್ವಾಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ನಿಂಗಪ್ಪ ಅವರನ್ನು ವೇದಿಕೆ ಪರವಾಗಿ ಗೌರವಿಸಲಾಯಿತು. 
ಸಾಂಸ್ಕೃತಿಕ ಕಾರ್ಯಕ್ರಮಗಳು: ನಗರದ ಚಿಗುರು ಕಲಾ ತಂಡದ ಸದಸ್ಯರು ಹಾಗೂ ನಾಟ್ಯ ಕಲಾ ಸಂಘದ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಾಟಕ ಪ್ರದರ್ಶನ: ಬಳಿಕ ರಂಗ ಕರ್ಮಿ ಹಿಪ್ಪರಗಿ ಸಿದ್ಧರಾಮ ನಿರ್ದೇಶನದಲ್ಲಿ ಧಾರವಾಡದ ಕ್ರಿಯಾರಂಗ ಮತ್ತು ಗಣಕರಂಗ ಸಂಸ್ಥೆಯ ಕಲಾವಿದರು ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶಿಸಿದರು. 
ವೇದಿಕೆ ಅಧ್ಯಕ್ಷ ಸಿ ಮಂಜುನಾಥ್ ಸ್ವಾಗತಿಸಿದರು. ವಿನೋದ್ ಎಂ ಚವ್ಹಾಣ್ ನಿರೂಪಿಸಿದರು. ಎಸ್ ಎಂ ಹುಲುಗಪ್ಪ ವಂದಿಸಿದರು.

Leave a Reply